ಪಣಜಿ: ಮೋದಿ ಸರ್ಕಾರದ ಮೇಲೆ ಟೀಕಾ ಪ್ರಹಾರ ನಡೆಸಿರುವ ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ ದೇಶದಲ್ಲಿ ಈಗ ಅಘೋಷಿತ ತುರ್ತುಪರಿಸ್ಥಿತಿಯನ್ನು ಹೇರಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿಯನ್ನು ಪ್ರಸ್ತಾಪಿಸುತ್ತಾ ಮಾತನಾಡಿದ ಅವರು ಇದು ಆಗ ಹೇರಲಾಗಿದ್ದ ತುರ್ತುಪರಿಸ್ಥಿತಿಗಿಂತ ಭಿನ್ನವಾಗಿದೆ ಎಂದರು. ಭಾರತದ ಆರ್ಥಿಕ ಪರಿಸ್ಥಿತಿ ಮತ್ತು ಪ್ರಜಾಪ್ರಭುತ್ವಕ್ಕೆ ಇರುವ ಸವಾಲುಗಳು ಎನ್ನುವ ವಿಚಾರವಾಗಿ ಭಾಷಣ ಮಾಡಿದ ಸಿನ್ಹಾ ಜಿಎಸ್ಟಿಯನ್ನು ತೆರಿಗೆ ಭಯೋತ್ಪಾದನೆ ಎಂದು ವ್ಯಾಖ್ಯಾನಿಸಿದರು."ನಾವು ಪ್ರತಿಪಕ್ಷದಲ್ಲಿದ್ದಾಗ ಯುಪಿಎ ಸರ್ಕಾರವು ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆ ಎಂದು ಟೀಕಿಸುತ್ತಿದ್ದೆವು ಮತ್ತು ನಾವು ಅಧಿಕಾರಕ್ಕೆ ಬಂದ ನಂತರ ಅಂತಹ ವ್ಯವ್ಯಸ್ಥೆಯನ್ನು ಕೊನೆಗೊಳಿಸುತ್ತೇವೆ ಎಂದು ಹೇಳುತ್ತಿದ್ದೆವು. ಆದರೆ, ಈಗ ಪ್ರಸಕ್ತ ಮೋದಿ ಸರ್ಕಾರವು ಇದನ್ನು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಹೇರುತ್ತಿದೆ" ಎಂದು ಅವರು ಆಪಾಧಿಸಿದರು.