ಪಾಟ್ನಾ: 2020ರಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಎನ್ಡಿಎ ನಾಯಕತ್ವ ವಹಿಸುವವರಾರು ಎಂಬ ಉಹಾಪೋಹಗಳಿಗೆ ತೆರೆ ಎಳೆದಿರುವ ಬಿಜೆಪಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಮುಂದುವರಿಯಲಿದ್ದು, ಇತರ ನಾಯಕರ ಆಯ್ಕೆ ಸಾಧ್ಯತೆಯನ್ನು ತಳ್ಳಿಹಾಕಿದೆ.
ಮಹಾಘಟಬಂಧನ್ ಒಳಗೊಂಡಂತೆ ಇತರ ವಿರೋಧಪಕ್ಷಗಳೊಂದಿಗೆ ಎನ್ಡಿಎ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಿರುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರೇ ಎನ್ಡಿಎ ನಾಯಕನಾಗಿ ಉಳಿಯಲಿದ್ದಾರೆ ಎಂದು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಬುಧವಾರ ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುಶೀಲ್, "ಬಿಹಾರದಲ್ಲಿ ಎನ್ಡಿಎ ಕ್ಯಾಪ್ಟನ್ ಆಗಿ ನಿತೀಶ್ ಕುಮಾರ್ ಅವರೇ ಇರಲಿದ್ದಾರೆ ಮತ್ತು 2020 ರಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಅವರೇ ನಾಯಕರಾಗಿ ಉಳಿಯುತ್ತಾರೆ. ಒಂದು ತಂಡದ ಕ್ಯಾಪ್ಟನ್ 4 & 6 ಅನ್ನು ಹೊಡೆದು ಇನ್ನಿಂಗ್ ಮೂಲಕ ಪ್ರತಿಸ್ಪರ್ಧಿಗಳನ್ನು ಸೋಲಿಸುವಾಗ ಬದಲಾವಣೆಯ ಪ್ರಶ್ನೆ ಎಲ್ಲಿದೆ" ಎಂದು ಹೇಳಿದ್ದಾರೆ.
@NitishKumar is the Captain of NDA in Bihar & will remain its Captain in next assembly elections in 2020 also.When Captain is hitting 4 & 6 & defeating rivals by inning where is the Q of any change.
— Sushil Kumar Modi (@SushilModi) September 11, 2019
ಬಿಜೆಪಿಯ ಹಿರಿಯ ನಾಯಕ ಸಂಜಯ್ ಪಾಸ್ವಾನ್ ಅವರು ಬಿಹಾರದಲ್ಲಿ ಎನ್ಡಿಎ ನಾಯಕತ್ವವನ್ನು ಬದಲಾಯಿಸಬೇಕೆಂದು ಒತ್ತಾಯಿಸಿದ ಬೆನ್ನಲ್ಲೇ ಸುಶೀಲ್ ಕುಮಾರ್ ಮೋದಿ ಟ್ವೀಟ್ ಮಾಡಿದ್ದಾರೆ.