ಹಿರಿಯ ನಟ ಅಂಬರೀಶ್ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

ಮಂಡ್ಯದ ಗಂಡೆಂದೇ ಜನಪ್ರಿಯರಾಗಿದ್ದ ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರ ನಿಧನ ಆಘಾತವನ್ನುಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Last Updated : Nov 25, 2018, 07:19 AM IST
ಹಿರಿಯ ನಟ ಅಂಬರೀಶ್ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ title=

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ನಿಧನಕ್ಕೆ ರಾಜಕೀಯ ರಂಗದ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಹಿರಿಯ ನಟ, ಮಾಜಿ ಸಚಿವ ಮತ್ತು ದೀರ್ಘಕಾಲದ ನನ್ನ ಗೆಳೆಯ ಅಂಬರೀಷ್ ಅವರ ಸಾವು ದಿಗ್ಭ್ರಮೆ‌ ಉಂಟು ಮಾಡಿದೆ. ತೀರಾ ಅನಿರೀಕ್ಷಿತ ಸಾವು. ಚಿತ್ರರಂಗ ಮತ್ತು ರಾಜಕೀಯರಂಗ ಎರಡರಲ್ಲಿಯೂ ಜನಮನ ಗೆದ್ದ ನಾಯಕ ಅಂಬರೀಷ್.‌ ನಿಜವಾದ ಅರ್ಥದಲ್ಲಿ‌ ಅಜಾತಶತ್ರು. ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ‌ ನಾನೂ ಭಾಗಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಹಿರಿಯ ನಟ, ಮಾಜಿ ಸಚಿವ ಅಂಬರೀಷ್ ಅವರ ಸಾವಿನಿಂದ ಅವರ ಅಪಾರ ಅಭಿಮಾನಿಗಳಿಗಾಗಿರುವ ಆಘಾತ, ದು:ಖ, ನೋವುಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.‌ ಈ ಸಂದರ್ಭದಲ್ಲಿ ಎಲ್ಲರೂ ಶಾಂತಿ‌ ಮತ್ತು ಸಂಯಮವನ್ನು ಕಾಪಾಡಿಕೊಂಡು ಮೃತ ನಾಯಕನಿಗೆ ಅಂತಿಮ ಗೌರವ ಸಲ್ಲಿಸಿ ಎಂದು ಸಿದ್ದರಾಮಯ್ಯ ಮನವಿಮಾಡಿದ್ದಾರೆ. 

ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರೂ ಸಹ ಅಂಬರೀಶ್ ಸಾವಿಗೆ ಸಂತಾಪ ಸೂಚಿಸಿದ್ದು, ಅಪಘಾತದ ನೋವನ್ನು ಜೀರ್ಣಿಸಿಕೊಳ್ಳುತ್ತಿರುವಾಗಲೇ ಮಂಡ್ಯದ ಗಂಡೆಂದೇ ಜನಪ್ರಿಯರಾಗಿದ್ದ ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರ ನಿಧನ ಆಘಾತವನ್ನುಂಟು ಮಾಡಿದೆ. ರಾಜ್ಯ ಹಾಗೂ ಮಂಡ್ಯದ ಪಾಲಿಗೆ ಇಂದು ಕರಾಳ ದಿನ. ಅಂಬರೀಶ್ ಅವರ ಕುಟುಂಬಕ್ಕೆ ಭಗವಂತ ನೋವನ್ನು ಸಹಿಸುವ ಶಕ್ತಿ ನೀಡಲಿ. ಚಿತ್ರರಂಗ ಹಾಗೂ ರಾಜ್ಯ ಅಮೂಲ್ಯ ರತ್ನವನ್ನು ಕಳೆದುಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮಂಡ್ಯದ ಘೋರ ದುರಂತವೊಂದನ್ನು ಕೇಳಿದ ನಂತರ ಇದೀಗ ರಾಜಕೀಯವಾಗಿ ನನ್ನ ಜೊತೆ ಹೆಜ್ಜೆ ಹಾಕಿದ್ದ ಅಂಬರೀಶ್ ಅವರು ಸಹಾ ಇನ್ನಿಲ್ಲ ಎನ್ನುವ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕರ್ನಾಟಕವು ಅಮೂಲ್ಯವಾದ ರತ್ನವನ್ನು ಕಳೆದುಕೊಂಡಿದ್ದು, ನಮ್ಮನ್ನು ಅಗಲಿರುವ ಅಂಬರೀಶ್ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರೂ ಸಹ ಅಂಬರೀಶ್ ಅವರ ನಿಧಾನಕ್ಕೆ ಕಂಬನಿ ಮಿಡಿದಿದ್ದಾರೆ. ಅಂಬರೀಶ್ ತಮ್ಮ ಒಳ್ಳೆಯತನದಿಂದ ಎಲ್ಲರ ಅಣ್ಣ, ಎಲ್ಲರ ಸ್ನೇಹಿತ. ತಮ್ಮ ಹುಸಿ ಕೋಪ  ಮುನಿಸಿನಿಂದಲೇ ಲಕ್ಷಾಂತರ ಜನರ ಪ್ರೀತಿ ಸಂಪಾದಿಸಿದ್ದ ಅಣ್ಣ. ಚಿತ್ರನಟರಾಗಿ, ರಾಜಕಾರಣಿಯಾಗಿ, ಹಿರಿಯಣ್ಣರಾಗಿ ಬಾವುಕ ಪ್ರೀತಿ ತೋರಿಸಿದ್ದ ಸಹೃದಯಿ ಇನ್ನಿಲ್ಲವೆಂಬ ಮಾತು ಅತ್ಯಂತ ಕಠಿಣ. ಅವರ ಅಗಲಿಕೆಯ ದುಃಖವನ್ನು ಬರಿಸಿವ ಶಕ್ತಿ ಎಲ್ಲರಿಗೂ ಭಗವಂತ ನೀಡಲಿ ಎನ್ನುವುದಾಗಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Trending News