ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿ; ಕೈಜೋಡಿಸಿ ಮನವಿ ಮಾಡಿದ ಮಾಜಿ ಪ್ರಧಾನಿ ದೇವೇಗೌಡ 

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿಗಳನ್ನು ʼಸೋ ಕಾಲ್ಡ್‌ ಗ್ಯಾರಂಟಿಗಳುʼ ಎಂದು ಕಟುವಾಗಿ ಟೀಕಿಸಿದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು; ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಇಂಥ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

Written by - Prashobh Devanahalli | Edited by - Manjunath N | Last Updated : Feb 6, 2024, 09:50 PM IST
  • ರಾಜಕೀಯ ಉದ್ದೇಶದ, ತಾತ್ಕಾಲಿಕ ಲಾಭದ ಗ್ಯಾರಂಟಿಗಳು
  • ಮೋದಿ ಗ್ಯಾರಂಟಿ ವಿಭಿನ್ನ, ನನಗೆ ಗೊತ್ತಿದೆ
  • ಎಸ್ ಟಿ ಪ್ರವರ್ಗಕ್ಕೆ ಕಾಡುಗೊಲ್ಲ ಸಮುದಾಯ; ಪ್ರಧಾನಿಗೆ ಮನವಿ
ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿ; ಕೈಜೋಡಿಸಿ ಮನವಿ ಮಾಡಿದ ಮಾಜಿ ಪ್ರಧಾನಿ ದೇವೇಗೌಡ  title=
file photo

ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿಗಳನ್ನು ʼಸೋ ಕಾಲ್ಡ್‌ ಗ್ಯಾರಂಟಿಗಳುʼ ಎಂದು ಕಟುವಾಗಿ ಟೀಕಿಸಿದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು; ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಇಂಥ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ಅನಗತ್ಯ ವೆಚ್ಚದ ಅನುತ್ಪಾದಕ, ಅಲ್ಪಾವಧಿ ಲಾಭದ ಗ್ಯಾರಂಟಿಗಳು ಇವಾಗಿವೆ ಎಂದು ಕಾಂಗ್ರೆಸ್‌ ಸರಕಾರದ ಪಂಚ ಗ್ಯಾರಂಟಿಗಳ ಬಗ್ಗೆ ದೇಶದ ಜನರ ಗಮನ ಸೆಳೆದರು.

ಕಾಂಗ್ರೆಸ್‌ ಪಕ್ಷದ ಸದಸ್ಯರ ಆಕ್ಷೇಪಣೆ, ಗದ್ದಲದ ನಡುವೆಯೂ ತಮ್ಮ ಮಾತುಗಳನ್ನು ಮುಂದುವರಿಸಿದ ಅವರು; ಜಂತರ್‌ಮಂತರ್‌ನಲ್ಲಿ ಕಾಂಗ್ರೆಸ್‌ನವರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಅವರು ನನ್ನನ್ನೂ ಸೇರಿ ಎಲ್ಲರನ್ನೂ ಬರುವಂತೆ ಕರೆದಿದ್ದಾರೆ. ಈ ದೇಶದ ರಾಜಕೀಯ ಪರಿಸ್ಥಿತಿ ಹೇಗಾಗಿದೆ ಎಂದರೆ, ರಾಜಕೀಯ ಲಾಭಕ್ಕಾಗಿ ಅನಗತ್ಯ ವೆಚ್ಚದ ಅನುತ್ಪಾದಕ ವೆಚ್ಚಗಳನ್ನು ಯಥೇಚ್ಛವಾಗಿ ಮಾಡಲಾಗುತ್ತಿದೆ. ನಾನೆಂದೂ ಇಂಥದ್ದನ್ನು ಮಾಡಿಲ್ಲ ಎಂದರು.

ಇದನ್ನೂ ಓದಿ: IND vs ENG: ಅಂತಿಮ ಟೆಸ್ಟ್ ಪಂದ್ಯಕ್ಕೆ ತಂಡ ಪ್ರಕಟ! ಕೊಹ್ಲಿ ಸೇರಿ ಮೂವರು ಪ್ರಮುಖ ಆಟಗಾರರೇ ಇಲ್ಲ!

ಮೋದಿ ಗ್ಯಾರಂಟಿ ವಿಭಿನ್ನ, ನನಗೆ ಗೊತ್ತಿದೆ:

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಸದಸ್ಯರೊಬ್ಬರು ಮೋದಿ ಗ್ಯಾರಂಟಿಗಳ ಬಗ್ಗೆ ಏನು ಹೇಳುತ್ತೀರಿ ಎಂದಾಗ, "ನಾನು ಹೇಳುತ್ತಿರುವುದು ಕರ್ನಾಟಕ ಸರಕಾರದ ಗ್ಯಾರಂಟಿಗಳ ಬಗ್ಗೆ. ಮೋದಿ ಗ್ಯಾರಂಟಿಗಳು ಬಹಳ ವಿಭಿನ್ನವಾಗಿವೆ. ಅವುಗಳ ಬಗ್ಗೆ ನನಗೆ ಗೊತ್ತಿದೆ" ಎಂದು ಗುಡುಗಿದರು. ಅಲ್ಲದೆ; “ನಾನು ತಪ್ಪು ಮಾಹಿತಿ ಹೇಳಿದ್ದರೆ ಕ್ಷಮೆ ಕೇಳುತ್ತೇನೆ. ಯಾರಿಗೂ, ಯಾವುದಕ್ಕೂ ಅಪಖ್ಯಾತಿ ತರುವ ಉದ್ದೇಶ ನನ್ನದಲ್ಲ. ಕರ್ನಾಟಕ ಸರಕಾರ ಒಳ್ಳೆಯದು ಮಾಡಿದರೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ನನಗೆ ಅದರಿಂದ ಏನೂ ಆಗಬೇಕಿಲ್ಲ” ಎಂದರು ಅವರು.

ಹಣ ಇಲ್ಲ, ಪ್ರತಿಭಟನೆ ಮಾಡುತ್ತೇವೆ ಎಂದು ನಮ್ಮನ್ನೆಲ್ಲ ಕರೆಯುತ್ತಾರೆ. ಆದರೆ, ಕೇರಳದಲ್ಲಿ ಇದೇ ಉದ್ದೇಶಕ್ಕೆ ಅಲ್ಲಿನ ಎಲ್ ಡಿಎಫ್ ಸರಕಾರ ಕರೆದರೆ ಕಾಂಗ್ರೆಸ್ ನವರು ಬಹಿಷ್ಕಾರ ಹಾಕುತ್ತಾರೆ. ಇದು ರಾಜಕೀಯ ಪರಿಸ್ಥಿತಿ ಎಂದು ಅವರು ಬೇಸರಿಸಿದರು.

ಮನ ಕಲಕುವ ಘಟನೆ ವಿವರಿಸಿದ ಮಾಜಿ ಪ್ರಧಾನಿಗಳು:

ಗ್ಯಾರಂಟಿಗಳ ಹೆಸರಿನಲ್ಲಿ ಕರ್ನಾಟಕದಲ್ಲಿ ಏನಾಗಿದೆ? ಒಂದು ಘಟನೆ ಬಗ್ಗೆ ವಿವರಿಸುತ್ತೇನೆ. "ಹಾವೇರಿ ಜಿಲ್ಲೆ ಯಲಗಚ್ಚು ಗ್ರಾಮದ ಬಸವರಾಜ ವೆಂಕಟ ಎಂಬ ಯುವಕನ ಆತ್ಮಾಹುತಿ ಆಘಾತಕಾರಿ. ನಿಮ್ಮ ಪ್ರಚಾರಪ್ರಿಯ, ಖೊಟ್ಟಿ ಗ್ಯಾರಂಟಿಗಳ ಸರಕಾರದ ಆತ್ಮಸಾಕ್ಷಿಗೆ ಎದುರಾದ ದೊಡ್ಡ ಸವಾಲು" ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಡಿದ್ದ ಟ್ವೀಟ್‌ʼನ ಒಂದು ತುಣುಕನ್ನು ಓದಿದರು ಹಾಗೂ ಆ ಬಗ್ಗೆ ವರದಿ ಮಾಡಿದ್ದ ಪತ್ರಿಕೆಯ ತುಣುಕನ್ನು ಪ್ರದರ್ಶಿಸಿದರು. "ಆ ಯುವಕ ಕೆಲಸಕ್ಕಾಗಿ ತಾಯಿಯೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿರುತ್ತಾನೆ. ಟಿಕೆಟ್ ಇಲ್ಲದ ಕಾರಣಕ್ಕೆ ಅವರಿಬ್ಬರನ್ನು ಧಾರವಾಡದ ಬಳಿ ಕೆಳಗಿಳಿಸಲಾಗುತ್ತದೆ. ಅಲ್ಲಿ ತಾಯಿ ಮತ್ತು ತನಗೆ ಊಟಕ್ಕಾಗಿ ಆ ಯುವಕ ಅಲೆಯುತ್ತಾನೆ. ಕೆಲಸ ಹುಡುಕುತ್ತಾನೆ. ಸಿಗುವುದಿಲ್ಲ. ಕೊನೆಗೆ ಆ ನತದೃಷ್ಟ ಯುವಕ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದು, ಕರ್ನಾಟಕದ ಗ್ಯಾರಂಟಿಗಳ ನೈಜಸ್ಥಿತಿ" ಎಂದು ಮಾಜಿ ಪ್ರಧಾನಿಗಳು ಅತೀವ ಬೇಸರ ವ್ಯಕ್ತಪಡಿಸಿದರು.

ನಾನು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾಗ ಒಬ್ಬ ಶಾಸಕರನ್ನೂ ನಿಗಮ ಮಂಡಳಿಗಳಿಗೆ ನೇಮಕ ಮಾಡಲಿಲ್ಲ. ಜನರ ತೆರಿಗೆ ಹಣದ ಪ್ರತಿ ಪೈಸೆಯನ್ನೂ ನೀರಾವರಿ ಯೋಜನೆಗಳಿಗೆ ತೆಗೆದಿಟ್ಟೆ. ಜನರನ್ನು ದುಡ್ಡಿನಲ್ಲಿ ಒಂದು ಪೈಸೆಯನ್ನೂ ಅನಗತ್ಯವಾಗಿ ವೆಚ್ಚ ಮಾಡಲಿಲ್ಲ. ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಹಾಗೆಯೇ ಕೆಲಸ ಮಾಡಿದ್ದೇನೆ ಎಂದು ಅವರು ಸದನದಲ್ಲಿ ಒತ್ತಿ ಹೇಳಿದರು.

ಕಾಡುಗೊಲ್ಲ ಸಮುದಾಯದ ಬಗ್ಗೆ ಪ್ರಸ್ತಾಪ:

ನರೇಂದ್ರ ಮೋದಿ ಅವರು ಪ್ರಧಾನಿಗಳಾಗಿ ಹತ್ತು ವರ್ಷ ಪೂರೈಸಿದ್ದಾರೆ. ನಾನು ಕೇವಲ ಹತ್ತು ತಿಂಗಳು ಮಾತ್ರ ಆ ಹುದ್ದೆಯಲ್ಲಿದ್ದೆ. ಆದರೆ, ನಾನು ಅವರಿಗೆ ಹೋಲಿಕೆ ಮಾಡಿಕೊಳ್ಳುತ್ತಿಲ್ಲ. ನನ್ನ ಅರವತ್ತು ವರ್ಷಗಳ ಸಾರ್ವಜನಿಕ ಜೀವನದ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ, ಅಷ್ಟೇ. ಕರ್ನಾಟಕದಲ್ಲಿ ಕಳೆದ ಏಳು ತಿಂಗಳಿಂದ ರಾಜ್ಯ ಸರಕಾರ ಹಲವಾರು ವಿಚಾರಗಳನ್ನು ಮುಂಚೂಣಿಗೆ ತಂದಿದೆ. ಮೀಸಲಾತಿ ಬಗ್ಗೆ ನಾನು ಯಾರನ್ನೂ ದೂರುವುದಿಲ್ಲ. ಆನೇಕ ಮೀಸಲಾತಿ ವರದಿಗಳ ಬಗ್ಗೆ ನನಗೆ ಗೊತ್ತಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಕಾಂತರಾಜು ಸಮಿತಿ ವರದಿ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಕಾಡುಗೊಲ್ಲ ಸಮುದಾಯ ಮೀಸಲು ಸೌಲಭ್ಯದಿಂದ ವಂಚಿತರಾಗಿ ಅನ್ಯಾಯಕ್ಕಾಗಿ ತುತ್ತಾಗಿದೆ. 2014ರಿಂದಲೂ ಇವರನ್ನು ಎಸ್ಟಿ ಪ್ರವರ್ಗಕ್ಕೆ ಸೇರಿಸುವ ಪ್ರಸ್ತಾವನೆ ಇತ್ತು. ಈಗ 2024. ಪ್ರಧಾನಮಂತ್ರಿಗಳು ನಾಳೆ ಸದನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ಅವರ ಗಮನ ಸೆಳೆಯುವುದಕ್ಕಾಗಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದೇನೆ ಎಂದು ದೇವೇಗೌಡರು ಹೇಳಿದರು. 

ಈ ಸಮುದಾಯದ ಪರವಾಗಿ ನೂತನ ಸಂಸತ್ ಭವನದಲ್ಲಿ ಪ್ರಧಾನಿಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದೆ. ನನ್ನ ಬಗ್ಗೆ ಅವರು ಅತೀವ ಪ್ರೀತಿ ವಾತ್ಸಲ್ಯ ತೋರಿದರು. ನನಗೀಗ 91 ವರ್ಷ ವಯಸ್ಸು. ಹಿಂದೆ ಅನೇಕ ಪ್ರಧಾನಿಗಳನ್ನು ನೋಡಿದ್ದೇನೆ, ಭೇಟಿಯಾಗಿದ್ದೇನೆ. ಯಾರೂ ನನ್ನ ಬಗ್ಗೆ ಇಷ್ಟೊಂದು ಪ್ರೀತಿ ತೋರಿಸಿರಲಿಲ್ಲ. ಅಂದು ಕಾಡುಗೊಲ್ಲ ಸಮುದಾಯವನ್ನು ಎಸ್ ಟಿ ಪ್ರವರ್ಗಕ್ಕೆ ಸೇರಿಸಬೇಕು ಎಂದು ಅವರಲ್ಲಿ ಮನವಿ ಮಾಡಿದ್ದೆ. ತಕ್ಷಣವೇ ಅವರು ಹೇಳಿದರು, ಈ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು. 2022-2023ರಲ್ಲಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರವೂ ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಕರ್ನಾಟಕದ 13 ಜಿಲ್ಲೆಗಳಲ್ಲಿರುವ ಕಾಡುಗೊಲ್ಲ ಸಮುದಾಯದ ಹಿತಕ್ಕಾಗಿ ಪ್ರಧಾನಿಗಳು ನಿರ್ಧಾರ ಪ್ರಕಟಿಸಬೇಕು ಎಂದು ಸದನದ ಮೂಲಕ ಮನವಿ ಮಾಡುತ್ತೇನೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.

ಇದನ್ನೂ ಓದಿ: ವಯನಾಡ್ ಕ್ಷೇತ್ರದ ಮೇಲೆ CPI ಕಣ್ಣು! ಲೋಕ ಚುನಾವಣೆಯಲ್ಲಿ ರಾಹುಲ್ ಗಾಂಧಿಗೆ ಕುತ್ತುತರುತ್ತಾ?

ಮಾಲಿನ್ಯ ನಿಯಂತ್ರಣ ಮಸೂದೆಗೆ ಸ್ವಾಗತ:

ಸದನದಲ್ಲಿ ಮಂಡಸಲಾಗಿದ್ದ ಮಾಲಿನ್ಯ ನಿಯಂತ್ರಣ ಮಸೂದೆಯನ್ನು ಸ್ವಾಗತಿಸಿದ ಮಾಜಿ ಪ್ರಧಾನಿಗಳು; ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ಕರ್ನಾಟಕವೂ ಸೇರಿದಂತೆ ಎಲ್ಲೆಡೆ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ನನಗೆ ಗೊತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ತಮ್ಮ ಸ್ವಾರ್ಥಕ್ಕಾಗಿ, ಸ್ವಹಿತಕ್ಕಾಗಿ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬ ಬಗ್ಗೆ ಮುಖ್ಯಮಂತ್ರಿ ಆಗಿದ್ದ ನನಗೆ ಚನ್ನಾಗಿ ಗೊತ್ತಿದೆ ಎಂದರು ಅವರು. 

ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿ; ಕೈಜೋಡಿಸಿ ಮನವಿ ಮಾಡಿದ ಮಾಜಿ ಪ್ರಧಾನಿಗಳು:

ಮೇಕೆದಾಟು ಯೋಜನೆಯ ವಿಷಯವನ್ನು ಪ್ರಸ್ತಾಪ ಮಾಡಿದ ಮಾಜಿ ಪ್ರಧಾನಿಗಳು; ತಮಿಳುನಾಡು ಸ್ನೇಹಿತರು ಅನ್ಯತಾ ಭಾವಿಸಬಾರದು ಎನ್ನುತ್ತಲೇ ರಾಜ್ಯದ ಕುಡಿಯುವ ನೀರಿನ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರಲ್ಲದೆ, ಕೇಂದ್ರ ಸರಕಾರವು 30 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.

ಸುಪ್ರೀಂ ಕೋರ್ಟ್ʼನಲ್ಲಿ ತಮಿಳುನಾಡು ಪರ ವಾದ ಮಂಡಿಸಿದ ಹಿರಿಯ ವಕೀಲರೇ ಮೆಟ್ಟೂರು ಜಲಾಶಯಕ್ಕೆ ಮೇಲ್ಭಾಗದಲ್ಲಿ ಕರ್ನಾಟಕ ಜಲಾಶಯ ನಿರ್ಮಾಣ ಮಾಡಬಹುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ದಯಮಾಡಿ ಪ್ರಧಾನಿಗಳು ಮಧ್ಯಪ್ರವೇಶ ಮಾಡಬೇಕು, ಕರ್ನಾಟಕದ ಕುಡಿಯುವ ನೀರಿನ ಸಂಕಷ್ಟವನ್ನು ಪರಿಹಾರ ಮಾಡಬೇಕು. ಇದಷ್ಟೇ ಎಲ್ಲರಿಗೂ ನನ್ನ ಪ್ರಾರ್ಥನೆ ಎಂದು ಮಾಜಿ ಪ್ರಧಾನಿಗಳು ಕೈ ಜೋಡಿಸಿ ಮನವಿಕೊಂಡರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News