ಅವಕಾಶ ವಂಚಿತ ಜಾತಿಗಳು ಸಮ್ಮೇಳನಗಳನ್ನು ನಡೆಸಿದರೆ ಅದು ಜಾತೀಯತೆಯಾಗದು- ಸಿದ್ಧರಾಮಯ್ಯ

ಸಹಸ್ರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದರೂ ಶಿಕ್ಷಣದಿಂದ ವಂಚಿತರಾದ ಕಾರಣ ತಳ ಸಮುದಾಯಗಳು ಅದನ್ನು ಪ್ರತಿಭಟಿಸಲಿಲ್ಲ. ಇಂದು ಆ ಸಮುದಾಯಗಳು ಶಿಕ್ಷಣ ಪಡೆದಿರುವುದರಿಂದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಮಾತನಾಡುವ ಧೈರ್ಯ ತೋರುತ್ತಿವೆ ಎಂದು ರಾಜ್ಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.

Last Updated : Oct 4, 2021, 12:25 AM IST
  • ಸಹಸ್ರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದರೂ ಶಿಕ್ಷಣದಿಂದ ವಂಚಿತರಾದ ಕಾರಣ ತಳ ಸಮುದಾಯಗಳು ಅದನ್ನು ಪ್ರತಿಭಟಿಸಲಿಲ್ಲ. ಇಂದು ಆ ಸಮುದಾಯಗಳು ಶಿಕ್ಷಣ ಪಡೆದಿರುವುದರಿಂದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಮಾತನಾಡುವ ಧೈರ್ಯ ತೋರುತ್ತಿವೆ ಎಂದು ರಾಜ್ಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
  • ಅವಕಾಶದಿಂದ ವಂಚಿತರಾದ ಜಾತಿಗಳು ಜಾತಿ ಸಮ್ಮೇಳನಗಳನ್ನು ನಡೆಸಿ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರೆ ಅದು ಜಾತೀಯತೆಯಾಗದು, ಸಮಾಜದ ಸಂಪತ್ತನ್ನು ಅನುಭವಿಸುವ ಸಮುದಾಯಗಳು ಜಾತಿ ಸಮ್ಮೇಳನಗಳನ್ನು ನಡೆಸಿದರೆ ಮಾತ್ರ ಅದು ಜಾತೀಯತೆ ಎಂದು ರಾಮ್ ಮನೋಹರ ಲೋಹಿಯಾ ಹೇಳಿದ್ದರು.ನನ್ನ ತಂದೆ, ತಾಯಿ ಶಿಕ್ಷಣದಿಂದ ವಂಚಿತರಾಗಿದ್ದರು. ನಾನು ಕಾನೂನು ಪದವಿ ಗಳಿಸಿದ್ದಕ್ಕೆ ಇಂದು ಸಮಾಜದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಲು ಸಾಧ್ಯವಾಗಿದೆ.
ಅವಕಾಶ ವಂಚಿತ ಜಾತಿಗಳು ಸಮ್ಮೇಳನಗಳನ್ನು ನಡೆಸಿದರೆ ಅದು ಜಾತೀಯತೆಯಾಗದು- ಸಿದ್ಧರಾಮಯ್ಯ  title=
file photo

ಬೆಂಗಳೂರು: ಸಹಸ್ರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದರೂ ಶಿಕ್ಷಣದಿಂದ ವಂಚಿತರಾದ ಕಾರಣ ತಳ ಸಮುದಾಯಗಳು ಅದನ್ನು ಪ್ರತಿಭಟಿಸಲಿಲ್ಲ. ಇಂದು ಆ ಸಮುದಾಯಗಳು ಶಿಕ್ಷಣ ಪಡೆದಿರುವುದರಿಂದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಮಾತನಾಡುವ ಧೈರ್ಯ ತೋರುತ್ತಿವೆ ಎಂದು ರಾಜ್ಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.

ಅವಕಾಶದಿಂದ ವಂಚಿತರಾದ ಜಾತಿಗಳು ಜಾತಿ ಸಮ್ಮೇಳನಗಳನ್ನು ನಡೆಸಿ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರೆ ಅದು ಜಾತೀಯತೆಯಾಗದು, ಸಮಾಜದ ಸಂಪತ್ತನ್ನು ಅನುಭವಿಸುವ ಸಮುದಾಯಗಳು ಜಾತಿ ಸಮ್ಮೇಳನಗಳನ್ನು ನಡೆಸಿದರೆ ಮಾತ್ರ ಅದು ಜಾತೀಯತೆ ಎಂದು ರಾಮ್ ಮನೋಹರ ಲೋಹಿಯಾ ಹೇಳಿದ್ದರು.ನನ್ನ ತಂದೆ, ತಾಯಿ ಶಿಕ್ಷಣದಿಂದ ವಂಚಿತರಾಗಿದ್ದರು. ನಾನು ಕಾನೂನು ಪದವಿ ಗಳಿಸಿದ್ದಕ್ಕೆ ಇಂದು ಸಮಾಜದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಲು ಸಾಧ್ಯವಾಗಿದೆ. 

ಇದನ್ನೂ ಓದಿ: ಕಾಂಗ್ರೆಸ್‌ ಸೋಲಿಸುವ ದುರುದ್ದೇಶದಿಂದಲೇ JDSನಿಂದ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕೆ: ಸಿದ್ದರಾಮಯ್ಯ

ಶಿಕ್ಷಣದಿಂದ ಮಾತ್ರ ಇಂತಹಾ ಬದಲಾವಣೆ ಸಾಧ್ಯ.
"ಶಿಕ್ಷಣ, ಸಂಘಟನೆ ಮತ್ತು ಹೋರಾಟ" ಎಂಬ ಮೂರು ಸೂತ್ರಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತ ವರ್ಗದ ಜನರಿಗೆ ನೀಡಿದ್ದಾರೆ. ಒಂದು ವೇಳೆ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗದೆ ಹೋಗಿದ್ದರೆ ನಮಗೆ ಇಂಥಾ ಶ್ರೇಷ್ಠ ಸಂವಿಧಾನ ನಮಗೆ ಸಿಗುತ್ತಿರಲಿಲ್ಲ.

ಭಾರತೀಯ ಸಂವಿಧಾನವು ಸಮಾನತೆಗೆ ಅವಕಾಶ ನೀಡಿರುವುದರಿಂದ ಇಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುತ್ತಿವೆ. ಇಂಥವರ ಬಗ್ಗೆ ತಳ ಸಮುದಾಯಗಳು ಜಾಗ್ರತೆ ವಹಿಸಬೇಕು.
ಸಮಾಜದ ಎಲ್ಲಾ ಜಾತಿಗಳು ಇಂದು ಮೀಸಲಾತಿ ಪಡೆಯುತ್ತಿವೆ. ಮೇಲ್ಜಾತಿಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೂ 10% ಮೀಸಲಾತಿ ಕಲ್ಪಿಸಲಾಗಿದೆ. ಹೀಗಾಗಿ ಹಿಂದೆ ಮೀಸಲಾತಿ ವಿರೋಧಿಸುತ್ತಿದ್ದವರು ಈಗ ಮೀಸಲಾತಿ ಪರ ಬದಲಾಗಿದ್ದಾರೆ.

1992ರಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ 9 ಮಂದಿ ನ್ಯಾಯಾಧೀಶರ ವಿಭಾಗೀಯ ಪೀಠವು ಮಂಡಲ್ ಕಮಿಷನ್‌ ವರದಿಯನ್ನು ಎತ್ತಿಹಿಡಿದಿತ್ತು. ಈ ವರದಿ ಜಾರಿಯಾದ ಮೇಲೆ ಹಿಂದುಳಿದ ಜಾತಿಗಳಿಗೆ 27% ಮೀಸಲಾತಿ ಸಿಕ್ಕಿತ್ತು.  ಇದು ಜಾರಿಯಾಗಬಾರದು ಎಂದು ವಿರೋಧ ಮಾಡಿದವರು ಬಿಜೆಪಿಯ ಲಾಲ್ ಕೃಷ್ಣ ಅಡ್ವಾಣಿ ಅವರು. 
ಕರ್ನಾಟಕದಲ್ಲಿ ಮೊದಲ ಬಾರಿಗೆ ಮೀಸಲಾತಿ ನೀಡಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಅವರು ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚನೆ ಮಾಡಿ, ಅದರ ಶಿಫಾರಸನ್ನು ಜಾರಿ ಮಾಡಿದರು. ಬ್ರಾಹ್ಮಣರಿಗೆ 25%, ಬ್ರಾಹ್ಮಣೇತರರಿಗೆ 75% ಮೀಸಲಾತಿ ನೀಡಿದರು.

ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾದ ದೇವರಾಜ ಅರಸು ಅವರು ಮೀಸಲಾತಿ ಸಂಬಂಧ ಆಯೋಗ ರಚನೆ ಮಾಡಿ, ಅದರ ಶಿಫಾರಸ್ಸಿನಂತೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಜಾರಿ ಮಾಡಿದರು.

ರಾಜೀವ್ ಗಾಂಧಿಯವರು ಸಂವಿಧಾನಕ್ಕೆ 73 ಹಾಗೂ 74 ನೇ ತಿದ್ದುಪಡಿ ತಂದು ರಾಜಕೀಯ ಮೀಸಲಾತಿಯನ್ನು ಕಲ್ಪಿಸಿದರು. ಕಾಂಗ್ರೆಸ್ ಪಕ್ಷ ಹಿಂದುಳಿದವರಿಗೆ, ಮಹಿಳೆಯರಿಗೆ ಮೀಸಲಾತಿ ನೀಡಿದಾಗ ಅದನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದವರು ಬಿಜೆಪಿಯ ರಾಮಾ ಜೋಯಿಸ್. 

ಇದನ್ನೂ ಓದಿ: ಬಿಜೆಪಿ ನಾಯಕರಿಗೆ ಕಳಚಲಾಗದ ‘ಪ್ಯಾಂಟ್ ಭಾಗ್ಯ’ ನೀಡುತ್ತೇವೆ: ಕಾಂಗ್ರೆಸ್

ಸರ್ಕಾರಿ ಹಾಸ್ಟೆಲ್ ಗಳಲ್ಲಿ ಸೀಟ್ ಸಿಗದಿರುವ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ ಪ್ರತೀ ತಿಂಗಳು ರೂ.1500 ನೀಡುವ ವಿದ್ಯಾಸಿರಿ ಯೋಜನೆ ಜಾರಿಮಾಡಿದ್ದೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಮೇಲೆ ಈ ಯೋಜನೆಯನ್ನು ನಿಲ್ಲಿಸಿದೆ. 
ಬುದ್ಧ, ಬಸವ, ಗಾಂಧಿ ಸೇರಿದಂತೆ ಹಲವು ಮಹಾತ್ಮರು ಜಾತಿ ವ್ಯವಸ್ಥೆ ಅಳಿದು ಸಮ ಸಮಾಜ ನಿರ್ಮಾಣವಾಗಬೇಕು ಎಂದು ಸಾರಿದರು. ಇದೇ ಕಾರಣಕ್ಕೆ ಬಸವಣ್ಣ ಅನುಭವ ಮಂಟಪ ಸ್ಥಾಪನೆ ಮಾಡಿದ್ದು. ದುರಂತವೆಂದರೆ ಇಂದು "ಇವ ನಮ್ಮವ, ಇವ ನಮ್ಮವ" ಎನ್ನುತ್ತಲೇ ನಿನ್ನ ಜಾತಿ ಯಾವುದು? ಎಂದು ಕೇಳುತ್ತಾರೆ.

1931 ರಲ್ಲಿ ಕಡೇ ಬಾರಿ ಜಾತಿಗಣತಿ ಆಗಿತ್ತು. ಮೀಸಲಾತಿ ವಿಚಾರ ನ್ಯಾಯಾಲಯದ ಮುಂದೆ ಬಂದಾಗಲೆಲ್ಲ ಜಾತಿ ಜನಸಂಖ್ಯೆಗೆ ಸಂಬಂಧಿಸಿದಂತೆ ನಿಮ್ಮ ಬಳಿಯಿರುವ ಅಧಿಕೃತ ದಾಖಲೆ ಏನು ನ್ಯಾಯಾಲಯ ಪ್ರಶ್ನಿಸುತ್ತಿತ್ತು. ಈ ಕಾರಣಕ್ಕೆ ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಆದೇಶಿಸಿದ್ದೆ.ಯಾವ ಜಾತಿಗೂ ಅನ್ಯಾಯ ಮಾಡುವುದು ಸಮೀಕ್ಷೆಯ ಉದ್ದೇಶವಲ್ಲ. ಜಾತಿ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಕ್ರಮ ರೂಪಿಸುವುದು ಇದರ ಮುಖ್ಯ ಉದ್ದೇಶ.

ನಾನು ಮುಖ್ಯಮಂತ್ರಿ ಆಗಿದ್ದಾಗ ವರದಿ ಸಿದ್ದಗೊಂಡಿರಲಿಲ್ಲ. ಈಗ ವರದಿ ಸಿದ್ದವಾಗಿದೆ.ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಈಗಿನ ಬಿಜೆಪಿ ಸರ್ಕಾರವೂ ಸ್ವೀಕರಿಸುವಂತೆ ಕಾಣುತ್ತಿಲ್ಲ. ಕಾರಣ ಶೋಷಿತ ಜನರ ಬಗ್ಗೆ ಬಿಜೆಪಿಗೆ ಬದ್ಧತೆಯಿಲ್ಲ. ಹಾಗಾಗಿ ನಾವು ಮತ್ತೆ ಅಧಿಕಾರಕ್ಕೆ ಬಂದಮೇಲೆ ವರದಿ ಸ್ವೀಕರಿಸುತ್ತೇವೆ.

ಶೋಷಿತರಿಗೆ ನ್ಯಾಯ ಸಿಗಲು ನನ್ನ ಅಧಿಕಾರಾವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕಷ್ಟಪಟ್ಟು ಮೀಸಲಾತಿ ರಥವನ್ನು ಇಲ್ಲಿಯವರೆಗೆ ಎಳೆದು ತಂದಿದ್ದೇನೆ. ಸಾಧ್ಯವಾದರೆ ಮುಂದಕ್ಕೆ ಎಳೆಯಿರಿ, ಇಲ್ಲವಾದರೆ ಅಲ್ಲಿಯೇ ಬಿಟ್ಟುಬಿಡಿ, ದಯವಿಟ್ಟು ರಥವನ್ನು ಹಿಂದಕ್ಕೆ ಮಾತ್ರ ಎಳೆಯಬೇಡಿ.

ಆಧುನಿಕ ಯಂತ್ರಗಳು ಬಂದಮೇಲೆ ಗಾಣಿಗ ಸಮಾಜದ ಉದ್ಯೋಗವನ್ನು ಕಸಿದುಕೊಂಡಿದೆ. ಈ ಸಮಾಜದವರು ಬರೀ ಎಣ್ಣೆ ತೆಗಿಯುವ ಉದ್ಯೋಗಕ್ಕೆ ಜೋತುಬೀಳದೆ ಶಿಕ್ಷಣದ ಕಡೆಗೆ ಹೆಚ್ಚು ಮಹತ್ವ ನೀಡಿ, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಪಡೆಯುವ ಪ್ರಯತ್ನ ಮಾಡಬೇಕು.

ಜಾತಿಯಿಂದ ಯಾರೂ ಬುದ್ದಿವಂತರೂ ಅಲ್ಲ, ದೊಡ್ಡವರೂ ಅಲ್ಲ. ರಾಮಾಯಣ, ಮಹಾಭಾರತ ಬರೆದವರು ಕೂಡ ಸಮಾಜದಿಂದ ಶೋಷಣೆಗೊಳಪಟ್ಟ ಜಾತಿಗೆ ಸೇರಿದವರೆ. ಜಾತಿಯಿಂದ ಜ್ಞಾನ, ಸಾಮರ್ಥ್ಯ ನಿರ್ಧಾರಿತವಾಗಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಸಾಧನೆಯ ಕಡೆಗೆ ಗಮನ ನೀಡಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News