ಜಾರ್ಜ್ ರಾಜೀನಾಮೆ ವಿಷಯಕ್ಕೆ ಬಲಿಯಾದ ಮೊದಲ ದಿನದ ಅಧಿವೇಶನ

ದಿನವೊಂದಕ್ಕೆ ಕೋಟಿ ಕೋಟಿ ಹಣ ವೆಚ್ಚಮಾಡಿ ನಡೆಸುತ್ತಿರುವ ಬೆಳಗಾವಿ ಅಧಿವೇಶನದ ಮೊದಲ ದಿನದ ಕಲಾಪ ವ್ಯರ್ಥವಾಗಿದೆ.

Last Updated : Nov 14, 2017, 01:10 PM IST
ಜಾರ್ಜ್ ರಾಜೀನಾಮೆ ವಿಷಯಕ್ಕೆ ಬಲಿಯಾದ ಮೊದಲ ದಿನದ ಅಧಿವೇಶನ title=

ಬೆಳಗಾವಿ: ಈ ಬಾರಿಯ ಹತ್ತು ದಿನದ ಚಳಿಗಾಲದ ಅಧಿವೇಶಕ್ಕೆ ಒಟ್ಟು 22 ಕೋಟಿ ಖರ್ಚು ಮಾಡಲಾಗುತ್ತಿದ್ದು, ದಿನವೊಂದಕ್ಕೆ ಕೋಟಿ ಕೋಟಿ ಹಣ ವೆಚ್ಚಮಾಡಲಾಗುತ್ತಿದೆ. ಆದರೆ ಇಷ್ಟೆಲ್ಲಾ ಖರ್ಚು ಮಾಡಿ ನಡೆಸುತ್ತಿರುವ ಬೆಳಗಾವಿ ಅಧಿವೇಶನದ ಮೊದಲ ದಿನದ ಕಲಾಪ ವ್ಯರ್ಥವಾಗಿದೆ. ಸಚಿವ ಜಾರ್ಜ್ ರಾಜೀನಾಮೆ ವಿಚಾರಕ್ಕೆ ಪರಿಷತ್ ಕಲಾಪ ಬಲಿಯಾಗಿದೆ. ಗದ್ದಲದಿಂದ ಕೂಡಿದ ಕಲಾಪದಲ್ಲಿ ಈಶ್ವರಪ್ಪ ಹಾಗೂ ಸಿಎಂ ರಾಜಕೀಯವಾಗಿ ಪರಸ್ಪರ ಸವಾಲೆಸೆದುಕೊಂಡಿದ್ದಾರೆ. 

ಸಚಿವ ಕೆ.ಜೆ. ಜಾರ್ಜ್ ಯಾವ ಕಾರಣಕ್ಕೂ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪರಿಷತ್ ನಲ್ಲಿ ಕಡ್ಡಿಮುರಿದಂತೆ ಹೇಳಿದರು. ಇದಕ್ಕೆ ಪ್ರತಿಪಕ್ಷ ನಾಯಕ ಈಶ್ವರಪ್ಪ ಜಾರ್ಜ್ ರಾಜೀನಾಮೆ ನೀಡುವ ತನಕ ಪ್ರತಿಭಟನೆ ಕೈ ಬಿಡಲ್ಲ ಎಂದು ಪಟ್ಟು ಹಿಡಿದಿದ್ದರು. ರಾಜಕೀಯವಾಗಿ ಬಂದರೆ, ನಾವೂ ರಾಜಕೀಯವಾಗಿಯೇ ಎದುರಿಸುತ್ತೇವೆ ಎಂದು ಸಿಎಂ ಎಸೆದ ಸವಾಲನ್ನು ಸ್ವೀಕರಿಸಿದ ಈಶ್ವರಪ್ಪ, ಕಳೆದ ಚುನಾವಣೆಯಲ್ಲಿ ಕೆಜೆಪಿ ಬಿಜೆಪಿ ಕಿತ್ತಾಟದ ನಡುವೆ ಲಾಟರಿ ಹೊಡೆದು ಸಿಎಂ ಆದ್ರಿ ಎಂದು ಸಿದ್ದರಾಮಯ್ಯರನ್ನು ಕುಟುಕಿದರು.

ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸಚಿವ ಕೆ.ಜೆ. ಜಾರ್ಜ್ ವಿರುದ್ದ ನಿಲುವಳಿ ಸೂಚನೆಗೆ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು. ಆ ಸಸಂದರ್ಭದಲ್ಲೂ ಗದ್ದಲ ಉಂಟಾಯಿತು. ಉಗ್ರಪ್ಪ, ಸಚಿವ ರಮೇಶ್ ಕುಮಾರ್ ಹಾಗೂ ಈಶ್ವರಪ್ಪ ನಡುವೆ ಮಾತಿನ ಚಕಮಕಿ ನಡೆಯಿತು. ಸಚಿವ ರಮೇಶ್ ಕುಮಾರ್ ಹಾಗೂ ಸಭಾಪತಿ ಶಂಕರಮೂರ್ತಿ ನಡುವೆಯೂ ವಾಗ್ದಾಳಿ ನಡೆಯಿತು. 

ನಿಲುವಳಿ ಪ್ರಸ್ತಾಪವನೆ ವೇಳೆ ಮಾತನಾಡಲು ಆಡಳಿತ ಪಕ್ಷ ಅವಕಾಶ ನೀಡುತ್ತಿಲ್ಲ ಎಂದು ಬಿಜೆಪಿ ಸದಸ್ಯರು ಬಾವಿಗಿಳು ಧರಣಿ ನಡೆಸಿದರು.

ಮಧ್ಯಾಹ್ನದ ನಂತರವೂ ಬಿಜೆಪಿಯವರು ಧರಣಿ ಮುಂದುವರೆಸಿದ್ರು.  ಜಾರ್ಜ್ ರಾಜೀನಾಮೆಗೆ ಪಟ್ಟು ಹಿಡಿದ ಕಾರಣ ಇಡೀ ದಿನದ ಕಲಾಪ ಕಿತ್ತಾಟದಿಂದಲೇ ಮುಗಿದುಹೋಯ್ತು. 

ಬೆಳಿಗ್ಗೆ ಕಲಾಪ ಆರಂಭವಾದಾಗ ಸಚಿವರುಗಳೇ ಬಂದಿಲ್ಲ ಎಂದು ಆರೋಪಿಸಿ ಬಿಜೆಪಿಯವರು ಸಭಾತ್ಯಾಗ ಮಾಡಿದರು. ಒಟ್ಟಿನಲ್ಲಿ ಇಡಿ ದಿನದ ಪರಿಷತ್ ಕಲಾಪ ರಾಜ್ಯದ ಜನರಿಗೆ ಒಂದಿಷ್ಟು ಉಪಯೋಗವಿಲ್ಲದೆ ಮುಗಿದಿದ್ದು ಮಾತ್ರ ವಿಪರ್ಯಾಸ. 

Trending News