ನವದೆಹಲಿ: ದೇಶದ ಎಲ್ಲಾ ವಾಣಿಜ್ಯ ವಾಹನಗಳಿಗೆ ಏಪ್ರಿಲ್ 1, 2020 ರಿಂದ ಜಿಎಸ್ಟಿಎನ್ಎ ವೇ ಬಿಲ್ಲುಗಳ ವ್ಯವಸ್ಥೆಗೆ ಫಾಸ್ಟ್ ಟ್ಯಾಗ್ ನೊಂದಿಗೆ ಸಮನ್ವಯಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದರು.
ನವದೆಹಲಿಯಲ್ಲಿ ಸೋಮವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆಯೋಜಿಸಿದ್ದ ಏಕರೂಪದ ತೆರಿಗೆ ಟೂಲ್ ಶುಲ್ಕ ಕುರಿತ 'ಒನ್ ನೇಷನ್- ಒನ್ ಫಾಸ್ಟ್ಯಾಗ್' ಶೀರ್ಷಿಕೆಯ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ, ಪ್ರಸ್ತುತವಾಗಿ ಮ್ಯಾನ್ಯೂಯಲ್ ಟೋಲ್ ರೀತಿಯಲ್ಲಿ ಸಂಗ್ರಹ ಮಾಡಲಾಗುತ್ತಿದೆ. ಇದರಿಂದ ಟೋಲ್ ಪ್ಲಾಜಾಗಳಲ್ಲಿ ವಾಹನ ಸಂಖ್ಯೆ ಹೆಚ್ಚಳವಾಗಿ ಪ್ರಯಾಣಿಕರಿಗೆ ಹೆಚ್ಚಿನ ಸಮಯ ಹಾಗೂ ಅನವಶ್ಯಕ ತೊಂದರೆಯಾಗುತ್ತಿದೆ. ವಾಹನಗಳು ಹೆಚ್ಚು ಹೊತ್ತು ಕಾಯುವಿಕೆಯಿಂದ ಅನಾವಶ್ಯಕವಾಗಿ ಇಂಧನ ವ್ಯರ್ಥವಾಗುತ್ತದೆ ಹಾಗೂ ಪರಿಸರ ಮಾಲಿನ್ಯ ಉಂಟಾಗುತ್ತದೆ. ಕಾಯುವಿಕೆಯಿಂದ ಮಾನವ ಸಂಪನ್ಮೂಲವೂ ಸಹಾ ವ್ಯರ್ಥವಾಗುತ್ತದೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಫಾಸ್ಟ್ ಟ್ಯಾಗ್ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಈ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ಶೇಕಡ 50 ರಷ್ಟು ಬಂಡವಾಳ ವೆಚ್ಚ ಹಾಗೂ ಶೇಕಡ 80 ರಷ್ಟು ನಿರ್ವಹಣಾ ವೆಚ್ಚವನ್ನು ಭರಿಸಲಿದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 32 ರಸ್ತೆಗಳಲ್ಲಿ ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಅಳವಡಿಸಲು ಕೇಂದ್ರ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ರಾಜ್ಯ ಸರ್ಕಾರಗಳೊಂದಿಗೆ ಕೇಂದ್ರ ಸರ್ಕಾರವು ಒಡಂಬಡಿಕೆ ಮಾಡಿಕೊಳ್ಳಲಿದೆ. ರಾಜ್ಯದಲ್ಲಿ 40 ರಸ್ತೆಗಳ 2480 ಕಿಲೋ ಮೀಟರ್ ಹೊರ ರಸ್ತೆಗಳ ಮಂಜೂರಾತಿಗೆ ಕೇಂದ್ರ ಭೂ ಸಾರಿಗೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.