ಡಾ.ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹೆಚ್.ಡಿ.ದೇವೇಗೌಡರು

H.D. Devegowda: ನಮ್ಮ ದೇಶ ಆರ್ಥಿಕವಾಗಿ ಭೀಕರ ಪರಿಸ್ಥಿತಿಯಲ್ಲಿದ್ದಾಗ ಹಣಕಾಸು ಸಚಿವರಾಗಿ ಬಂದ ಡಾ.ಮನಮೋಹನ್ ಸಿಂಗ್ ಅವರು ಸಮರ್ಥವಾಗಿ ಕೆಲಸ ಮಾಡಿದರು ಹಾಗೂ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತಂದರು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.

Written by - Savita M B | Last Updated : Dec 27, 2024, 03:32 PM IST
  • ಇದು ಅತ್ಯಂತ ದುಃಖದ ದಿನ. ಅವರ ನಿಧನ ನನಗೆ ಬಹಳ ನೋವುಂಟು ಮಾಡಿದೆ.
  • ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ಮಾಜಿ ಪ್ರಧಾನಿಗಳು ನೆನಪು ಮಾಡಿಕೊಂಡರು.
ಡಾ.ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹೆಚ್.ಡಿ.ದೇವೇಗೌಡರು title=

ಬೆಂಗಳೂರು: ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮನಮೋಹನ್ ಸಿಂಗ್ ಅವರ ಶ್ರದ್ಧಾಂಜಲಿ ಸಮರ್ಪಣೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇದು ಅತ್ಯಂತ ದುಃಖದ ದಿನ. ಅವರ ನಿಧನ ನನಗೆ ಬಹಳ ನೋವುಂಟು ಮಾಡಿದೆ. ನಾನು ಮನಮೋಹನ್ ಸಿಂಗ್ ಅವರನ್ನು ನೋಡಿದ್ದು 1991ರಲ್ಲಿ, ಲೋಕಸಭೆಯಲ್ಲಿ. ನಾನು ಕೂಡ ಮೊದಲ ಬಾರಿಗೆ ಲೋಕಸಭೆಗೆ ಹೋಗಿದ್ದೆ. ಅವರು ಪಿ.ವಿ.ನರಸಿಂಹ ರಾವ್ ಸರಕಾರದಲ್ಲಿ ಆರ್ಥಿಕ ಸಚಿವರಾಗಿದ್ದರು. ನಮ್ಮ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಸರಿಪಡಿಸಲು ಅನೇಕ ಪ್ರಯತ್ನಗಳನ್ನು ಮಾಡಿದರು. ಆ ಸಂದರ್ಭದಲ್ಲಿ ಆರ್ಥಿಕವಾಗಿ ದೇಶದ ಸ್ಥಿತಿ ಬಹಳ ಹದಗೆಟ್ಟಿತ್ತು. ಅದಕ್ಕೂ ಹಿಂದೆ 130 ಟನ್ ಚಿನ್ನವನ್ನು ಒತ್ತೆ ಇಡಲಾಗಿತ್ತು. ಅಂತಹ ಭೀಕರ ಪರಿಸ್ಥಿತಿ ಇತ್ತು. ಆ ಸನ್ನಿವೇಶದಲ್ಲಿ ಮನಮೋಹನ್ ಸಿಂಗ್ ಆರ್ಥಿಕ ಸಚಿವರಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ಮಾಜಿ ಪ್ರಧಾನಿಗಳು ನೆನಪು ಮಾಡಿಕೊಂಡರು.

ಮನಮೋಹನ್ ಸಿಂಗ್ ಅವರನ್ನು ನಾನು ಬಹಳ ಟೀಕೆ ಮಾಡಿದ್ದೆ. ಅವರ ನೀತಿಗಳನ್ನು ಪ್ರಶ್ನೆ ಮಾಡಿದ್ದೆ. ಖಾಸಗೀಕರಣ, ವಿದೇಶದಿಂದ ಹಣ ಬರಲು ನಮ್ಮ ದೇಶದ ಆರ್ಥಿಕ ನೀತಿಗಳನ್ನು  ಮಾರ್ಪಾಡು ಮಾಡಿ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದರು. ಇದು ಬಹಳ ದೊಡ್ಡ ಬೆಳವಣಿಗೆ ಎಂದು ಮಾಜಿ ಪ್ರಧಾನಿಗಳು ಬಣ್ಣಿಸಿದರು.

ಮನಮೋಹನ್ ಸಿಂಗ್ ಅವರು ಸರಳ ಸಜ್ಜನ ಪ್ರಾಮಾಣಿಕ ವ್ಯಕ್ತಿ ಆಗಿದ್ದವರು. ನಾವು ಪಕ್ಷ ರಾಜಕಾರಣವನ್ನು ಹೊರತುಪಡಿಸಿ ಅವರನ್ನು ನೆನೆಯುತ್ತಿದ್ದೇವೆ. ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ನಮ್ಮ ಪಕ್ಷದ ಪರವಾಗಿ, ವೈಯಕ್ತಿಕವಾಗಿ ಮನಮೋಹನ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದ್ದಾರೆ ಎಂದರು ಅವರು. 

ನರಸಿಂಹರಾವ್ ಸರಕಾರದಲ್ಲಿ ಈ ದೇಶದ ಗೌರವ ಉಳಿಸಲು ಆರ್ಥಿಕ ತಜ್ಞರಾಗಿ ಮನಮೋಹನ್ ಸಿಂಗ್ ಅವರು ಸೇವೆ ಸಲ್ಲಿಸಿದ್ದರು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದೇಶವನ್ನು ಪಾರು ಮಾಡಿ ಗೌರವ ಉಳಿಸಿದ್ದು ಅವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಹೇಳುತ್ತ ಮಾಜಿ ಪ್ರಧಾನಿಗಳು ಗದ್ಗದಿತರಾದರು.

ದೇಶಕ್ಕೆ ಮನಮೋಹನ್ ಸಿಂಗ್ ಅವರು ಸುಧೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಮುತ್ಸದಿ ರಾಜಕಾರಣಿ ಹಿರಿಯ ರಾಜಕಾರಣಿ 92 ವಯಸ್ಸಲ್ಲಿ ಅಗಲಿದ್ದಾರೆ. ವಯಕ್ತಿಕ ನನಗೆ ತುಂಬಾ ಬೇಸರವಾಗಿದೆ. ಅವರ ಆತ್ಮಕ್ಕೆ ಭಗವಂತ ಮೋಕ್ಷ ಕೊಡಲಿ, ಪರಮಾತ್ಮ ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ನೀಡಲಿ ಎಂದು ಭಾವುಕರಾದರು.

ದೇಶದಲ್ಲಿ ಯಾವುದೇ ಸರಕಾರಿ ಕಾರ್ಯಕ್ರಮ ಮಾಡಬಾರದು. ಶೋಕಾಚರಣೆ ಇದೆ. ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಕೊಡಬೇಕು. ಅವರು ನಮ್ಮ ದೇಶಕ್ಕೆ ಸುಧೀರ್ಘ ಸೇವೆ ಸಲ್ಲಿಸಿದ್ದಾರೆ. ಮುತ್ಸದಿ ರಾಜಕಾರಣಿ ಹಿರಿಯ ರಾಜಕಾರಣಿ ತಮ್ಮ 92ನೇ ವಯಸ್ಸಿನಲ್ಲಿ ನಮ್ಮನ್ನೆಲ್ಲಾ ಅಗಲಿದ್ದಾರೆ ದೇವೇಗೌಡರು ಹೇಳಿದರು.

ಅವರು ಜಾರಿ ಮಾಡಿದ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳ ಮೂಲಕ ದೇಶಕ್ಕೆ ವಿದೇಶಿ ನೇರ ಬಂಡವಾಳ ದೊಡ್ಡ ಪ್ರಮಾಣದಲ್ಲಿ ಹರಿದು ಬಂತು.  ಹಣಕಾಸು ಸಚಿವರಾಗಿ ಬರುವುದಕ್ಕೆ ಮೊದಲು ಅವರು ಜಾಗತಿಕ ಮಟ್ಟದಲ್ಲಿ ಕೆಲಸ ಮಾಡಿದ್ದರು. ಹೀಗಾಗಿ ಅಲ್ಲಿ ಬಹಳ ದೊಡ್ಡ ಅನುಭವ ಗಳಿಸಿಕೊಂಡರು. ಆರ್ಥಿಕ ವಿಚಾರದಲ್ಲಿ ಅವರು  ತುಂಬಾ ಬುದ್ದಿವಂತರಾಗಿದ್ದರು ಎಂದು ದೇವೇಗೌಡರು ಮನಮೋಹನ್ ಸಿಂಗ್ ಅವರನ್ನು ಸ್ಮರಿಸಿದರು.

ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಮಾಜಿ ಶಾಸಕ ಲಿಂಗೇಶ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News