ಅದ್ದೂರಿಯಾಗಿ ನಡೆದ ಗವಿಸಿದ್ದೇಶ್ವರ ರಥೋತ್ಸವ; ದಕ್ಷಿಣ ಭಾರತದ ಕುಂಬಮೇಳದಲ್ಲಿ ಲಕ್ಷಾಂತರ ಭಕ್ತರು

ಜಾತ್ರೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಇಲಾಖೆ ಸುಮಾರು 1200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಿ ಸೂಕ್ತ ಬಂದೋಬಸ್ತ್‌ ವ್ಯವಸ್ತೆ ಮಾಡಿತ್ತು.

Written by - Zee Kannada News Desk | Last Updated : Jan 8, 2023, 06:34 PM IST
  • ಅದ್ದೂರಿಯಾಗಿ ನಡೆದ ಕೊಪ್ಪಳದ ಗವಿಸಿದ್ದೇಶ್ವರ ಮಠದ ರಥೋತ್ಸವ
  • ದಕ್ಷಿಣ ಭಾರತದ ಕುಂಬಮೇಳವೆಂದೇ ಪ್ರಸಿದ್ಧಿಯಾಗಿರುವ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿ
  • ರಥೋತ್ಸವಕ್ಕೆ ಚಾಲನೆ ನೀಡಿದ ಇಶಾ ಫೌಂಡೇಶನ್ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್
ಅದ್ದೂರಿಯಾಗಿ ನಡೆದ ಗವಿಸಿದ್ದೇಶ್ವರ ರಥೋತ್ಸವ; ದಕ್ಷಿಣ ಭಾರತದ ಕುಂಬಮೇಳದಲ್ಲಿ ಲಕ್ಷಾಂತರ ಭಕ್ತರು title=
ಕೊಪ್ಪಳದ ಗವಿಸಿದ್ದೇಶ್ವರ ಮಠದ ರಥೋತ್ಸವ

ಕೊಪ್ಪಳ: ದಕ್ಷಿಣ ಭಾರತದ ಕುಂಬಮೇಳವೆಂದೇ ಪ್ರಸಿದ್ಧಿಯಾಗಿರುವ ಕೊಪ್ಪಳದ ಗವಿಸಿದ್ದೇಶ್ವರ ರಥೋತ್ಸವ ಅದ್ದೂರಿಯಾಗಿ ನಡೆದಿದೆ. ನಾನಾ ಊರುಗಳಿಂದ ಗವಿಮಠದ ಜಾತ್ರೆಗೆ ಆಗಮಿಸಿದ್ದ ಲಕ್ಷಾಂತರ ಭಕ್ತರು ಅಜ್ಜನ ದರ್ಶನ ಪಡೆದುಕೊಂಡರು.

ಕರಾವಳಿಯಲ್ಲಿ ಜಾತ್ರೆ ಬಂದರೆ ಧರ್ಮ ದಂಗಲ್ ಕಾಟ ಹೆಚ್ಚಾಗುತ್ತದೆ. ಆದರೆ ಕಲ್ಯಾಣ ಕರ್ನಾಟಕದ ಕೊಪ್ಪಳದಲ್ಲಿ ಜಾತಿ-ಮತ, ಪಂಥ ಎನ್ನದೇ ಸರ್ವ ಧರ್ಮದವರು ಒಂದೆಡೆ ಸೇರಿ ಜಾತ್ರೆ ಆಚರಿಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಕೊಪ್ಪಳದ ಗವಿಮಠದ ಮುಂದಿನ ಆವರಣದಲ್ಲಿ ನಿಂತಿರುವ ರಥೋತ್ಸವದ ಮುಂದೆ ಭಾವೈಕ್ಯೆತೆಗೆ ಸಾಕ್ಷಿ ಎಂಬಂತೆ ಹಾಕಿರುವ ರಂಗೋಲಿ ಜಾತ್ರೆಗೆ ಬರುವ ಭಕ್ತರನ್ನು ಮನಸೆಳೆಯುತ್ತಿತ್ತು‌. ಓಂ ಚಿಹ್ನೆ ಆಕಾರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮದ ಚಿಹ್ನೆಯನ್ನು ಒಂದೆಡೆ ಸೇರಿಸಿ ರಂಗೋಲಿ ಬಿಡಿಸಲಾಗಿತ್ತು.

ಇನ್ನೂ ಜಾತ್ರೆಗೆ ಬಂದಿದ್ದ ಲಕ್ಷಾಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಿ ನೋಡಿದ್ರೂ ರೊಟ್ಟಿಯ ರಾಶಿ.. ಕ್ವಿಂಟಲ್ ಗಟ್ಟಲೇ‌ ಅನ್ನ, ದೊಡ್ಡ ದೊಡ್ಡ ಪಾತ್ರೆಯಲ್ಲಿ ಸಾಂಬಾರ್ ಹಾಗೂ ಭಕ್ತರಿಗಾಗಿ ಬರೋಬ್ಬರಿ 275‌  ಕ್ವಿಂಟಾಲ್ ಮಾದಲಿಯನ್ನು ಸಿದ್ಧಪಡಿಸಲಾಗಿತ್ತು. ಇನ್ನೂ ಗವಿ ಮಠದ  ಅಭಿನವ ಗವಿಸಿದ್ದೇಶ್ವರ ಶ್ರೀಗಳು ದಾಸೋಹ ಸ್ಥಳಕ್ಕೆ ಆಗಮಿಸಿ ಭಕ್ತರಿಗೆ ಪ್ರಸಾದ ನೀಡಿದರು. ಅಡುಗೆ ಸಿದ್ಧತೆಯಲ್ಲಿರುವರನ್ನು ವಿಚಾರಿಸಿ ಮಾತನಾಡಿಸುತ್ತಾ ಪ್ರೋತ್ಸಾಹಿಸಿದರು.

ಇದನ್ನೂ ಓದಿ: 2A ಮೀಸಲಾತಿ ವಿಚಾರ: ಸರ್ಕಾರಕ್ಕೆ ಮತ್ತೆ ಗಡುವು ನೀಡಿದ ಜಯಮೃತ್ಯುಂಜಯ ಸ್ವಾಮೀಜಿ!

ಅಂದಹಾಗೇ ದಕ್ಷಿಣ ಭಾರತದ ಕುಂಬಮೇಳವೆಂದೇ ಈ  ಜಾತ್ರೆ ಪ್ರಸಿದ್ಧಿಯಾಗಿದೆ. ಸಂಜೆ ಸರಿಯಾಗಿ 5:30ಕ್ಕೆ ಅಜ್ಜನ ಮಹಾರಥೋತ್ಸವ ಜರುಗಿತು. ಗವಿಮಠದ ಕೈಲಾಸ ಮಂಟಪದಲ್ಲಿ ಜಾತ್ರೆಗೆ ಈಶಾ ಫೌಂಡಶೇನ್‍ನ ಸದ್ಗುರು ಜಗ್ಗಿ ವಾಸುದೇವ್ ಚಾಲನೆ‌ ನೀಡಿದರು. ಮಠದ ಆವರಣದಲ್ಲಿ‌ ನೆರೆದಿದ್ದ ಭಕ್ತರು ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದ್ದಾರೆ. ಕಳೆದ 2 ವರ್ಷ ಕೊರೊನಾ ಸಾಂಕ್ರಾಮಿಕದಿಂದ ಸರಳವಾಗಿ ಜಾತ್ರೆ ನಡೆದಿತ್ತು.‌ ಆದರೆ ಈ ಬಾರಿಯ ಜಾತ್ರೆಗೆ ಕನಿಷ್ಟ 5-6 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು ಎಂದು ಅಂದಾಜಿಸಲಾಗಿದೆ.    

ಇಂದಿನಿಂದ 3 ದಿನಗಳ ಕಾಲ ನಡೆಯಲಿರುವ ಜಾತ್ರೆಯಲ್ಲಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 1 ತಿಂಗಳ ಕಾಲ ಜಾತ್ರೆ ಜರುಗಲಿದೆ. ಇನ್ನು ಜಾತ್ರೆಗೆ ಬರುವ ಭಕ್ತರಿಗಾಗಿ 15 ದಿನಗಳ ಕಾಲ ನಿರಂತರ ಪ್ರಸಾದ ವ್ಯವಸ್ಥೆಯನ್ನು ಶ್ರೀ ಗವಿಮಠ ಕೈಗೊಂಡಿದೆ. ಈ ಹಿನ್ನೆಲೆ  ಈಗಾಗಲೇ ಮಠದ ಪಕ್ಕದಲ್ಲಿ ಬೃಹತ್​ ದಾಸೋಹ ಮಂಟಪವನ್ನು ನಿರ್ಮಾಣ ಮಾಡಲಾಗಿದ್ದು, ದವಸ ಧಾನ್ಯ, ಸಿಹಿ ಪದಾರ್ಥ, ರೋಟ್ಟಿ ಸೇರಿದಂತೆ ಹಲವು ಪದಾರ್ಥಗಳು ದಾಸೋಹಕ್ಕೆ ಹರಿದು ಬರುತ್ತಿವೆ.

ಜಾತ್ರೆ ಹಿನ್ನೆಲೆ ಈಗಾಗಲೇ ಮಠಕ್ಕೆ ಭಕ್ತ ಸಾಗರ ಹರಿದು ಬಂರುತ್ತಿದೆ. ಕೊರೊನಾ ನಂತರ ಮತ್ತೊಮ್ಮೆ ಅಜ್ಜನ ಜಾತ್ರೆಯನ್ನು ನೋಡಿ ಭಕ್ತಗಣ ಕಣ್ತುಂಬಿಕೊಂಡು ಖುಷಿಪಟ್ಟಿದೆ. ಇದರ‌ ನಡುವೆ ಗವಿಮಠದ‌ ಅಜ್ಜ ಹೇಳಿರುವಂತೆ ಈ ಸಲ ಜಾತ್ರೆ ಹುಚ್ಚು ಬೀಡಬೇಕು ಎಂದಿರುವುದು ಭಕ್ತರ ಉತ್ಸಾಹಕ್ಕೆ ಮತ್ತಷ್ಟು ಪ್ರೇರಣೆಯಾಗಿದೆ.

ಇದನ್ನೂ ಓದಿ: "ಸುಳ್ಳು ಹೇಳದೇ ಬಿಜೆಪಿಯವರು ಬದುಕಲು ಸಾಧ್ಯವಿಲ್ಲ"

ಸಂಜೆ ರಥೋತ್ಸವದ ಬಳಿಕ ಮಠದ ಮೇಲಿನ ಬೆಟ್ಟದಲ್ಲಿನ ಕೈಲಾಸ ಮಂಟಪದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಇಲಾಖೆ ಸುಮಾರು 1200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಸೂಕ್ತ ಬಂದೋಬಸ್ತ್‌ ವ್ಯವಸ್ತೆ ಮಾಡಿತ್ತು. ಒಟ್ಟಿನಲ್ಲಿ 2 ವರ್ಷದ ನಂತರ ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಸಿದ್ಧಿ ಪಡದಿರುವ ಗವಿಮಠದ ಗವಿಸಿದ್ದೇಶ್ವರ ಜಾತ್ರೆಯನ್ನು ಕಣ್ತುಂಬಿಕೊಂಡ ಅಪಾರ ಸಂಖ್ಯೆಯ ಭಕ್ತಗಣ ಭಕ್ತಿ ಭಾವ ಮೆರೆಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News