ಪುಲ್ವಾಮಾದಲ್ಲಿ ಮತ್ತೊಂದು ಉಗ್ರದಾಳಿಯನ್ನು ವಿಫಲಗೊಳಿಸಿದ ಭದ್ರತಾಪಡೆಗಳು

ಪುಲ್ವಾಮಾದ ಅಯನಗುಂಡ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಸ್ಫೋಟಕಗಳಿಂದ ತುಂಬಿದ ಸ್ಯಾಂಟ್ರೊ ಕಾರೊಂದನ್ನು ವಶಕ್ಕೆ ಪಡೆದು ಅದನ್ನು ಸ್ಫೋಟಿಸಿದ್ದಾರೆ.  

Last Updated : May 28, 2020, 12:44 PM IST
ಪುಲ್ವಾಮಾದಲ್ಲಿ ಮತ್ತೊಂದು ಉಗ್ರದಾಳಿಯನ್ನು ವಿಫಲಗೊಳಿಸಿದ ಭದ್ರತಾಪಡೆಗಳು  title=

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪುಲ್ವಾಮಾದಂತಹ ಮತ್ತೊಂದು ಸಂಚನ್ನು ವಿಫಲಗೊಳಿಸಲಾಗಿದೆ. ಪುಲ್ವಾಮಾದ ಅಯನಗುಂಡ್ ಪ್ರದೇಶದಲ್ಲಿ ಭದ್ರತಾ ಪಡೆಯ ಯೋಧರು ಭಾರಿ ಸ್ಫೋಟಕಗಳಿಂದ ತುಂಬಿದ್ದ ಸ್ಯಾಂಟ್ರೋ ಕಾರೊಂದನ್ನು ವಶಕ್ಕೆ ಪಡೆದಿದ್ದಾರೆ. ಈ ಕಾರಿನಲ್ಲಿ ಐಇಡಿ ಸಹ ಇಡಲಾಗಿತ್ತು. ಅನುಮಾನಾಸ್ಪದ ರೀತಿಯಲ್ಲಿ ಈ ಕಾರನ್ನು ನಿಲ್ಲಿಸಲಾಗಿತ್ತು. ತನಿಖೆ ನಡೆಸಿದಾಗ ಅದರಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳಿರುವುದು ಪತ್ತೆಯಾಗಿದೆ.

ಕಾರನ್ನು ಅಲ್ಲಿಂದ ಸ್ಥಳಾಂತರಿಸುವುದು ಸಾಧ್ಯವಾಗಿರದ ಕಾರಣ ಭದ್ರತಾ ಪಡೆಗಳು ಆ ಕಾರನ್ನು ಅಲ್ಲಿಯೇ ನಿಯಂತ್ರಿತ ಸ್ಫೋಟಕಗಳನ್ನು ಬಳಸುವ ಮೂಲಕ ಸ್ಫೋಟಿಸಿದ್ದಾರೆ. ಈ ಕಾರಿನಲ್ಲಿ ತುಂಬಿದ್ದ ಭಾರಿ ಪ್ರಮಾಣದ ಸ್ಫೋಟಕಗಳ ಕಾರಣ ಈ ಸ್ಫೋಟದಿಂದ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ಭಾರಿ ಹಾನಿ ಉಂಟಾಗಿದೆ ಹಾಗೂ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ.

ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಜಮ್ಮು ಮತ್ತು ಕಾಶ್ಮೀರದ ಪೋಲೀಸ್ IG ವಿಜಯ್ ಕುಮಾರ್, ಜೈಶ್-ಎ-ಮೊಹಮ್ಮದ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರು ಪುಲ್ವಾಮಾದಂತಹ ಮತ್ತೊಂದು ದಾಳಿಗೆ ಸಜ್ಜಾಗಿದ್ದಾರೆ ಎಂಬ ಮಾಹಿತಿ ಪೊಲೀಸರು ಹಾಗೂ ಭದ್ರತಾಪಡೆಗಳಿಗೆ ಮೊದಲೇ ಲಭಿಸಿತ್ತು. ಅಷ್ಟೇ ಅಲ್ಲ ಬಿಳಿ ಬಣ್ಣದ ಸ್ಯಾಂಟ್ರೋ ಕಾರ್ ನಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ಸಾಗಿಸಲಾಗುತ್ತಿದೆ ಎಂದೂ ಕೂಡ ತಿಳಿದುಬಂದಿತ್ತು. ಈ ಮಾಹಿತಿಯ ಹಿನ್ನೆಲೆ ಇಂದು ಪೊಲೀಸರು ಪ್ರದೇಶದಲ್ಲಿ ಭಾರಿ ತನಿಖೆ ಕೈಗೊಂಡ ವೇಳೆ, ಅನುಮಾನಾಸ್ಪದ ರೀತಿಯಲ್ಲಿ ನಿಂತಿದ್ದ ಈ ಕಾರನ್ನು ಸುತ್ತುವರೆದಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಉಗ್ರ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ ಹಾಗೂ ಕಾರಿನಲ್ಲಿ ಸುಮಾರು 50 ಕೆ.ಜಿ ವಿಸ್ಫೋಟಕಗಳನ್ನೂ ಇಡಲಾಗಿತ್ತು ಎಂದು ಹೇಳಿದ್ದಾರೆ.

ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಪೊಲೀಸರು ಭಯೋತ್ಪಾದಕರ ಹುಡುಕಾಟದಲ್ಲಿ ನಿರತರಾಗಿದ್ದಾರೆ ಎಂದು ವಿಜಯ್ ಕುಮಾರ್ ಮಾಹಿತಿ ನೀಡಿದರು. ಈ ದಾಳಿಯ ಸಂಚು ನಿಷ್ಕ್ರೀಯಗೊಲಿಸಿದ್ದಕ್ಕಾಗಿ ಅವರು ಸಿಆರ್‌ಪಿಎಫ್ ಮತ್ತು ಸೈನ್ಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
 

Trending News