ವಿಚಿತ್ರ ಆದರೂ ಸತ್ಯ; ದೆವ್ವದ ವಿರುದ್ಧ ಪೋಲಿಸರಿಂದ ಎಫ್ಐಆರ್ ದಾಖಲು!

 'ಅಪರಿಚಿತ ದೆವ್ವ'ದ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ ವಿಚಿತ್ರ ಘಟನೆ ಶುಕ್ರವಾರ ನಡೆದಿದೆ.

Last Updated : Jul 7, 2018, 05:18 PM IST
ವಿಚಿತ್ರ ಆದರೂ ಸತ್ಯ; ದೆವ್ವದ ವಿರುದ್ಧ ಪೋಲಿಸರಿಂದ ಎಫ್ಐಆರ್ ದಾಖಲು! title=

ವಡೋದರಾ: ಮಹಿಳೆಯೊಬ್ಬಳ ಆತ್ಮಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ 'ಅಪರಿಚಿತ ದೆವ್ವ'ದ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ ವಿಚಿತ್ರ ಘಟನೆ ಶುಕ್ರವಾರ ನಡೆದಿದೆ.

ವಡೋದರಾ ಜಿಲ್ಲೆಯ ಪಡ್ರಾ ತಾಲ್ಲೂಕಿನ ಚೋಕರಿ ಗ್ರಾಮದಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಅದೃಷ್ಟವಶಾತ್ ಇದನ್ನು ಕಂಡ ಆಕೆಯ ಮನೆಯವರು, ಕೂಡಲೇ ಬೆಂಕಿ ಆರಿಸಿ, ಬಹುತೇಕ ಸುಟ್ಟಗಾಯಗಳಿಂದ ಕೂಡಿದ ಮಹಿಳೆಯನ್ನು ವಡೋದರಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. 

ಈ ಬಗ್ಗೆ ಪೊಲೀಸರು ವಿಚಾರಣೆ ಸಂದರ್ಭದಲ್ಲಿ ಆತ್ಮಹತ್ಯೆಗೆ ಕಾರಣ ಏನು ಎಂದು ಮಹಿಳೆಯನ್ನು ಕೇಳಿದ್ದಾರೆ. ಆಗ ಮಹಿಳೆ ಮನಿಷಾ ಪಡಿಹಾರ್ ತಾನು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತೆ ದೆವ್ವವೊಂದು ಹೇಳಿತು. ಅದರಂತೆ ತಾನು ಸೀಮೆಎಣ್ಣೆ ಸುರಿದುಕೊಂಡು ಬೆಂಕಿಕಡ್ಡಿಯನ್ನು ಗೀರಿ ಬೆಂಕಿ ಹಚ್ಚಿಕೊಂಡಿದ್ದಾಗಿ ಹೇಳಿದ್ದಾರೆ. 

ಪಾಪ, ಪೊಲೀಸರು ತಾನೇ ಏನು ಮಾಡಿಯಾರು? ಅವರೂ ಕೂಡ ಬಹಳ ಜವಾಬ್ದಾರಿಯುತವಾಗಿ ಕರ್ತವ್ಯಪ್ರಜ್ಞೆ ಮೆರೆದು 'ಅಪರಿಚಿತ ದೆವ್ವ'ದ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಎಲ್ಲರ ಪ್ರಶ್ನೆಗೂ ಮಹಿಳೆ ಇದೇ ಉತ್ತರ ನೀಡಿದ್ದಾಗಿ ಮನೆಯವರು ಹೇಳಿದ್ದಾರೆ. 

ಇತ್ತೀಚೆಗಷ್ಟೇ ದೆಹಲಿಯ ಬುರಾರಿ ಪ್ರದೇಶದಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ಆತ್ಮವೊಂದರ ಸೂಚನೆಗಳೇ ಕಾರಣ ಎಂದು ತನಿಖಾ ಸಂದರ್ಭದಲ್ಲಿ ತಿಳಿದುಬಂದಿತ್ತು. ಆದರೆ ಈ ಪ್ರಕರಣ ಇನ್ನೂ ನಿಗೂಢವಾಗಿರುವ ಬೆನ್ನಲ್ಲೇ ಮಹಿಳೆಯೊಬ್ಬಳು ತಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ದೆವ್ವ ಪ್ರೇರೇಪಿಸಿತು ಎಂದು ಹೇಳಿರುವುದು ನಿಜಕ್ಕೂ ಅಚ್ಚರಿ ಉಂಟುಮಾಡಿದೆ. 

Trending News