ಕುರುಕ್ಷೇತ್ರ: ನವವಿವಾಹಿತೆ ಮೇಲೆ ಪತಿಯ ಸಂಬಂಧಿಕರೇ ಸಾಮೂಹಿಕ ಅತ್ಯಾಚಾರ ನಡೆಸಿದ ಆತಂಕಕಾರಿ ಘಟನೆ ಹರಿಯಾಣದ ಯಮುನಾ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
"ಇದೇ ಸೆಪ್ಟೆಂಬರ್ 12ರಂದು ತಮ್ಮ ಮಗಳನ್ನು ಯುಮುನಾ ನಗರ ಪ್ರದೇಶದ ನಿವಾಸಿಯೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಆಕೆಯ ಮಾವನ ಮನೆಯವರು ಮಹಿಳೆಯ ತಂದೆಯನ್ನು ಕರೆಸಿ, ಮಗಳು ಮಾನಸಿಕವಾಗಿ ಅಸ್ವಸ್ಥೆಯಾಗಿರುವುದಾಗಿ ತಿಳಿಸಿದ್ದರು. ಕೂಡಲೇ ಅವರ ಮನೆಗೆ ತೆರಳಿ ನೋಡಿದಾಗ ಮಹಿಳೆ ಪ್ರಜ್ಞೆತಪ್ಪಿ ಬಿದ್ದಿದ್ದಾಗಿಯೂ, ಬಳಿಕ ಘಟನೆಯನ್ನು ತಂದೆಗೆ ವಿವರಿಸಿದ್ದಾಗಿಯೂ ಎಂದು ಸಂತ್ರಸ್ತ ಮಹಿಳೆ ತಂದೆ ಪೋಲಿಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ವಿವರಣೆ ನೀಡಿದ್ದಾರೆ.
"ಮದುವೆಯಾದ ಮೊದಲ ದಿನವೇ ಮನೆಯಲ್ಲಿ ಏನೂ ರಹಸ್ಯವಾಗಿ ನಡೆಯುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಆಕೆಗೆ ಪ್ರಜ್ಞೆತಪ್ಪಿಸುವ ಔಷಧಿ ನೀಡಿ, ಪತಿಯ ಸಹೋದರ ಮತ್ತು ತಂಗಿಯ ಗಂಡನೊಂದಿಗೆ ಲೈಂಗಿಕ ಚಟುವಟಿಕೆ ನಡೆಸುವಂತೆ ಮಾಡಲಾಗಿದೆ. ನಂತರ ಆಕೆಗೆ ಅರಿವಿಲ್ಲದಂತೆಯೇ ಮುಂದಿನ ಮೂರು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ" ಎಂದು ತಂದೆ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಆಕೆಯ ಅತ್ತೆ ಮತ್ತು ನಾದಿನಿಯರೂ ಪಾತ್ರ ವಹಿಸಿದ್ದು, ಅತ್ಯಾಚಾರದ ನಂತರ ಸಾಕ್ಷಿ ನಾಶಗೊಳಿಸಲು ಮಗಳ ಬಟ್ಟೆಗಳನ್ನು ಬೆಂಕಿ ಹಚ್ಚಿ ಸುಟ್ಟಿದ್ದಾರೆ ಎಂದು ಸಂತ್ರಸ್ತೆ ತಂದೆ ಆರೋಪಿಸಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದ್ದು, ಪ್ರಕರಣವನ್ನು ಯಮುನಾನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.