ನವದೆಹಲಿ: ಗಡಿಭಾಗದಲ್ಲಿ ಚೀನಾ ಕೈಗೊಂಡ ಕ್ರಮದ ಬಳಿಕ ಇದೀಗ ಇಡೀ ದೇಶದಲ್ಲಿ ಚೀನಾ ವಿರುದ್ಧ ಕೋಪದ ವಾತಾವರಣವಿದೆ.ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕುರಿತಂತೆ ಹೆಚ್ಚಾಗುತ್ತಿರುವ ಬೇಡಿಕೆಗಳ ಹಿನ್ನೆಲೆ ಸರ್ಕಾರ ಕೂಡ ಚೀನಾದಿಂದ ಆಮದು ಕಡಿಮೆ ಮಾಡಲು ದೊಡ್ಡ ಯೋಜನೆಗಳನ್ನು ರೂಪಿಸುತ್ತಿದೆ. ಚೀನಾದಿಂದ ಆಮದಾಗುತ್ತಿರುವ ಸರಕುಗಳ ಮೇಲೆ ಕಸ್ಟಮ್ ಸುಂಕವನ್ನು ಹೆಚ್ಚಿಸಲು ಇದೀಗ ಸರ್ಕಾರ ಚಿಂತನೆ ನಡೆಸುತ್ತಿದೆ. ಇನ್ನೊಂದೆಡೆ ಇ-ಕಾಮರ್ಸ್ ಕಂಪನಿಗಳಿಗೂ ಕೂಡ ನೂತನ ನೀತಿ ಜಾರಿಗೆ ತರಲು ಸರ್ಕಾರ ಚಿಂತಿಸುತ್ತಿದ್ದು, ಶೀಘ್ರದಲ್ಲಿಯೇ ಇ-ಕಾಮರ್ಸ್ ಕಂಪನಿಗಳಿಗಾಗಿ ನೂತನ ಪಾಲಸಿ ಘೋಷಣೆಯಾಗುವ ಸಾಧ್ಯತೆ ಇದೆ.
ಬರಲಿದೆ ನೂತನ ಇ-ಕಾಮರ್ಸ್ ನೀತಿ
ಮುಂಬರುವ ಕೆಲ ತಿಂಗಳುಗಳಲ್ಲಿ ನೂತನ ಇ-ಕಾಮರ್ಸ್ ನೀತಿ ಜಾರಿಗೆ ಬರಲಿದೆ ಎನ್ನಲಾಗುತ್ತಿದೆ. ಈ ಕುರಿತಾದ ಕರಡು ನೀತಿಯಲ್ಲಿ ನೀಡಲಾಗಿರುವ ಸಲಹೆಯಂತೆ ಇನ್ಮುಂದೆ ಗ್ರಾಹಕರಿಗೆ 'ಮೇಡ್ ಇನ್ ಇಂಡಿಯಾ' ವಸ್ತುಗಳನ್ನು ಗುರುತಿಸುವುದು ಇನ್ನಷ್ಟು ಸುಲಭವಾಗಲಿದೆ. ನೂತನ ನೀತಿಯ ಅನುಸಾರ ಇ-ಕಾಮರ್ಸ್ ಕಂಪನಿಗಳು ಉತ್ಪನ್ನಗಳ ಮೂಲದ ಕುರಿತು ಮಾಹಿತಿ ನೀಡಬೇಕಾಗಲಿದೆ. ಅಂದರೆ ಗ್ರಾಹಕರಿಗೆ ಉತ್ಪನ್ನ 'ಮೇಡ್ ಇನ್ ಇಂಡಿಯಾ' ಆಗಿದೆಯೋ ಅಥವಾ ಇಲ್ಲವೋ ಹಾಗೂ ಉತ್ಪನ್ನ ತಯಾರಾದ ದೇಶ ಯಾವುದು ಎಂಬಿತ್ಯಾದಿ ಸಿಗಲಿದೆ ಹಾಗೂ ಉತ್ಪನ್ನಗಳ ಕುರಿತು ಮಾರಾಟಗಾರರೆ ಗ್ಯಾರಂಟಿ ನೀಡಬೇಕಾಗಲಿದೆ. ಮಾರಾಟಗಾರರ ಗ್ಯಾರಂಟಿ ಇಲ್ಲದೆ ಇರುವ ಉತ್ಪನ್ನಗಳನ್ನೂ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಗಳ ಮೇಲೆ ಮಾರಾಟ ಮಾಡಲಾಗುವುದಿಲ್ಲ.
ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ್ ಭಾರತ್ ಗೆ ಸಿಗಲಿದೆ ಒತ್ತು
ಸರ್ಕಾರದ ಈ ನೂತನ ಇ-ಕಾಮರ್ಸ್ ಪಾಲಿಸಿ ಒಂದು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಂದೆಡೆ ಇದರಿಂದ ದೇಶಾದ್ಯಂತ ಚೀನಾ ಉತ್ಪನ್ನಗಳ ಬೇಡಿಕೆ ಕುಗ್ಗುವುದಲ್ಲದೆ ಇನ್ನೊಂದೆಡೆ ಇದು ಆತ್ಮನಿರ್ಭರ್ ಭಾರತ್ ಮಿಷನ್ ಗೆ ಉತ್ತೇಜನ ನೀಡಲಿದೆ. ಅಷ್ಟೇ ಅಲ್ಲ ಗ್ರಾಹಕರ ಬಳಿ ಭಾರತದಲ್ಲಿ ತಯಾರಿಸಲಾದ ಉತ್ಪನ್ನಗಳ ಆಯ್ಕೆ ಕೂಡ ಇರಲಿದೆ. ಡಿಪಾರ್ಟ್ಮೆಂಟ್ ಫಾರ್ ಪ್ರಮೋಷನ್ ಆಫ್ ಇಂಡಸ್ಟ್ರಿ ಅಂಡ್ ಇಂಟರ್ನಲ್ ಟ್ರೇಡ್ (DPIIT) ಕಳೆದ ವರ್ಷವಷ್ಟೇ ನ್ಯಾಷನಲ್ ಇ-ಕಾಮರ್ಸ್ ಪಾಲಸ ಸಿದ್ಧಪಡಿಸಿದೆ ಎಂಬುದು ಇಲ್ಲಿ ಗಮನಾರ್ಹ.
ಹೊಸ ಇ-ಕಾಮರ್ಸ್ ಪಾಲಸಿಗಳಲ್ಲಿ ಯಾವ ಯಾವ ನಿಯಮಗಳು ಇರಲಿವೆ?
- ಉತ್ಪನ್ನದ ಪೂರ್ಣ ವಿವರಗಳು ಇ-ಕಾಮರ್ಸ್ ಪ್ಲಾಟ್ಫಾರ್ಮ್ನಲ್ಲಿ ನೀಡುವುದು ಅನಿವಾರ್ಯ.
- ಉತ್ಪನ್ನಗಳ ಗ್ಯಾರಂಟಿ ಮಾರಾಟಗಾರನ ಜವಾಬ್ದಾರಿಯಾಗಿದೆ.
- ಯಾವುದೇ ಉತ್ಪನ್ನಕ್ಕೆ ಮಾರಾಟಗಾರರ ಗ್ಯಾರಂಟಿ ಇಲ್ಲದಿದ್ದರೆ, ಉತ್ಪನ್ನವನ್ನು ವೇದಿಕೆಯಲ್ಲಿ ಮಾರಾಟ ಮಾಡಲಾಗುವುದಿಲ್ಲ.
- ಪ್ಲಾಟ್ಫಾರ್ಮ್ನಲ್ಲಿ ಮಾರಾಟಗಾರರಿಗೆ ಸಂಬಂಧಿಸಿದ ವಿವರಗಳನ್ನು ಸಹ ನೀಡುವುದು ಅನಿವಾರ್ಯವಾಗಲಿದೆ. ಇವುಗಳಲ್ಲಿ ವಿಳಾಸ, ದೂರವಾಣಿ ಸಂಖ್ಯೆ ಸೇರಿವೆ.
- ಖರೀದಿದಾರರು ಉತ್ಪನ್ನಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತಾರೆ.
- ಸರ್ಕಾರದ ಸ್ವಾವಲಂಬಿ ಧ್ಯೇಯಕ್ಕೆ ಇದರಿಂದ ಉತ್ತೇಜನ ಸಿಗಲಿದೆ.
- ಉತ್ಪನ್ನಕ್ಕೆ ಸಂಬಂಧಿಸಿದ ತಪ್ಪು ಮಾಹಿತಿಗಾಗಿ ದಂಡ ವಿಧಿಸಲಾಗುವುದು.
- ಸ್ಥಳೀಯ ಉತ್ಪನ್ನಗಳನ್ನು ಗುರುತಿಸುವುದು ಸುಲಭವಾಗುತ್ತದೆ.
ರಿಯಾಯಿತಿಗಳಿಗೆ ಸಂಬಂಧಿಸಿದ ನಿಯಮಗಳು
- ಹೊಸ ನೀತಿಯಲ್ಲಿ, ಕಂಪನಿಯು ರಿಯಾಯಿತಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಬೇಕಾಗುತ್ತದೆ.
- ರಿಯಾಯಿತಿ ಮಾರಾಟಗಾರರು ಅಥವಾ ಬ್ರಾಂಡ್ಗಳನ್ನು ನೀಡುತ್ತಿದೆಯೇಅಥವಾ ಇ-ಕಾಮರ್ಸ್ ಪೋರ್ಟಲ್ ನೀಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು.
- ಉತ್ಪನ್ನದ ಮೇಲಿನ ಗರಿಷ್ಠ ರಿಯಾಯಿತಿಯನ್ನು ಸೀಮಿತಗೊಳಿಸುವ ನಿಯಮಗಳು ಕೂಡ ಇದರಲ್ಲಿ ಶಾಮೀಲಾಗಿವೆ.
- ಇ-ಕಾಮರ್ಸ್ ಪೋರ್ಟಲ್ಗಳು ರಿಯಾಯಿತಿಯನ್ನು ನೀಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು.
- ಲೆಕ್ಕಪರಿಶೋಧಕರು ವಾರ್ಷಿಕವಾಗಿ ನೀಡಲಾಗುವ ಒಟ್ಟು ರಿಯಾಯಿತಿಯನ್ನು ಲೆಕ್ಕ ಪರಿಶೋಧನೆಯ ವೇಳೆ ಉಲ್ಲೇಖಿಸುವುದು ಅನಿವಾರ್ಯವಾಗಲಿದೆ.