ಅಮ್ರೋಹಾ (ಉತ್ತರ ಪ್ರದೇಶ): ದೇಶದಲ್ಲಿ ಈರುಳ್ಳಿ ಬೆಲೆ ಹೆಚ್ಚಾಗುತ್ತಿರುವುದರಿಂದ (Onion Price) ಜನರ ಜೇಬಿನ ಹೊರೆಯೂ ಹೆಚ್ಚಾಗಿದೆ. ಈರುಳ್ಳಿ ದರ ಏರಿಕೆ ಕಣ್ಣಲ್ಲಿ ನೀರು ತರಿಸುತ್ತಿದ್ದರೆ, ಈರುಳ್ಳಿ ಖರೀದಿಯ ವಿಷಯ ವಿವಾದದ ಸ್ವರೂಪ ಪಡೆದುಕೊಂಡಿದೆ.
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಳ್ಳಿಯಲ್ಲಿ ದುಬಾರಿ ಈರುಳ್ಳಿ ಬಗೆಗಿನ ಚರ್ಚೆ ವಿವಾದದ ರೂಪವನ್ನು ಪಡೆದುಕೊಂಡಿತು. ಗ್ರಾಮದ ಇಬ್ಬರು ಮಹಿಳೆಯರು ಈರುಳ್ಳಿಯ ಬಗ್ಗೆ ವಾದಿಸುತ್ತಾ ಜಗಳ ಆರಂಭವಾಗಿದೆ. ಓರ್ವ ಮಹಿಳೆ ಇನ್ನೋರ್ವ ಮಹಿಳೆಯ ಆರ್ಥಿಕ ಸ್ಥಿತಿಯನ್ನು ಉಲ್ಲೇಖಿಸಿ, ಈರುಳ್ಳಿ ಖರೀದಿಸಲು ಅಸಮರ್ಥೆ ಎಂದು ಹೇಳಿದ ಕಾರಣ ಇಬ್ಬರ ಜಗಳ ತಾರಕಕ್ಕೇರಿದೆ. ಈ ವೇಳೆ ಇತರ ಮಹಿಳೆಯರು ಕೂಡಿ ಮಾತಿಗೆ ಮಾತು ಬೆಳೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಘಟನೆಯಲ್ಲಿ ಐವರು ಮಹಿಳೆಯರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ನೇಹಾ ಎಂಬಾಕೆ ಈರುಳ್ಳಿಯ ಬೆಲೆಯ ಬಗ್ಗೆ ಕಲಖೇರಿ ಗ್ರಾಮದಲ್ಲಿ ಮಾರಾಟಗಾರರೊಂದಿಗೆ ವಾದಿಸುತ್ತಿದ್ದಾಗ ಈ ವಿವಾದ ಪ್ರಾರಂಭವಾಯಿತು. ನೇಹಾ ಈರುಳ್ಳಿ ಖರೀದಿಸಲು ಅಸಮರ್ಥೆ ಎಂದು ಆಕೆಯ ನೆರೆಹೊರೆಯ ದೀಪ್ತಿ ಎಂಬಾಕೆ ಮಾರಾಟಗಾರನಿಗೆ ತಿಳಿಸಿದ್ದು, ಆಕೆ(ನೇಹಾ)ಯೊಂದಿಗೆ ಚರ್ಚಿಸುತ್ತಾ ತನ್ನ(ಈರುಳ್ಳಿ ಮಾರಾಟಗಾರನ) ಸಮಯವನ್ನು ವ್ಯರ್ಥ ಮಾಡದಂತೆ ತಿಳಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನೇಹಾ ದೀಪ್ತಿಯನ್ನು ನಿಂದಿಸಿದ್ದಾರೆ. ಕುಟುಂಬದ ಇತರ ಮಹಿಳೆಯರು ಈ ಜಗಳದಲ್ಲಿ ಭಾಗಿಯಾದ ಸ್ವಲ್ಪ ಸಮಯದ ನಂತರ ಅದು ಹಿಂಸಾತ್ಮಕ ರೂಪ ತಾಳಿದೆ. ನೇಹಾ, ದೀಪ್ತಿ ಮತ್ತು ಈ ಇಬ್ಬರ ಕುಟುಂಬದ ಇತರ ಮೂವರು ಮಹಿಳೆಯರು ಸಹ ಗಾಯಗೊಂಡಿದ್ದು, ನಂತರ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಎಲ್ಲಾ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಗುರುವಾರ ಅವರು ಜಾಮೀನು ಪಡೆದುಕೊಂಡಿದ್ದಾರೆ.