ಪ್ರಸ್ತುತ ಚೀನಾದಲ್ಲಿರುವ ಈ ಭಾರತೀಯ ಮೊಬೈಲ್ ಕಂಪನಿಯಿಂದ ಮಹತ್ವದ ನಿರ್ಧಾರ

ಕಂಪನಿಯು ತನ್ನ ಮೊಬೈಲ್ ಫೋನ್ ಅಭಿವೃದ್ಧಿ ಮತ್ತು ಉತ್ಪಾದನಾ ಕಾರ್ಯಾಚರಣೆಯನ್ನು ವಿಸ್ತರಿಸಲು ಮುಂದಿನ ಐದು ವರ್ಷಗಳಲ್ಲಿ 800 ಕೋಟಿ ರೂ. ಹೂಡಿಕೆ ಮಾಡಲು ಯೋಜಿಸಿದೆ. ಭಾರತದಿಂದ ಚೀನಾಕ್ಕೆ ಮೊಬೈಲ್ ಸಾಧನಗಳನ್ನು ರಫ್ತು ಮಾಡುವುದು ಕಂಪನಿಯ ಕನಸಾಗಿದೆ.

Last Updated : May 16, 2020, 02:20 PM IST
ಪ್ರಸ್ತುತ ಚೀನಾದಲ್ಲಿರುವ ಈ ಭಾರತೀಯ ಮೊಬೈಲ್ ಕಂಪನಿಯಿಂದ ಮಹತ್ವದ ನಿರ್ಧಾರ title=

ನವದೆಹಲಿ: ಮೊಬೈಲ್ ಸಾಧನಗಳನ್ನು ತಯಾರಿಸುವ ದೇಶೀಯ ಕಂಪನಿ ಲಾವಾ ಇಂಟರ್ನ್ಯಾಷನಲ್ (LAVA International) ತನ್ನ ವ್ಯವಹಾರವನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸುವುದಾಗಿ ಹೇಳಿದೆ. ಭಾರತದಲ್ಲಿ ಇತ್ತೀಚಿನ ನೀತಿ ಬದಲಾವಣೆಯ ನಂತರ ಕಂಪನಿಯು ಈ ಕ್ರಮವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ. 

ಇತ್ತೀಚಿನ ವರ್ಷಗಳಲ್ಲಿ ಭಾರತವು ಮೊಬೈಲ್ ಫೋನ್ ತಯಾರಿಕೆಗೆ ಪ್ರಮುಖ ಕೇಂದ್ರವಾಗಿದೆ. ಪ್ರಸ್ತುತ ಭಾರತದಲ್ಲಿ 200ಕ್ಕೂ ಹೆಚ್ಚು ಮೊಬೈಲ್ ಫೋನ್ ಮತ್ತು ಪರಿಕರಗಳ ಕಂಪನಿಗಳಿವೆ. ಯಾವುದೇ ಮೊಬೈಲ್ ಫೋನ್ ಕಂಪನಿಗೆ ಭಾರತ ಬಹಳ ದೊಡ್ಡ ಮಾರುಕಟ್ಟೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅನೇಕ ಕಂಪನಿಗಳು ತಮ್ಮ ಪ್ಲಾಂಟ್ ಅನ್ನು ಇಲ್ಲಿ ಸ್ಥಾಪಿಸಿವೆ.

ಪಿಟಿಐ ಸುದ್ದಿಗಳ ಪ್ರಕಾರ, ಕಂಪನಿಯು ತನ್ನ ಮೊಬೈಲ್ ಫೋನ್ ಅಭಿವೃದ್ಧಿ ಮತ್ತು ಉತ್ಪಾದನಾ ಕಾರ್ಯಾಚರಣೆಯನ್ನು ವಿಸ್ತರಿಸಲು ಮುಂದಿನ ಐದು ವರ್ಷಗಳಲ್ಲಿ 800 ಕೋಟಿ ರೂ. ಹೂಡಿಕೆ ಮಾಡಲು ಯೋಜಿಸುತ್ತಿದ್ದು ಭಾರತದಿಂದ ಚೀನಾಕ್ಕೆ ಮೊಬೈಲ್ ಸಾಧನಗಳನ್ನು ರಫ್ತು ಮಾಡುವುದು ಈ ಕಂಪನಿಯ ಕನಸಾಗಿದೆ.

ಉತ್ಪನ್ನ ವಿನ್ಯಾಸ ಕ್ಷೇತ್ರದಲ್ಲಿ ನಾವು ಚೀನಾದಲ್ಲಿ ಕನಿಷ್ಠ 600 ರಿಂದ 650 ಉದ್ಯೋಗಿಗಳನ್ನು ಹೊಂದಿದ್ದೇವೆ ಎಂದು ಲಾವಾ ಇಂಟರ್‌ನ್ಯಾಷನಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಹರಿ ಓಂ ರೈ ಹೇಳಿದರು. ನಾವು ಈಗ ವಿನ್ಯಾಸ ಕಾರ್ಯವನ್ನು ಭಾರತಕ್ಕೆ ವರ್ಗಾಯಿಸಿದ್ದೇವೆ. ಭಾರತದಲ್ಲಿ ನಮ್ಮ ಮಾರಾಟದ ಅವಶ್ಯಕತೆಗಳನ್ನು ಸ್ಥಳೀಯ ಕಾರ್ಖಾನೆ ಪೂರೈಸುತ್ತಿದೆ. ಚೀನಾದಲ್ಲಿನ ನಮ್ಮ ಕಾರ್ಖಾನೆಯಿಂದ ನಾವು ಕೆಲವು ಮೊಬೈಲ್ ಫೋನ್‌ಗಳನ್ನು ರಫ್ತು ಮಾಡುತ್ತಿದ್ದೇವೆ, ಈ ಕೆಲಸವನ್ನು ಈಗ ಭಾರತದಿಂದ ಮಾಡಲಾಗುವುದು ಎಂದು ಅವರು ಹೇಳಿದರು.

ಭಾರತದಲ್ಲಿ ಲಾಕ್ ಡೌನ್ ಅವಧಿಯಲ್ಲಿ ಲಾವಾ ಚೀನಾದಿಂದ ರಫ್ತು ಬೇಡಿಕೆಯನ್ನು ಪೂರೈಸಿದೆ. ಮೊಬೈಲ್ ಸಾಧನಗಳನ್ನು ಚೀನಾಕ್ಕೆ ರಫ್ತು ಮಾಡುವುದು ನನ್ನ ಕನಸು ಎಂದು ರೈ ಹೇಳಿದರು. ಭಾರತೀಯ ಕಂಪನಿಗಳು ಈಗಾಗಲೇ ಚೀನಾಕ್ಕೆ ಮೊಬೈಲ್ ಚಾರ್ಜರ್‌ಗಳನ್ನು ರಫ್ತು ಮಾಡುತ್ತಿವೆ. ಉತ್ಪಾದನೆಗೆ ಸಂಬಂಧಿಸಿದ ಪ್ರೋತ್ಸಾಹಕ ಯೋಜನೆಯೊಂದಿಗೆ ನಮ್ಮ ಪರಿಸ್ಥಿತಿ ಸುಧಾರಿಸುತ್ತದೆ. ಆದ್ದರಿಂದ ಈಗ ಇಡೀ ವ್ಯವಹಾರವನ್ನು ಭಾರತದಿಂದ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.

Trending News