ನವದೆಹಲಿ: ಅರ್ಧ ಕೆಜಿ ಚಿನ್ನವನ್ನು ಸಾಗಿಸಿದ್ದಕ್ಕಾಗಿ ಏರ್ ಇಂಡಿಯಾ ಗಗನಖಿಯನ್ನು ಗುರುವಾರದಂದು ಬಂಧಿಸಲಾಗಿದೆ.
ಆಕೆಯ ವಿಮಾನ - ಎಐ 162 - ಲಂಡನ್‌ನಿಂದ ರಾತ್ರಿ 10.30 ರ ಸುಮಾರಿಗೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿತ್ತು ಎನ್ನಲಾಗಿದೆ.
ಮೂಲಗಳ ಪ್ರಕಾರ ಏರ್ ಇಂಡಿಯಾ ಗಗನ ಸಖಿಗೆ ತನ್ನ ಸಾಮಾನುಗಳನ್ನು ಎಕ್ಸ್-ರೇ ಸ್ಕ್ಯಾನಿಂಗ್ ಮಾಡಲು ಕೇಳಿದಾಗ, ಅವಳು ತನ್ನ ಕೈಚೀಲವನ್ನು ಕೈಬಿಟ್ಟು ಅದನ್ನು ನಿರಾಕರಿಸಿದಳು. ಆದಾಗ್ಯೂ, ಸಿಸಿಟಿವಿ ದೃಶ್ಯಾವಳಿಗಳು ಚೀಲ ಅವಳದ್ದೇ ಎಂದು ಧೃಡಪಡಿಸಿವೆ. ಆಕೆಯ ಚೀಲದಿಂದ ಎರಡು ಬಿಳಿ ಚಿನ್ನದ ಬಳೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿಯಮಗಳ ಪ್ರಕಾರ ವಿಮಾನ ಸಿಬ್ಬಂದಿ ಯಾವುದೇ ಪ್ರಮಾಣದ ಚಿನ್ನವನ್ನು ಸಾಗಿಸಲು ಸಾಧ್ಯವಿಲ್ಲ ಎನ್ನಲಾಗಿದೆ. ಆದರೆ ಪುರುಷ ಪ್ರಯಾಣಿಕರಿಗೆ 20 ಗ್ರಾಂ ಮತ್ತು ಮಹಿಳಾ ಪ್ರಯಾಣಿಕರಿಗೆ 40 ಗ್ರಾಂ ಚಿನ್ನವನ್ನು ಅನುಮತಿಸಲಾಗಿದೆ. ಈ ತೂಕವನ್ನು ಮೀರಿದ ಚಿನ್ನಾಭರಣಗಳು ಕಸ್ಟಮ್ಸ್ ಸುಂಕಕ್ಕೆ ಒಳಪಟ್ಟಿರುತ್ತವೆ ಎನ್ನಲಾಗಿದೆ.ಈಗ ಈ ವಿಚಾರವಾಗಿ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.