ನವದೆಹಲಿ: ರಕ್ಷಾ ಬಂಧನ್ ಎಲ್ಲಾ ಸಹೋದರ ಸಹೋದರಿಯರಿಗೆ ಇದೊಂದು ಮಹತ್ವದ ಹಬ್ಬವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಸಾಮಾನ್ಯವಾಗಿ ಅಗಸ್ಟ್ ನಲ್ಲಿ ಬರುತ್ತದೆ. ಅದರಂತೆ ಈಗ ಈ ಬಾರಿ ರಕ್ಷಾ ಬಂಧನ ಆಚರಣೆ ಆಗಸ್ಟ್ 15 ರಂದು ನಡೆಯಲಿದೆ.
ಸಹೋದರ ಹಾಗೂ ಸಹೋದರಿರ ನಡುವಿನ ಬಂಧುತ್ವದ ಸಂಕೇತವಾಗಿರುವ ಈ ಹಬ್ಬ ದಕ್ಷಿಣ ಏಷ್ಯಾದಲ್ಲಿ ವಿಶೇಷ ಸ್ಥಾನ ಪಡೆದಿದೆ.ಅದರಲ್ಲೂ ಭಾರತದಲ್ಲಿ ಎಲ್ಲ ಪ್ರದೇಶಗಳಲ್ಲೂ ಇದನ್ನು ಆಚರಿಸುತ್ತಾರೆ.ರಕ್ಷಾ ಬಂಧನ ಹಬ್ಬವು ವಿವಿಧ ಪ್ರದೇಶಗಳಲ್ಲಿ ಭಿನ್ನ ಹೆಸರಿನಿಂದ ಕರೆಯಲ್ಪಡುತ್ತದೆ, ಇದಕ್ಕೆ ಕೆಲವು ಕಡೆ ಸಲುನೋ, ಸಿಲೋನೋ, ರಾಕ್ರಿ ಎಂದು ಕರೆಯುತ್ತಾರೆ.ಈ ದಿನ ಸಹೋದರಿಯರು ತಮ್ಮ ಸಹೋದರನ ಕೈಗೆ ರಾಖಿ ಕಟ್ಟುತ್ತಾರೆ. ಇದು ಸಾಂಕೇತಿಕವಾಗಿ ಸಹೋದರನ ರಕ್ಷಣೆಯನ್ನು ಪ್ರತಿನಿಧಿಸುತ್ತದೆ. ಇದಕ್ಕೆ ಪ್ರತಿಯಾಗಿ ಸಹೋದರು ಕೂಡ ತಮ್ಮ ಸಹೋದರಿಯರನ್ನು ರಕ್ಷಿಸುವ ಭರವಸೆ ನೀಡುತ್ತಾರೆ.
ಮಹಾಭಾರತದಲ್ಲಿ ರಕ್ಷಾ ಬಂಧನ:
ಯುದ್ದದ ಸಂದರ್ಭದಲ್ಲಿ ಜನರನ್ನು ರಕ್ಷಿಸುವ ಸಲುವಾಗಿ ಶ್ರೀಕೃಷ್ಣ ಪರಮಾತ್ಮನು ದುಷ್ಟರಾಜ ಶಿಶುಪಾಲನನ್ನು ಕೊಲ್ಲುತ್ತಾನೆ. ಈ ವೇಳೆ ಕೃಷ್ಣನ ಬೆರಳಿಗೆ ರಕ್ತಸ್ರಾವವಾಗಿ ಯುದ್ಧದಿಂದ ನಿರ್ಗಮಿಸುತ್ತಾನೆ. ಆಗ ಇದನ್ನು ನೋಡಿದ ದ್ರೌಪದಿ ತನ್ನ ಸೀರೆಯಿಂದ ಬಟ್ಟೆಯ ಪಟ್ಟಿಯನ್ನು ಹರಿದು ರಕ್ತಸ್ರಾವವನ್ನು ತಡೆಯಲು ಅವನ ಮಣಿಕಟ್ಟಿನ ಸುತ್ತಲೂ ಕಟ್ಟುತ್ತಾಳೆ. ಭಗವಾನ್ ಕೃಷ್ಣ ತನ್ನ ವಾತ್ಸಲ್ಯ ಮತ್ತು ತನ್ನ ಬಗ್ಗೆ ಇರುವ ದ್ರೌಪದಿ ಕಾಳಜಿಯನ್ನು ಅರಿತುಕೊಂಡು, ಆಕೆಗೆ ಭವಿಷ್ಯದಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡುತ್ತಾನೆ. ಇದಕ್ಕೆ ಪೂರಕವಾಗಿ ಅನೇಕ ವರ್ಷಗಳ ನಂತರ, ಪಾಂಡವರು ಪಗಡೆ ಆಟದಲ್ಲಿ ದ್ರೌಪದಿಯನ್ನು ಕಳೆದುಕೊಂಡಾಗ ಮತ್ತು ಕೌರವರು ಅವಳ ಸೀರೆಯನ್ನು ಎಳೆಯಲು ಪ್ರಾರಂಭಿಸುತ್ತಾರೆ. ಆಗ ಕೃಷ್ಣನು ಆಕೆಯ ನೆರವಿಗೆ ಧಾವಿಸಿ ತನ್ನ ದೈವಿಕ ಬಲದಿಂದ ಸೀರೆಯನ್ನು ಉದ್ದವಾಗಿ ಪರಿವರ್ತಿಸುತ್ತಾನೆ. ಆಗ ಅದನ್ನು ತೆಗೆಯಲು ಸಾಧ್ಯವಾಗುವುದಿಲ್ಲ. ಅಂದಿನಿಂದ ಭಾರತದಲ್ಲಿ ರಕ್ಷಾ ಬಂಧನವನ್ನು ಆಚರಿಸುವ ಪರಂಪರೆ ಬೆಳೆದು ಬಂದಿದೆ ಎನ್ನುವ ಪ್ರತೀತಿ ಇದೆ ಎಂದು ನಂಬಲಾಗಿದೆ.
ರಕ್ಷಾ ಬಂಧನದಂದು ಸಹೋದರಿಯರು ಬೆಳಗ್ಗೆ ಎದ್ದು ರಾಖಿಯನ್ನು ಅಕ್ಷತೆ, ಕುಂಕುಮ, ಸಿಹಿ ತಿಂಡಿಗಳ ಜೊತೆಗೆ ತಟ್ಟೆಯಲ್ಲಿ ಇರಿಸಿರುತ್ತಾರೆ, ನಂತರ ಇಡೀ ಕುಟುಂಬದೊಂದಿಗೆ ದೇವರ ಮುಂದೆ ಪ್ರಾರ್ಥಿಸಿ ಸಹೋದರನಿಗೆ ರಾಖಿ ಕಟ್ಟಲು ಸನದ್ದರಾಗುತ್ತಾರೆ. ಇದಕ್ಕೆ ಪ್ರತಿಯಾಗಿ ಸಹೋದರು ತಮ್ಮ ಅಕ್ಕತಂಗಿಯಂದಿಯರಿಗೆ ಉಡುಗೊರೆ ಹಾಗೂ ಸಿಹಿತಿಂಡಿಗಳನ್ನು ವಿತರಿಸುತ್ತಾರೆ. ಈ ವರ್ಷ ರಕ್ಷಾ ಬಂಧನದಂದು ರಾಖಿಯನ್ನು ಕಟ್ಟುವ ಮಹೂರ್ತ ಬೆಳಿಗ್ಗೆ 5.54 ರಿಂದ ಪ್ರಾರಂಭವಾಗಿ ಸಂಜೆ 5.59 ಕ್ಕೆ ಕೊನೆಗೊಳ್ಳುತ್ತದೆ. ಈ ಆಚರಣೆ ವೇಳೆ ಉತ್ತಮ ಸಮಯವೆಂದರೆ ಅಪರಾಹ್ನ ಮಹೂರ್ತ ಮಧ್ಯಾಹ್ನ 1.59 ರಿಂದ ಸಂಜೆ 4.31 ರವರೆಗೆ ಬರುತ್ತದೆ. ಸಾಮಾನ್ಯವಾಗಿ ರಕ್ಷಾ ಬಂಧನದ ಆಚರಣೆಯು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗಬಹುದು ಆದರೆ ಅದರ ಮೂಲ ತತ್ವವು ಒಂದೇ ಆಗಿದೆ.