ತೆಹರಾನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ನಡೆದ ದಾಳಿಯ ಸೇಡು ತೀರಿಸಿಕೊಳ್ಳುವುದಾಗಿ ಇರಾನ್ನ ಸರ್ವೋಚ್ಛ ನಾಯಕ ಅಯತೊಲ್ಲಾ ಸೈಯದ್ ಅಲಿ ಖಮೇನಿ ಪ್ರತಿಜ್ಞೆ ಮಾಡಿದ್ದಾರೆ. ಗುರುವಾರ ರಾತ್ರಿ ಅಮೇರಿಕಾದ ಮಿಲಿಟರಿ ನಡೆಸಿದ ದಾಳಿಯಲ್ಲಿ ಹಷಾದ್ ಶಬಿ ಅಥವಾ ಇರಾಕಿ ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸ್ (ಪಿಎಂಎಫ್)ನ ಡೆಪ್ಯೂಟಿ ಕಮಾಂಡರ್ ಅಬು ಮಹ್ದಿ ಅಲ್-ಮುಹಂದಿಸ್ ಮತ್ತು ಸುಲೇಮಾನಿ ಮೃತಪಟ್ಟಿದ್ದಾರೆ ಎಂದು IRGC ವರದಿ ಮಾಡಿದೆ. ಇವರ ವಾಹನವನ್ನು ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೇಲೆ ಗುರಿಯಾಗಿಸಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ತೆಹರಾನ್ ಮೂಲದ TV ಚಾನಲ್ ಗೆ ನೀಡಿದ ಹೇಳಿಕೆಯಲ್ಲಿ "ಭೂಮಿಯಲ್ಲಿ ವಾಸಿಸುವ ಅತ್ಯಂತ ಕ್ರೂರ ಜನರು, ಸನ್ಮಾನ್ಯ ಕಮಾಂಡರ್ ಅವರ ಹತ್ಯೆ ನಡೆಸಿದ್ದು, ಅವರು ಜಾಗತಿಕ ಕ್ರೌರ್ಯತೆ ಹಾಗೂ ದರೋಡೆತನದ ವಿರುದ್ಧ ವಿರಾವೇಷದಿಂದ ಹೋರಾಡಿದ್ದಾರೆ ಎಂದು ಖಮೇನಿ ಹೇಳಿದ್ದಾರೆ.
"ಅವರ ನಿಧನದ ಬಳಿಕ ಅವರು ಕೈಗೊಂಡ ಮಿಷನ್ ನಿಲ್ಲುವುದಿಲ್ಲ, ಆದರೆ ಗುರುವಾರ ಜನರಲ್ ಸುಲೇಮಾನಿ ಹಾಗೂ ಇತರೆ ಹುತಾತ್ಮರ ರಕ್ತದಲ್ಲಿ ಕೈತೊಳೆದ ಅಪರಾಧಿಗಳಿಂದ ಶೀಘ್ರವೇ ಪ್ರತಿಕಾರ ತೀರಿಸಿಕೊಳ್ಳಲಾಗುವುದು ಮತ್ತು ಅಪರಾಧಿಗಳು ಇದಕ್ಕಾಗಿ ನೀರಿಕ್ಷೆಯಲ್ಲಿರಬೇಕು" ಎಂದು ಅವರು ಹೇಳಿದ್ದಾರೆ.
"ಸದ್ಯ ಚಾಲ್ತಿ ಇರುವ ಯುದ್ಧ ಮತ್ತು ಅದರ ಮುಕ್ತಾಯ ಹತ್ಯೆ ನಡೆಸಿರುವ ಅಪರಾಧಿಗಳ ಜೀವನ ಮತ್ತಷ್ಟು ಕಠಿಣವಾಗಿಸಲಿದೆ" ಎಂದು ಖಮೇನಿ ಹೇಳಿದ್ದಾರೆ. ಜನರಲ್ ಸುಲೇಮಾನಿ ಅವರ ಕುಟುಂಬ ಸದಸ್ಯರ ಪ್ರತಿ ಸಾಂತ್ವನ ವ್ಯಕ್ತಪಡಿಸಿರುವ ಖಮೇನಿ ರಾಷ್ಟ್ರಾದ್ಯಂತ ಮೂರು ದಿನಗಳ ಶೋಕ ಘೋಷಿಸಿದ್ದಾರೆ. ಇದೇ ವೇಳೆ ಪೆಂಟಗನ್ ಕೂಡ ಸುಲೇಮಾನಿ ಸಾವಿನ ಸುದ್ದಿಯನ್ನು ಖಚಿತಪಡಿಸಿದೆ.
ಸುದ್ದಿ ಸಂಸ್ಥೆ ಎಫೇ ಪೆಂಟಗನ್ ನೀಡಿರುವ ಹೇಳಿಕೆಯನ್ನು ಪ್ರಕಟಿಸಿದ್ದು, "ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದ ಮೇಲೆ ವಿದೇಶದಲ್ಲಿ ನಿಯೋಜನೆಗೊಂಡಿರುವ ಅಮೇರಿಕದ ಸೈನಿಕರ ರಕ್ಷಣೆಗಾಗಿ ಕಾಸೀಮ್ ಸುಲೇಮಾನಿ ಅವರ ಹತ್ಯೆಗೆ ಹೆಜ್ಜೆ ಇಡಲಾಗಿದೆ" ಎಂದು ಹೇಳಿದೆ.
"ಭವಿಷ್ಯದಲ್ಲಿ ಇರಾನ್ ಯೋಜಿಸಿರುವ ಹಲ್ಲೆಗಳನ್ನು ತಡೆಯಲು ಇಲ್ಲಿ ವಾಯುದಾಳಿ ನಡೆಸಲಾಗಿದ್ದು, ಅಮೇರಿಕ ಪ್ರಪಂಚದ ಯಾವುದೇ ಮೂಲೆಯಲ್ಲಿರುವ ತನ್ನ ನಾಗರಿಕರ ರಕ್ಷಣೆಗೆ ಆವಶ್ಯಕ ಕ್ರಮ ಕೈಗೊಳ್ಳಲಿದೆ" ಎಂದು ಪೆಂಟಗನ್ ತನ್ನ ಹೇಳಿಕೆಯಲ್ಲಿ ಹೇಳಿದೆ.
ಆದರೆ, ಈ ಹಲ್ಲೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಇರಾಕ್ ವಿದೇಶಾಂಗ ಸಚಿವ ಮೊಹಮ್ಮದ್ ಜವಾದ್ ಜರೀಫ್ , ಈ ಹಲ್ಲೆಯನ್ನು "ತುಂಬಾ ಅಪಾಯಕಾರಿ ಹಾಗೂ ಮೂರ್ಖತನದಿಂದ ಕೂಡಿದ ಹಲ್ಲೆ" ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಅಮೇರಿಕ ತನ್ನ ಇಂತಹ ಹಲ್ಲೆಗಳ ಪರಿಣಾಮಕ್ಕೆ ಸ್ವತಃ ಹೊಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಹಲ್ಲೆಗೆ ಪ್ರತಿಕ್ರಿಯೆ ನೀಡಿರುವ IRGCಯ ಮಾಜಿ ಕಮಾಂಡರ್ ಮೊಹಸೀನ್ ರೆಜಾಯಿ "ಅಮೇರಿಕದಿಂದ ಇರಾನ್ ತನ್ನ ಪ್ರತಿಕಾರ ತೀರಿಸಿಕೊಳ್ಳಲಿದೆ" ಎಂದಿದ್ದಾರೆ.
ಬಿಬಿಸಿಯಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ 1998 ರಿಂದ ಸುಲೇಮಾನಿ ಇರಾನ್ ಫೋರ್ಸ್ ನ ನೇತೃತ್ವವಹಿಸಿದ್ದರು ಎನ್ನಲಾಗಿದೆ. IRGCಯ ಭಾಗವಾಗಿರುವ ಈ ವಿಶಿಷ್ಠ ಒಕ್ಕೂಟ ವಿದೇಶಗಳಲ್ಲಿ ಗುಪ್ತ ಕಾರ್ಯಾಚರಣೆ ನಡೆಸುತ್ತಿದ್ದು, ದೇಶದ ಸರ್ವೋಚ್ಛ ನಾಯಕ ಖಮೇನಿ ಅವರಿಗೆ ಈ ಒಕ್ಕೂಟ ನೇರವಾಗಿ ವರದಿ ಮಾಡುತ್ತದೆ. ಬಾಗ್ದಾದ್ ನ ದೂತಾವಾಸದ ಮೇಲೆ ಸಾವಿರಾರು ಪ್ರತಿಭಟನಾ ನಿರತರು ನಡೆಸಿದ ಹಲ್ಲೆಯ ಬಳಿಕ ವಾಷಿಂಗ್ಟನ್ ಮತ್ತು ತೆಹರಾನ್ ಮಧ್ಯೆ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಇದೇ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಅಮೇರಿಕ ಈ ದಾಳಿ ನಡೆಸಿದೆ.