ಭಾರತ, ಕೆನಡಾ ಮತ್ತು ಅಮೆರಿಕಾ: ರಾಜತಾಂತ್ರಿಕತೆ ಮತ್ತು ಆರೋಪಗಳ ಸಂಕೀರ್ಣ ಸಂಬಂಧ

ಭಾರತೀಯ ಟೀಕಾಕಾರರು ಭಾವಿಸಿರುವ ಮಟ್ಟಿಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಜಾಗತಿಕವಾಗಿ ಏಕಾಂಗಿಯಾಗಿಲ್ಲ. ಬಲ್ಲ ಮೂಲಗಳ ಪ್ರಕಾರ, ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ಪಾತ್ರವಿದೆ ಎಂಬ ಕುರಿತು ಒಂದಷ್ಟು ಮಾಹಿತಿಗಳನ್ನು ಕೆನಡಾಗೆ ಒದಗಿಸಿದ್ದೇ ಅಮೆರಿಕಾ ಎನ್ನಲಾಗಿದೆ. 

Written by - Girish Linganna | Last Updated : Sep 26, 2023, 12:27 PM IST
  • ಒಂದು ವೇಳೆ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಸಾರ್ವಜನಿಕವಾಗಿ ದಾಖಲೆಗಳನ್ನು ಪ್ರದರ್ಶಿಸಿದರೂ ಭಾರತ ಅದನ್ನು ತಿರಸ್ಕರಿಸುವ ಸಾಧ್ಯತೆಗಳೇ ಇವೆ.
  • ಅಮೆರಿಕಾ ತನ್ನೊಡನೆ ರಾಜತಾಂತ್ರಿಕ ಸಹಯೋಗವನ್ನು ಕಡಿತಗೊಳಿಸುವುದಿಲ್ಲ ಎಂಬ ನಂಬಿಕೆಯನ್ನು ಭಾರತ ಹೊಂದಿದೆ.
  • ಅಮೆರಿಕಾ ಮತ್ತು ಭಾರತದ ಸಂಬಂಧ ಅಮೆರಿಕಾದ ರಾಜಕಾರಣಿಗಳು ಆಗಾಗ ಹೇಳುವ 'ಸಮಾನ ಪ್ರಜಾಪ್ರಭುತ್ವದ ಮೌಲ್ಯಗಳ' ಆಧಾರದಲ್ಲಿ ಏರ್ಪಡದಿರುವ ಕಾರಣ, ಈ ಸಂಬಂಧ ಹಾಳಾಗುವ ಸಾಧ್ಯತೆಗಳಿಲ್ಲ.
ಭಾರತ, ಕೆನಡಾ ಮತ್ತು ಅಮೆರಿಕಾ: ರಾಜತಾಂತ್ರಿಕತೆ ಮತ್ತು ಆರೋಪಗಳ ಸಂಕೀರ್ಣ ಸಂಬಂಧ title=

ಒಂದು ವಾರದ ಹಿಂದೆ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಜೂನ್ ತಿಂಗಳಲ್ಲಿ ನಡೆದ ಕೆನಡಾ ನಿವಾಸಿ, ಸಿಖ್ ಪ್ರತ್ಯೇಕತಾವಾದಿ ಹರ್‌ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕುರಿತು ಸಾಕ್ಷಿ ಲಭ್ಯವಾಗಿದೆ ಎಂದಿದ್ದರು. ಅಂದಿನಿಂದ, ಭಾರತ ಮತ್ತು ಕೆನಡಾಗಳ ಸಂಬಂಧ ಹದಗೆಡಲು ಆರಂಭಿಸಿತ್ತು. ಇದೊಂದು ಪ್ರಮುಖ ವಿಚಾರವಾಗಿದ್ದು, ವೃದ್ಧಿಯಾಗುತ್ತಿರುವ ಭಾರತ ಮತ್ತು ಅಮೆರಿಕಾಗಳ ಸಂಬಂಧದ ಮೇಲೆ ಇದು ಎಂತಹ ಪ್ರಭಾವ ಬೀರಬಹುದು ಎನ್ನುವ ಪ್ರಶ್ನೆಗಳು ಮೂಡಿವೆ.

ಭಾರತದಲ್ಲಿ, ಹಲವಾರು ಜನರು ಈ ವಿವಾದಕ್ಕೆ ಸಂಬಂಧಿಸಿದಂತೆ ಅಮೆರಿಕಾ ಬಲವಾಗಿ ಜಸ್ಟಿನ್ ಟ್ರೂಡೊ ಅವರನ್ನು ಬೆಂಬಲಿಸಿಲ್ಲ ಎಂದು ಭಾವಿಸಿದ್ದಾರೆ. ಹಲವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರ ಆಡಳಿತದ ಪ್ರತಿಕ್ರಿಯೆ ಅಸ್ಪಷ್ಟವಾಗಿದೆ ಎಂದು ಭಾವಿಸಿದ್ದಾರೆ. ಬಿಡೆನ್ ಈ ಹತ್ಯೆಯನ್ನು ಬಲವಾಗಿ ಖಂಡಿಸುವ ಬದಲು, ಈ ಹತ್ಯೆಯ ವಿಚಾರಣೆಯ ಕುರಿತು ಕೆನಡಾಗೆ ಸಹಕರಿಸುವಂತೆ ಭಾರತವನ್ನು ಕೋರಿದ್ದಾರೆ.

ಭಾರತ ಈ ಹತ್ಯೆಯ ಹಿಂದೆ ತನ್ನ ಪಾತ್ರವಿದೆ ಎಂಬ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಹರ್‌ದೀಪ್ ಸಿಂಗ್ ನಡೆಸಿದ ಕುಕೃತ್ಯಕ್ಕೆ ಇಂತಹ ಶಿಕ್ಷೆ ಅಸಹಜವೇನಲ್ಲ ಎಂದೂ ಹೇಳಿತ್ತು. ಭಾರತೀಯರೂ ಈ ನಿರ್ಧಾರಕ್ಕಾಗಿ ಭಾರತ ಸರ್ಕಾರವನ್ನು ಬೆಂಬಲಿಸಿದ್ದರು. ನಿಜ್ಜರ್ ಪಂಜಾಬಿನಲ್ಲಿ ಪ್ರತ್ಯೇಕ ಸಿಖ್ ರಾಷ್ಟ್ರಕ್ಕಾಗಿ ಆಗ್ರಹಿಸುತ್ತಿದ್ದು, ಅದಕ್ಕಾಗಿ ಹೋರಾಡುವ ಉಗ್ರವಾದಿ ಸಂಘಟನೆಗಳೊಡನೆ ಸಂಪರ್ಕ ಹೊಂದಿದ್ದ. ಆದ್ದರಿಂದ ಭಾರತದಲ್ಲಿ ಆತನನ್ನು ಭಯೋತ್ಪಾದಕ ಎಂದು ಪರಿಗಣಿಸಲಾಗಿತ್ತು. 1970ರ ದಶಕದ ಕೊನೆಯಿಂದ, 1990ರ ದಶಕದ ಆರಂಭದ ತನಕ ಹೆಚ್ಚಾದ ಪ್ರತ್ಯೇಕತಾವಾದಿಗಳ ಹಿಂಸಾಚಾರ ಮತ್ತು ಸರ್ಕಾರ ಕೈಗೊಂಡ ಕಠಿಣ ಕ್ರಮಗಳನ್ನು ಪಾಶ್ಚಾತ್ಯ ರಾಷ್ಟ್ರಗಳು ಮರೆತಿದ್ದರೂ, ಭಾರತೀಯರು ಮರೆತಿಲ್ಲ. ಈ ಅವಧಿಯಲ್ಲಿ ಪಂಜಾಬಿನಲ್ಲಿ ಸಾವಿರಾರು ಜನರು ಸಾವಿಗೀಡಾಗಿದ್ದು, ಆ ವೇಳೆ ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರನ್ನು ಅವರ ಸಿಖ್ ಅಂಗರಕ್ಷಕರೇ 1984ರಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದರು.

ಇದನ್ನೂ ಓದಿ- ತೆರೆಯಲ್ಪಟ್ಟ ಚಂದ್ರ ರಹಸ್ಯಗಳ ಕೀಲಿ: ಅನಾಗ್ಲಿಫ್ ಛಾಯಾಚಿತ್ರಗಳ ಮೂಲಕ ಚಂದ್ರನ 3ಡಿ ಜಗತ್ತಿನ ಅನ್ವೇಷಣೆ

ಭಾರತೀಯ ಟೀಕಾಕಾರರು ಭಾವಿಸಿರುವ ಮಟ್ಟಿಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಜಾಗತಿಕವಾಗಿ ಏಕಾಂಗಿಯಾಗಿಲ್ಲ. ಬಲ್ಲ ಮೂಲಗಳ ಪ್ರಕಾರ, ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ಪಾತ್ರವಿದೆ ಎಂಬ ಕುರಿತು ಒಂದಷ್ಟು ಮಾಹಿತಿಗಳನ್ನು ಕೆನಡಾಗೆ ಒದಗಿಸಿದ್ದೇ ಅಮೆರಿಕಾ ಎನ್ನಲಾಗಿದೆ. ಅಮೆರಿಕಾ ಮತ್ತು ಕೆನಡಾ ಎರಡೂ ದೇಶಗಳು 'ಫೈವ್ ಐಸ್' ಎಂದು ಕರೆಯಲಾಗುವ ಗುಂಪೊಂದರ ಸದಸ್ಯರಾಗಿದ್ದು, ಈ ಗುಂಪು ಆಸ್ಟ್ರೇಲಿಯಾ, ಬ್ರಿಟನ್ ಮತ್ತು ನ್ಯೂಜಿಲೆಂಡ್ ಜೊತೆ ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಬಿಡೆನ್ ಹಾಗೂ ಫೈವ್ ಐಸ್ ಒಕ್ಕೂಟದ ಇತರ ನಾಯಕರು ಮೋದಿಯವರೊಡನೆ ನವದೆಹಲಿಯ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಖಾಸಗಿಯಾಗಿ ಸಮಾಲೋಚನೆ ನಡೆಸಿದ್ದರು ಎನ್ನಲಾಗಿದೆ. ಮೋದಿಯವರು ಜಿ-20 ಶೃಂಗಸಭೆ ಭಾರತಕ್ಕೆ ಒಂದು ಮಹತ್ವದ ಘಟನೆ ಎಂದು ಭಾವಿಸಿದ್ದರು. ಆದರೆ ನಿಜ್ಜರ್ ಹತ್ಯೆ ವಿವಾದ ಅದರ ಮೇಲೆ ಕಾರ್ಮೋಡ ಬೀರಿತ್ತು.

ಭಾರತ ಬಹುಶಃ ಪಾಶ್ಚಾತ್ಯ ರಾಷ್ಟ್ರಗಳ ಒಗ್ಗಟ್ಟನ್ನು ಕಡಿಮೆಯಾಗಿ ಅಂದಾಜಿಸಿದಂತೆ ತೋರುತ್ತದೆ. ಭಾರತ ಕೆನಡಾವನ್ನು ಕಡಿಮೆ ಪ್ರಾಮುಖ್ಯತೆ ಹೊಂದಿರುವ ರಾಷ್ಟ್ರವೆಂದು ಭಾವಿಸಿ, ಈ ಆರೋಪ ನಿಜವೆಂದು ಸಾಬೀತಾದರೆ ಇನ್ನಷ್ಟು ಮಧ್ಯಪ್ರವೇಶ ನಡೆಸುವ, ಹಾಗಾಗದಿದ್ದರೆ ಆರೋಪ ಸುಳ್ಳೆಂದು ತಳ್ಳಿ ಹಾಕುವ ಯೋಚನೆ ಹೊಂದಿತ್ತು. ಆದರೆ, ಈ ಘಟನೆ ಅಮೆರಿಕಾ ಮತ್ತು ಕೆನಡಾ ನಡುವಿನ ಗಟ್ಟಿಯಾದ ನಂಟನ್ನು ಸಾಬೀತುಪಡಿಸುತ್ತಿದೆ. ಅವೆರಡು ರಾಷ್ಟ್ರಗಳು ಭದ್ರತೆ ಮತ್ತು ಗುಪ್ತಚರ ವಿಚಾರಗಳಿಗೆ ಸಂಬಂಧಿಸಿದಂತೆ ಆಪ್ತ ಸಹಯೋಗಿಗಳಾಗಿದ್ದು, ನೆರೆಹೊರೆಯ ರಾಷ್ಟ್ರಗಳೂ ಆಗಿವೆ. ನಿಜ್ಜರ್ ಹತ್ಯೆ ಪ್ರಕರಣ ಅಮೆರಿಕಾದ ಭದ್ರತೆಯ ಮೇಲೂ ಪರಿಣಾಮ ಬೀರಿದೆ. ಉತ್ತರ ಅಮೆರಿಕಾ ಖಂಡದಲ್ಲಿ ವಿದೇಶೀ ಬೆಂಬಲಿತ ಹಂತಕರು ಕಾರ್ಯಾಚರಿಸುವುದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದರೊಡನೆ, ಅಮೆರಿಕಾದಲ್ಲೂ ಸಿಖ್ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ.

ಹಾಗೆಂದು ಈ ವಿಚಾರದಲ್ಲಿ ಕೆನಡಾದ ಬದಿಯಿಂದಲೂ ತಪ್ಪುಗಳಾಗಿವೆ. ಭಾರತ ಆರೋಪಿಸಿರುವ ರೀತಿಯಲ್ಲೇ, ಕೆನಡಾ ತನ್ನ ನೆಲದಲ್ಲಿ ನಡೆಯುತ್ತಿರುವ ಸಿಖ್ ಪ್ರತ್ಯೇಕತಾವಾದಿ ಚಟುವಟಿಕೆಗಳು, ತೀವ್ರಗಾಮಿ ಸಂಘಟನೆಗಳ ಕುರಿತು ಗಮನ ಹರಿಸದೆ ಮೌನವಾಗಿದೆ. ಖಲಿಸ್ತಾನ್ ಚಳುವಳಿಗೆ ಭಾರತದಲ್ಲಿ ಈಗ ಜನ ಬೆಂಬಲ ಇಲ್ಲವಾದರೂ, ಪಾಶ್ಚಾತ್ಯ ರಾಷ್ಟ್ರಗಳು ಮರಳಿ ಹಿಂಸಾಚಾರಕ್ಕೆ ಹಾದಿ ಮಾಡಿಕೊಡಬಲ್ಲ ಇದರ ಸಾಮರ್ಥ್ಯವನ್ನು ಅರ್ಥೈಸಿಕೊಳ್ಳುತ್ತಿಲ್ಲ. 1985ರಲ್ಲಿ ಮಾಂಟ್ರಿಯಲ್ ನಿಂದ ಲಂಡನ್ನಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಸ್ಫೋಟದ ಬಳಿಕವೂ ಪಾಶ್ಚಾತ್ಯ ರಾಷ್ಟ್ರಗಳು ಖಲಿಸ್ತಾನ ಉಗ್ರವಾದಿಗಳ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗೆಂದು ಪ್ರತ್ಯೇಕತಾವಾದಿಗಳ ಕುರಿತು ಕೆನಡಾದ ನಿರ್ಲಕ್ಷ್ಯತೆಗೆ ಹಂತಕರನ್ನು ಕಳುಹಿಸುವುದು ಪರಿಹಾರ ಎಂದು ಭಾರತ ಭಾವಿಸಿದರೆ, ಅದು ಅತಿಯಾದ ಆಶಾ ಭಾವನೆಯಾಗುತ್ತದಷ್ಟೇ.

ಇದನ್ನೂ ಓದಿ- ಭಾರತಕ್ಕೆ ರಣಾಂಗಣದ ಮೇಲುಗೈ ನೀಡಲಿವೆ ಅಗ್ನಿ 5, ಅಗ್ನಿ 6 ಐಸಿಬಿಎಂ ಕ್ಷಿಪಣಿಗಳು

ಒಂದು ವೇಳೆ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಸಾರ್ವಜನಿಕವಾಗಿ ದಾಖಲೆಗಳನ್ನು ಪ್ರದರ್ಶಿಸಿದರೂ ಭಾರತ ಅದನ್ನು ತಿರಸ್ಕರಿಸುವ ಸಾಧ್ಯತೆಗಳೇ ಇವೆ. ಅಮೆರಿಕಾ ತನ್ನೊಡನೆ ರಾಜತಾಂತ್ರಿಕ ಸಹಯೋಗವನ್ನು ಕಡಿತಗೊಳಿಸುವುದಿಲ್ಲ ಎಂಬ ನಂಬಿಕೆಯನ್ನು ಭಾರತ ಹೊಂದಿದೆ. ಅಮೆರಿಕಾ ಮತ್ತು ಭಾರತದ ಸಂಬಂಧ ಅಮೆರಿಕಾದ ರಾಜಕಾರಣಿಗಳು ಆಗಾಗ ಹೇಳುವ 'ಸಮಾನ ಪ್ರಜಾಪ್ರಭುತ್ವದ ಮೌಲ್ಯಗಳ' ಆಧಾರದಲ್ಲಿ ಏರ್ಪಡದಿರುವ ಕಾರಣ, ಈ ಸಂಬಂಧ ಹಾಳಾಗುವ ಸಾಧ್ಯತೆಗಳಿಲ್ಲ. ಭಾರತ ಮತ್ತು ಅಮೆರಿಕಾ ಎರಡೂ ರಾಷ್ಟ್ರಗಳು ಚೀನಾದ ಕುರಿತು ಚಿಂತೆ ಹೊಂದಿರುವುದರಿಂದ, ಆ ತಳಹದಿಯಲ್ಲೇ ಅವುಗಳ ಸಂಬಂಧ ನಿರ್ಮಾಣವಾಗಿದೆ.

ಆದರೆ ಈಗ ನಿಜ್ಜರ್ ಹತ್ಯೆಯ ಕುರಿತಾದ ವಿವಾದದ ಪರಿಣಾಮವಾಗಿ, ಭಾರತ ಅಮೆರಿಕಾದ ಪಾಲಿಗೆ ಸವಾಲಿನ ಸಹಯೋಗಿಯಾಗುವ ಸಾಧ್ಯತೆಗಳಿವೆ. ಭಾರತ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಂಕೀರ್ಣ ನಿಲುವುಗಳನ್ನು ಹೊಂದಿದೆ. ಭಾರತ ಹಲವೊಮ್ಮೆ ಪಾಶ್ಚಾತ್ಯ ರಾಷ್ಟ್ರಗಳನ್ನು ಬೆಂಬಲಿಸಿದರೆ, ಇನ್ನೂ ಹಲವು ವಿಚಾರಗಳಲ್ಲಿ ಅವುಗಳನ್ನು ವಿರೋಧಿಸುತ್ತದೆ. ಭಾರತ ಅಮೆರಿಕಾದೊಡನೆ ರಕ್ಷಣಾ ಸಂಬಂಧವನ್ನು ಇನ್ನಷ್ಟು ವೃದ್ಧಿಸಲು ಬಯಸುತ್ತದಾದರೂ, ತನ್ನ ಸ್ವಂತ ಭದ್ರತೆಯ ಕುರಿತು ಅಮೆರಿಕಾದ ನಿಯಂತ್ರಣಕ್ಕೆ ಒಳಗಾಗಲು ಸಿದ್ಧವಿಲ್ಲ. ಒಂದು ವೇಳೆ ಭಾರತವೇನಾದರೂ ಚೀನಾದ ರೀತಿ ತೀವ್ರವಾಗಿ ವರ್ತಿಸಲು ಆರಂಭಿಸಿದರೆ, ಭಾರತ ವಾಷಿಂಗ್ಟನ್ ಜೊತೆ ಹೊಂದಿರುವ ದ್ವಿಪಕ್ಷೀಯ ಬೆಂಬಲವನ್ನು ಕಳೆದುಕೊಳ್ಳುವ ಅಪಾಯವೂ ಇದೆ. ನಿಜ್ಜರ್ ಹತ್ಯೆ ಪ್ರಕರಣ ಇದನ್ನು ಪುಷ್ಟೀಕರಿಸುವ ಉದಾಹರಣೆಯಂತೆ ಕಂಡುಬರುತ್ತದೆ. ಒಂದು ವೇಳೆ ಕೆನಡಾ ಮತ್ತು ಅಮೆರಿಕಾಗಳು ನಂಬಿರುವಂತೆ, ನಿಜ್ಜರ್ ಹತ್ಯೆಯ ಹಿಂದೆ ಭಾರತದ ಪಾತ್ರವಿದ್ದರೆ, ಆಗ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಪ್ರತಿಭಟನೆಯ ನಿಲುವನ್ನು ಮರುಪರಿಶೀಲಿಸಬೇಕಾಗುತ್ತದೆ.

ಲೇಖಕರು- ಗಿರೀಶ್ ಲಿಂಗಣ್ಣ
(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=q9auZ2eqeZo

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News