ಕೋಲ್ಕತ್ತಾ: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ, ಕನ್ನಡಿಗ ಕೆ.ಎಲ್.ರಾಹುಲ್ ಅವರು ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್(IPL) ಇತಿಹಾಸದಲ್ಲಿ 4 ಐಪಿಎಲ್ ಸೀಸನ್‍ಗಳಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಬುಧವಾರ ರಾಯಲ್ ಚಾಲೆಂಜರ್ಸ್ ವಿರುದ್ಧ ನಡೆದ ಪ್ಲೇ ಆಫ್ ಹಂತದ ಮೊದಲ ಎಲಿಮೇಟನರ್ ಪಂದ್ಯದಲ್ಲಿ ರಾಹುಲ್ ಈ ಸಾಧನೆ ಮಾಡಿದರು.
ಆರ್‌ಸಿಬಿ ಎದುರು 14 ರನ್ ಗಳಿಂದ ಸೋಲು ಕಂಡರೂ ಕೆ.ಎಲ್.ರಾಹುಲ್ ನಾಯಕನ ಆಟವಾಡಿ ಅಭಿಮಾನಿಗಳ ಮನಸ್ಸು ಗೆದ್ದರು. ರಾಹುಲ್ ಸ್ಫೋಟಕ ಆಟದಿಂದಾಗಿ ಒಂದು ಹಂತದಲ್ಲಿ ಲಕ್ನೋ ಗೆಲುವಿನ ಹಾದಿಯಲ್ಲಿತ್ತು. 58 ಎಸೆತಗಳನ್ನು ಎದುರಿಸಿದ ರಾಹುಲ್ 5 ಸಿಕ್ಸರ್, 3 ಬೌಂಡರಿ ಇದ್ದ 79 ರನ್ ಗಳಿಸಿದರು. ಅದ್ಭುತ ಇನ್ಸಿಂಗ್ಸ್ ಆಡುವ ಮೂಲಕ ವಿಶಿಷ್ಟ ಮೈಲಿಗಲ್ಲನ್ನು ತಲುಪಿದರು.
ಇದನ್ನೂ ಓದಿ: IPL 2022, LSG vs RCB: ರಜತ್ ಭರ್ಜರಿ ಶತಕ, ಲಕ್ನೋ ಮಣಿಸಿ 2ನೇ ಕ್ವಾಲಿಫೈಯರ್‍ಗೆ ಆರ್‌ಸಿಬಿ ಎಂಟ್ರಿ
ಬಲಗೈ ಆರಂಭಿಕ ಆಟಗಾರ ಐಪಿಎಲ್ 2022ರಲ್ಲಿ ಒಟ್ಟು 15 ಪಂದ್ಯಗಳನ್ನು ಆಡಿದ್ದು, 661 ರನ್ ಗಳಿಸಿದ್ದಾರೆ. ಈ ಮೊದಲು ರಾಹುಲ್ 2021ರ ಆವೃತ್ತಿಯ 13 ಪಂದ್ಯಗಳಲ್ಲಿ 626 ರನ್, 2020ರ ಋತುವಿನ 14 ಪಂದ್ಯಗಳಲ್ಲಿ 670 ಮತ್ತು 2018ರ ಲೀಗ್‍ನಲ್ಲಿ ಒಟ್ಟು 659 ರನ್ ಗಳಿಸಿದ ಸಾಧನೆ ಮಾಡಿದ್ದರು.
ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಂತಕಥೆ ಕ್ರಿಸ್ ಗೇಲ್ ಮತ್ತು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಐಪಿಎಲ್‍ನ 3 ವಿಭಿನ್ನ ಋತುಗಳಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪರವಾಗಿ ಆಡುತ್ತಿದ್ದಾಗ ಗೇಲ್ ಸತತ 3 ವರ್ಷಗಳಲ್ಲಿ(2011, 2012 ಮತ್ತು 2013) 600ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದರು. ಮತ್ತೊಂದೆಡೆ ಡೇವಿಡ್ ವಾರ್ನರ್ ಅವರು ಸನ್‍ರೈಸರ್ಸ್ ಹೈದರಾಬಾದ್ ನಾಯಕರಾಗಿ 2016 ರಿಂದ 2019ರವರೆಗೆ ಸತತ 3 ಋತುಗಳಲ್ಲಿ ಈ ಸಾಧನೆ ಮಾಡಿದ್ದರು.
ಇದನ್ನೂ ಓದಿ: IPL 2022, RCB vs LSG: ಲಕ್ನೋ ವಿರುದ್ಧ ಭರ್ಜರಿ ಶತಕ ಸಿಡಿಸಿದ ರಜತ್ ಪಾಟಿದಾರ್
ರಜತ್ ಪಾಟಿದಾರ್(ಅಜೇಯ 112) ಭರ್ಜರಿ ಶತಕದ ನೆರವಿನಿಂದ ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪ್ಲೇ ಆಫ್ ಹಂತದ ಮೊದಲ ಪಂದ್ಯದಲ್ಲಿ ಲಕ್ನೋ ವಿರುದ್ಧ ಆರ್‌ಸಿಬಿ 14 ರನ್‍ಗಳ ಗೆಲವು ಸಾಧಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ 2ನೇ ಕ್ವಾಲಿಫೈಯರ್‍ಗೆ ಎಂಟ್ರಿ ಕೊಟ್ಟಿದ್ದು, ಶುಕ್ರವಾರ ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ರಾಜಸ್ಥಾನ್ ತಂಡವನ್ನು ಮಣಿಸಿ ಗುಜರಾತ್ ಟೈಟಾನ್ಸ್ ಈಗಾಗಲೇ ಫೈನಲ್ ಪ್ರವೇಶಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.