IPL 2021: ಈ ಒಂದೇ ಒಂದು ತಪ್ಪಿನಿಂದ ಕೋಲ್ಕತ್ತಾಗೆ ಕೈತಪ್ಪಿದ ಐಪಿಎಲ್ ಟ್ರೋಫಿ..!

ಬೌಲಿಂಗ್ ನಲ್ಲಿ ಮಾಡಿದ ಪ್ರಮಾದವನ್ನು ಬ್ಯಾಟಿಂಗ್ ನಲ್ಲಿ ಸುಧಾರಿಸಿಕೊಂಡು ಆಡಿದ್ದರೆ ಕೆಕೆಆರ್ ಗೆ 3ನೇ ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಅವಕಾಶವಿತ್ತು.

Written by - Puttaraj K Alur | Last Updated : Oct 16, 2021, 09:37 AM IST
  • ಫಾಫ್ ಡು ಪ್ಲೆಸಿಸ್ ಸ್ಟಂಪ್ ಔಟ್ ಮಾಡುವ ಅವಕಾಶ ಕಳೆದುಕೊಂಡ ದಿನೇಶ್ ಕಾರ್ತಿಕ್
  • ಸಿಕ್ಕ ಜೀವದಾನವನ್ನು ಸರಿಯಾಗಿಯೇ ಬಳಸಿಕೊಂಡ ಡು ಪ್ಲೆಸಿಸ್ ಚೆನ್ನೈ ಗೆಲುವಿಗೆ ನೆರವಾದರು
  • ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿದ ಕೋಲ್ಕತ್ತಾ 3ನೇ ಬಾರಿ ಚಾಂಪಿಯನ್ ಆಗುವ ಅವಕಾಶದಿಂದ ವಂಚಿತವಾಯಿತು
IPL 2021: ಈ ಒಂದೇ ಒಂದು ತಪ್ಪಿನಿಂದ ಕೋಲ್ಕತ್ತಾಗೆ ಕೈತಪ್ಪಿದ ಐಪಿಎಲ್ ಟ್ರೋಫಿ..!  title=
4ನೇ ಬಾರಿ ಚಾಂಪಿಯನ್ ಆದ ಚೆನ್ನೈ ಸೂಪರ್ ಕಿಂಗ್ಸ್

ನವದೆಹಲಿ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 14ನೇ ಆವೃತ್ತಿಯ ಐಪಿಎಲ್ ಟೂರ್ನಿ(IPL 2021) ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಮತ್ತೊಮ್ಮೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಇಯಾನ್ ಮಾರ್ಗನ್ ನೇತೃತ್ವದ ಕೆಕೆಆರ್ ಅನ್ನು ಎಂ.ಎಸ್.ಧೋನಿ ನೇತೃತ್ವದ ಚೆನ್ನೈ 27 ರನ್ ಗಳಿಂದ ಸೋಲಿಸುವ ಮೂಲಕ 4ನೇ ಬಾರಿ ಟ್ರೋಫಿಯನ್ನು ಎತ್ತಿಹಿಡಿಯಿತು.

ಟಾಸ್ ಗೆದ್ದ ಕೆಕೆಆರ್(Kolkata Knight Riders) ಮೊದಲು ಬೌಲಿಂಗ್ ಆಯ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆಂಬತ್ತಿದ ಕೆಕೆಆರ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈ ಪರ ಬಿರುಸಿನ ಬ್ಯಾಟಿಂಗ್ ಮಾಡಿದ ಫಾಫ್ ಡು ಪ್ಲೆಸಿಸ್ 59 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಇದ್ದ 86 ರನ್ ಗಳಿಸಿದರು. ಋತುರಾಜ್ ಗಾಯಕ್ವಾಡ್ ಜೊತೆ ಕಣಕ್ಕಿಳಿದಿದ್ದ ಡು ಪ್ಲೆಸಿಸ್ ಆರಂಭದಲ್ಲಿಯೇ ಔಟಾಗಿಬಿಡುತ್ತಿದ್ದರು. ಆದರೆ ಅವರಿಗೆ ಸಿಕ್ಕ ಜೀವದಾನವನ್ನು ಸರಿಯಾಗಿ ಬಳಸಿಕೊಂಡರು.   

ಇದನ್ನೂ ಓದಿ: IPL 2021 Final CSK vs KKR: ಧೋನಿ ಮಾಡಿದ ಆ ನೂತನ ದಾಖಲೆ ಏನು ಗೊತ್ತೇ?

ದಿನೇಶ್ ಕಾರ್ತಿಕ್ ಮಾಡಿದ ದೊಡ್ಡ ಪ್ರಮಾದ

ಕೆಕೆಆರ್(KKR) ಪರ 3ನೇ ಓವರ್ ಬೌಲ್ ಮಾಡಲು ಶಕಿಬ್ ಅಲ್ ಹಸನ್ ಬಂದಿದ್ದರು. ಈ ವೇಳೆ ಚೆನ್ನೈ ಕೇವಲ 9 ರನ್ ಗಳಿಸಿತ್ತು. ಶಕೀಬ್‌ ಎಸೆತವನ್ನು ಭಾರಿಸಲು ಮುಂದಾದ ಡು ಪ್ಲೆಸಿಸ್‌ ಬ್ಯಾಟ್ ನಿಂದ ಚೆಂಡು ತಪ್ಪಿಸಿಕೊಂಡು ಕಾರ್ತಿಕ್(Dinesh Karthik) ಕೈಸೇರಿತ್ತು. ಈ ವೇಳೆ ಕಾರ್ತಿಕ್ ಡು ಪ್ಲೆಸಿಸ್ ಅನ್ನು ಸ್ಟಂಪ್ ಔಟ್ ಮಾಡಬಹುದಿತ್ತು. ಆದರೆ ಈ ಅವಕಾಶವನ್ನು ತಪ್ಪಿಸಿಕೊಂಡು ಎದುರಾಳಿ ಆಟಗಾರನಿಗೆ ಜೀವದಾನ ನೀಡಿದರು. ಇದರಿಂದ ಕೆಕೆಆರ್ ‍ಗೆ ಆರಂಭಿಕ ಯಶಸ್ಸು ಸಿಗಲು ಸಾಧ್ಯವಾಗಲಿಲ್ಲ. ಈ ವೇಳೆ ಡು ಪ್ಲೆಸಿಸ್ ಕೇವಲ 2 ರನ್ ಮಾತ್ರ ಗಳಿಸಿದ್ದರು. ಅವರನ್ನು ಔಟ್ ಮಾಡಿದ್ದರೆ ಚೆನ್ನೈ ದೊಡ್ಡ ಮೊತ್ತ ಪೇರಿಸುತ್ತಿರಲಿಲ್ಲವೆಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಫಾಫ್ ಡು ಪ್ಲೆಸಿಸ್ ಅದ್ಭುತ ಇನ್ನಿಂಗ್ಸ್

ದಿನೇಶ್ ಕಾರ್ತಿಕ್ ಅವರಿಂದ ಜೀವದಾನದ ಸಂಪೂರ್ಣ ಲಾಭವನ್ನು ಡು ಪ್ಲೆಸಿಸ್(Faf du Plessis) ಪಡೆದುಕೊಂಡರು. ಚೆನ್ನೈ ಗೆಲುವಿಗೆ ಭದ್ರ ಅಡಿಪಾಯ ಹಾಕುವಲ್ಲಿ ಅವರು ಯಶಸ್ಸಿ ಕೂಡ ಆದರು. ಕೆಕೆಆರ್ ಬೌಲರ್ ಗಳ ಬೆವರಿಳಿಸಿದ ಡು ಪ್ಲೆಸಿಸ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಭರ್ಜರಿ ಅರ್ಧಶತಕ ಭಾರಿಸಿದರು. ಪರಿಣಾಮ ಧೋನಿ ಪಡೆ ಕೆಕೆಆರ್ ಗೆ ಸವಾಲಿನ ಮೊತ್ತದ ಗುರಿ ನೀಡಿತು.

ಇದನ್ನೂ ಓದಿ: IPL 2021 Final: ಮಿಂಚಿದ ಡುಪ್ಲೆಸಿಸ್, ಚೆನ್ನೈ ಸೂಪರ್ ಕಿಂಗ್ಸ್ ಗೆ ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ

ಬ್ಯಾಟಿಂಗ್ ನಲ್ಲಿ ಫೇಲ್ ಆದ ಕೋಲ್ಕತ್ತಾ

ಬೌಲಿಂಗ್ ನಲ್ಲಿ ಮಾಡಿದ ಪ್ರಮಾದವನ್ನು ಬ್ಯಾಟಿಂಗ್ ನಲ್ಲಿ ಸುಧಾರಿಸಿಕೊಂಡು ಆಡಿದ್ದರೆ ಕೆಕೆಆರ್(KKR)ಗೆ 3ನೇ ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಅವಕಾಶವಿತ್ತು. ಆರಂಭಿಕ ಆಟಗಾರರಾದ ಶುಭಮನ್ ಗಿಲ್(51) ಹಾಗೂ ವೆಂಕಟೇಶ್ ಅಯ್ಯರ್(50) ಹೊರತುಪಡಿಸಿದರೆ ಕೋಲ್ಕತ್ತಾದ ಯಾವೊಬ್ಬ ಬ್ಯಾಟ್ಸಮನ್ ಗಳು ಕೂಡ ಹೆಚ್ಚುಹೊತ್ತು ಕ್ರೀಸ್ ನಲ್ಲಿ ನಿಂತು ಆಡಲಿಲ್ಲ. ನಿತೀಶ್ ರಾಣಾ(0), ಸುನಿಲ್ ನರೈನ್(2), ನಾಯಕ ಇಯಾನ್ ಮಾರ್ಗನ್(4), ದಿನೇಶ್ ಕಾರ್ತಿಕ್(9), ಶಕಿಬ್ ಅಲ್ ಹಸನ್(0) ಮತ್ತು ರಾಹುಲ್ ತ್ರಿಪಾಠಿ(2) ಕೋಲ್ಕತ್ತಾ ತಂಡಕ್ಕೆ ಕೈಕೊಟ್ಟರು. ಹೀಗಾಗಿ ಕೆಕೆಆರ್ ಸೋಲು ಕಾಣಬೇಕಾಯಿತು.

 4ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆದ ಚೆನ್ನೈ

ಎಂ.ಎಸ್.ಧೋನಿ(MS Dhoni) ನಾಯಕತ್ವದಲ್ಲಿ ಚೆನ್ನೈ 4ನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಸಿಎಸ್‌ಕೆ 2010, 2011, 2018 ಮತ್ತು 2021ರಲ್ಲಿ ಟ್ರೋಫಿಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಳೆದ ಟೂರ್ನಿಯಲ್ಲಿ ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದ ಚೆನ್ನೈ ಈ ಬಾರಿ ಫೈನಲ್ ತಲುಪಿದ ಮೊದಲ ತಂಡವಾಗಿತ್ತು. ಲೀಗ್ ಪಂದ್ಯಗಳಲ್ಲಿ ಆಡಿದ 14 ಪಂದ್ಯಗಳ ಪೈಕಿ 9 ಪಂದ್ಯಗಳನ್ನು ಧೋನಿ ಪಡೆ ಗೆದ್ದಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News