ಬೆಂಗಳೂರು: ನಿರಂತರ ರಾಜಕೀಯ ಬೆಳವಣಿಗೆಯ ನಡುವೆಯೂ ಸಿದ್ದರಾಮಯ್ಯ ಅವರ ಶ್ರಿರಕ್ಷೆಯಲ್ಲಿ ನಮ್ಮ ಸರ್ಕಾರ ಐದು ವರ್ಷ ಪೂರೈಸಲಿದೆ ಎಂದು ಮೌನವಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಇದೀಗ ಅಖಾಡಕ್ಕಿಳಿದಿದ್ದಾರೆ. ನಿನ್ನೆಯಷ್ಟೇ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜಾರಕಿಹೊಳಿ ಸಹೋದರರನ್ನು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ.
ಸ್ವತಃ ಮುಖ್ಯಮಂತ್ರಿಗಳೇ ಅಖಾಡಕ್ಕಿಳಿದಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ತಿರುವು ನೀಡುವ ಸಾಧ್ಯತೆ ಇದ್ದು, ರಾಜಕೀಯ ಸಂಚಲನ ಮೂಡಿಸಿದೆ. ಇನ್ನು ಜಾರಕಿಹೊಳಿ ಸಹೋದರರನ್ನು ಭೇಟಿಯಾದ ಸಿಎಂ ಕುಮಾರಸ್ವಾಮಿ ಅವರ ಬಳಿ ಸಹೋದರರು ಹಲವು ಬೇಡಿಕೆ ಇಟ್ಟಿದ್ದಾರೆ. ಸಹೋದರರ ಬೇಡಿಕೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಹೆಚ್ಡಿಕೆ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದು ಬೇಡ, ನಿಮ್ಮ ಅಸಮಾಧಾನಗಳು ಏನೇ ಇದ್ದರೂ ಬಗೆಹರಿಸೋಣ ಎಂದಿದ್ದಾರೆ.
ಜಾರಕಿಹೊಳಿ ಸಹೋದರರ ಬಿಕ್ಕಟ್ಟು ಇತ್ಯರ್ಥಕ್ಕೆ ಮಧ್ಯ ಪ್ರವೇಶಿಸಿರುವ ಹೆಚ್ಡಿಕೆ ಸಹೋದರರ ಬೇಡಿಕೆಗಳನ್ನು ಈಡೇರಿಸಿ ಬಂಡಾಯದ ಬಿಸಿಯನ್ನು ಶಮನಗೊಳಿಸುವರೇ ಎಂಬುದನ್ನು ಕಾದು ನೋಡಬೇಕಿದೆ.