ವಿವಾದಗಳ ಬಗ್ಗೆ ಮನದಾಳದ ನೋವು ತೋಡಿಕೊಂಡ ರಶ್ಮಿಕಾ ಮಂದಣ್ಣ

ಸಾಮಾಜಿಕ‌ ಜಾಲತಾಣ ಫೇಸ್ಬುಕ್ ನಲ್ಲಿ ನಟಿ‌ ರಶ್ಮಿಕಾ‌ ಏನ್ ಹೇಳಿದಾರೆ ಗೊತ್ತಾ?

Last Updated : Sep 18, 2018, 10:40 AM IST
ವಿವಾದಗಳ ಬಗ್ಗೆ ಮನದಾಳದ ನೋವು ತೋಡಿಕೊಂಡ ರಶ್ಮಿಕಾ ಮಂದಣ್ಣ  title=

ಬೆಂಗಳೂರು: ಕಳೆದ ವರ್ಷವಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂದು ಆಪ್ತ ಮೂಲಗಳಿಂದ ಮಾಹಿತಿ ಲಭಿಸಿತ್ತು. ತದಾದ ನಂತರ ಚಂದನವನದ ತಾರೆಯರಾದ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಜೋಡಿ ವೃತ್ತಿ ಕಾರಣದಿಂದಾಗಿ ದೂರವಾಗಿದ್ದಾರೆ ಎನ್ನಲಾಗುತ್ತಿತ್ತು. 

ಗೀತ ಗೋವಿಂದಂ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್‌ ಲಿಪ್‌ಲಾಕ್‌ ಮಾಡಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ನಂತರ ರಶ್ಮಿಕಾ ಮತ್ತು ರಕ್ಷಿತ್‌ ದೂರವಾಗುತ್ತಿದ್ದಾರೆ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಪ್ರಾರಂಭದಲ್ಲಿ ಇದು ಸುಳ್ಳು ಎಂದು ಇಬ್ಬರೂ ಹೇಳಿಕೊಂಡಿದ್ದರು. ನಂತರ ಈ ಜೋಡಿಯ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ವೈರಲ್ ಆಗುತ್ತಿದ್ದಂತೆ ಹಲವರು ರಶ್ಮಿಕಾ ಅವರನ್ನು ಟ್ರೋಲ್ ಮಾಡಿದ್ದೂ ಉಂಟೂ...

ಈ ವದಂತಿಗಳ ಬಗ್ಗೆ ಫೇಸ್ಬುಕ್ ಮೂಲಕ ಪ್ರತಿಕ್ರಿಯಿಸಿದ್ದ ರಕ್ಷಿತ್ ಶೆಟ್ಟಿ, ರಶ್ಮಿಕಾ ಬಗ್ಗೆ ನಿಮಗೆಲ್ಲಾ ಒಂದು ಅಭಿಪ್ರಾಯ ರೂಪಗೊಂಡಿದೆ. ಆದರೆ ನಾನು ಯಾರನ್ನೂ ದೂರುವುದಿಲ್ಲ. ಏನು ಹೇಳುತ್ತೀವೋ ಏನು ನೋಡುತ್ತೇವೋ ಅದೆಲ್ಲಾ ಸತ್ಯ ಎಂದು ಎಲ್ಲರೂ ನಂಬುತ್ತಾರೆ. ಆದರೆ ಅದೆಲ್ಲಾ ಸತ್ಯ ಆಗಿರಲ್ಲ. ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡಬೇಕು ಎಂದಿದ್ದರು. ಅಲ್ಲದೆ, ರಶ್ಮಿಕಾ ಮಂದಣ್ಣ ಅವರನ್ನು ನಾನು 2 ವರ್ಷಗಳಿಂದ ನೋಡುತ್ತಿದ್ದು ಅವರು ಏನು ಎಂಬುದು ನನಗೆ ಚೆನ್ನಾಗಿ ಗೊತ್ತು. ಯಾವುದೇ ಇಲ್ಲ ಸಲ್ಲದ ವದಂತಿ ಹಬ್ಬಿಸಬೇಡಿ. ರಶ್ಮಿಕಾ ನೆಮ್ಮದಿ ಹಾಳು ಮಾಡಬೇಡಿ. ನಿಮಗೆ ಇದುವರೆಗೂ ದೊರೆತಿರುವ ಎಲ್ಲಾ ಮಾಹಿತಿ ಸತ್ಯವಲ್ಲ, ಎಲ್ಲವೂ ಸದ್ಯದಲ್ಲೇ ಬಗೆಹರಿಯಲಿದೆ ಎಂದಿದ್ದರು.

ಇಷ್ಟೆಲ್ಲಾ ಆದರೂ ಈ ವದಂತಿಗಳ ಬಗ್ಗೆ ಮೌನವೇ ವಹಿಸಿದ್ದ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದ ಮೂಲಕ ಈಗ ತಮ್ಮ ಮನದಾಳದ ನೋವು ತೋಡಿಕೊಂಡಿದ್ದಾರೆ... ವಿನಮ್ರತೆಯಿಂದ... ಕೆಲವು ದಿನಗಳಿಂದ ನಾನು ಮೌನವಹಿಸಿದ್ದೆ, ಆದ್ರೆ ನನ್ನ ಬಗೆಗಿನ ವಾಹಿನಿಗಳ ಸುದ್ದಿಗಳು, ಪತ್ರಿಕೆಗಳ ಆರ್ಟಿಕಲ್ ಗಳು, ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್ ಗಳನ್ನು ಗಮನಿಸಿದ್ದೇನೆ. ಅವೆಲ್ಲಾ ನನಗೆ ಬೇಸರ ಮೂಡಿಸಿವೆ. ಹಾಗಂತ ನಾನು ಯಾರನ್ನೂ ದೂರುತ್ತಿಲ್ಲ. ಏಕೆಂದರೆ ನಾ ಯಾರಿಗೂ ಪ್ರತಿಕ್ರಿಯಿಸಲು ಸಿಕ್ಕಿಲ್ಲ...

ಆದರೆ ನಾ ಹೇಳಬಯಸೋದೇನೆಂದರೆ ನಾನಾಗಲಿ, ರಕ್ಷಿತ್ ಆಗಲಿ ಅಥವಾ ಈ ರಂಗದಲ್ಲಿ ಕೆಲಸ ಮಾಡುವ ಯಾರೇ ಆಗಲಿ ನೆಮ್ಮದಿಯಿಂದ ಕೆಲಸ ಮಾಡಿಕೊಂಡು ಹೋಗಲು ಬಿಡಿ. ನಿಮಗೆ ತಿಳಿದಿರಲಿ ಪ್ರತಿ ನಾಣ್ಯಕ್ಕೂ ಎರಡು ಮುಖವಿದೆ. ಪ್ರತಿ ಕಥೆಗೂ ಎರಡು ದೃಷ್ಟಿಕೋನ ಇರುತ್ತೆ.

ದಯವಿಟ್ಟು, ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿರೋರಿಗೆ ನೆಮ್ಮದಿಯಿಂದ ಕೆಲಸ ಮಾಡಲು ಬಿಡಿ. ಇದು ನನ್ನ ಎರಡು ಸಾಲುಗಳ ಕೋರಿಕೆ. ಇನ್ನೊಂದು ವಿಷಯ ಸ್ಪಷ್ಟಪಡಿಸೋದೇನಂದರೆ ನಾನು ಕನ್ನಡ ಬಿಟ್ಟು ಹೋಗ್ತಿಲ್ಲ. ಕನ್ನಡದಲ್ಲಿ ‌ನಟನೆ‌ ಮುಂದುವರೆಸ್ತೇನೆ. ಎಲ್ಲದಕ್ಕಿಂತ ಹೆಚ್ಚಾಗಿ ಯಾವುದೇ ಭಾಷೆಯಲ್ಲಿ ನಟಿಸಲಿ ಅದಕ್ಕೆ ತಕ್ಕಂತಹ ಶ್ರಮ ಹಾಕುತ್ತೇನೆ ಎಂದು ರಶ್ಮಿಕಾ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.


 

Trending News