ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಗುರುವಾರದಂದು ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನು ಸುಪ್ರಿಂಕೋರ್ಟ್ ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದಾರೆ. ಪ್ರಸಕ್ತ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನಿವೃತ್ತಿಯ ನಂತರ ಅಕ್ಟೋಬರ್ 3, 2018 ರಂದು ನ್ಯಾಯಮೂರ್ತಿ ಗೊಗೊಯ್ ಅವರು ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಲಿದ್ದಾರೆ.
1954 ರ ನವೆಂಬರ್ 18 ರಂದು ಜನಿಸಿದ ನ್ಯಾಯಮೂರ್ತಿ ಗೊಗೊಯ್ 1978 ರಲ್ಲಿ ಮೊದಲ ಬಾರಿಗೆ ವಕೀಲರಾಗಿ ಸೇರಿಕೊಂಡರು. ಗೌಹಾತಿ ಹೈಕೋರ್ಟ್ನಲ್ಲಿ ಸಾಂವಿಧಾನಿಕ, ತೆರಿಗೆ ಮತ್ತು ಕಂಪನಿ ವಿಷಯಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದರು. ಫೆಬ್ರವರಿ 28, 2001 ರಂದು ಗೌಹಾತಿ ಹೈಕೋರ್ಟ್ನ ಶಾಶ್ವತ ನ್ಯಾಯಾಧೀಶರಾಗಿ ನೇಮಕಗೊಂಡರು.
ಸೆಪ್ಟೆಂಬರ್ 9, 2010 ರಂದು ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗೆ ವರ್ಗಾಯಿಸಲಾಯಿತು. ಅನಂತರ ಫೆಬ್ರವರಿ 12, 2011 ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡರು.ತದನಂತರ 23 ಏಪ್ರಿಲ್ 2012 ರಂದು ಸುಪ್ರೀಂ ಕೋರ್ಟ್ನನಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡರು.