ಮಡಿಕೇರಿ: "ಕೇಂದ್ರ ಸಚಿವೆಯಾಗಿ ನಾನು ಜಿಲ್ಲಾ ಉಸ್ತುವಾರಿ ಸಚಿವರ ಮಾತು ಕೇಳಬೇಕೆ?" ಎಂದಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವರ್ತನೆಯ ಬಗ್ಗೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯದ ಉಪಮುಖ್ಯ ಮಂತ್ರಿ ಜಿ.ಪರಮೇಶ್ವರ್ ಅವರು, ಕೊಡಗಿನಲ್ಲಿ ಪ್ರವಾಹ ಮತ್ತು ಭೂ ಕುಸಿತ ಸಂಭವಿಸಿದ ದಿನದಿಂದ ವಾರಗಳ ಕಾಲ ನಮ್ಮ ಸಚಿವರುಗಳು ಅಲ್ಲಿ ಸ್ವತಃ ಹೋಗಿ ಪರಿಹಾರ ಮತ್ತು ರಕ್ಷಣಾ ಕಾರ್ಯದ ಉಸ್ತುವಾರಿ ನೋಡಿಕೊಂಡಿದ್ದಾರೆ. ನೀವು ಅವರಿಗೆ ಅದೇ ತರಹದ ಗೌರವ ಮತ್ತು ಸಹಕಾರ ತೋರಿಸಬೇಕಾಗಿತ್ತು. ಅದು ಬಿಟ್ಟು ಅವರ ಮೇಲೆ ಸಿಟ್ಟಾಗಿ ಮಾತನಾಡಿದ್ದು ತೀವ್ರ ಬೇಸರವನ್ನುಂಟುಮಾಡಿದೆ ಎಂದಿದ್ದಾರೆ.
State Governments derive their powers from our Constitution not from the Centre. The Constitution has distributed powers among the Centre and States to ensure an equitable partnership between both. We are not inferior to the Centre. We are partners @nsitharaman
— Dr. G Parameshwara (@DrParameshwara) August 25, 2018
ರಾಜ್ಯ ಸರ್ಕಾರಗಳು ತಮ್ಮ ಅಧಿಕಾರವನ್ನು ಸಂವಿಧಾನದಿಂದ ಪಡೆದುಕೊಳ್ಳುತ್ತದೆಯೇ ಹೊರತು ಕೇಂದ್ರ ಸರ್ಕಾರದಿಂದಲ್ಲ. ಈ ದೇಶದ ಸಂವಿಧಾನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸರಿಯಾದ ಹೊಂದಾಣಿಕೆಯಾಗುವಂತೆ ಸಮನ್ವಯವಾಗಿ ಅಧಿಕಾರವನ್ನು ಹಂಚಿಕೆ ಮಾಡಿದೆ. ನಾವು ಕೇಂದ್ರ ಸರ್ಕಾರಕ್ಕಿಂತ ಕಡಿಮೆಯಲ್ಲ, ನಾವು ಸಹಭಾಗಿಗಳು ಎಂದು ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಟ್ವೀಟ್ ಮಾಡಿದ್ದು, ರಾಜ್ಯದ ಮೇಲೆ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಎಷ್ಟು ಕಾಳಜಿ ಇದೆ ಎಂಬುದು ಈ ಘಟನೆಯಿಂದ ತಿಳಿದುಬಂದಿದೆ. ಕೇಂದ್ರಕ್ಕೆ ಕರ್ನಾಟಕದಲ್ಲಿ ಪ್ರವಾಹದಿಂದಾಗಿರುವ ನಷ್ಟವನ್ನು ಅಂದಾಜಿಸಿ ವರದಿ ನೀಡುವುದಕ್ಕಿಂತ ಹೆಚ್ಚಾಗಿ ರಾಜ್ಯ ಸಚಿವರ ಮೇಲೆ ಅಧಿಕಾರ ಚಲಾಯಿಸುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇದರಿಂದ ಕೇಂದ್ರಕ್ಕೆ ಕರ್ನಾಟಕದ ಬಗ್ಗೆ ಇರುವ ಕಾಳಜಿ ಎಷ್ಟು ಎಂಬುದನ್ನು ತೋರುತ್ತದೆ" ಎಂದಿದ್ದಾರೆ.
I condemn the stepmotherly treatment by @PMOIndia in releasing relief funds. We expected PM @narendramodi to assess the loss instead it was delegated to @DefenceMinIndia, who was more interested in dominating our state minister. This reflects @BJP4India 's apathy towards Ktaka.
— Siddaramaiah (@siddaramaiah) August 25, 2018
ರಾಜ್ಯದ ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪತ್ರಿಕಾಗೋಷ್ಠಿ ನಡೆಸುವ ಸಂದರ್ಭದಲ್ಲಿ, ಕಾರ್ಯಕ್ರಮ ವೇಳಾಪಟ್ಟಿಯಲ್ಲಿ ಆದ ಬದಲಾವಣೆಯಿಂದಾಗಿ ಸಿಟ್ಟುಗೊಂಡು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಮತ್ತು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ವಿರುದ್ಧ ಗರಂ ಆಗಿ ವರ್ತಿಸಿದ್ದರು. "ನಾನು ನಿಮ್ಮ ಮಾತು ಕೇಳಬೇಕೆ(ಜಿಲ್ಲಾ ಉಸ್ತುವಾರಿ ಸಚಿವರು) ಇಲ್ಲವೇ ಜಿಲ್ಲಾಧಿಕಾರಿಗಳ ಮಾತು ಕೇಳಬೇಕೆ? ನಿಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಮೊದಲು ಪರಿಹರಿಸಿಕೊಳ್ಳಿ..." ಎಂದಿದ್ದರು.
ಅಲ್ಲದೆ, "ನಾನು ಶಿಷ್ಟಾಚಾರದಂತೆ ನಡೆದುಕೊಳ್ಳುತ್ತಿದ್ದೇನೆ. ನಿಗದಿಯಾಗಿರುವ ಕಾರ್ಯಕ್ರಮಗಳಂತೆಯೇ ನಡೆಯಬೇಕು. ಕೇಂದ್ರ ಸಚಿವರು ರಾಜ್ಯ ಸಚಿವರ ಮಾತನ್ನು ಕೇಳಬೇಕೆಂದು ಹೇಳುತ್ತಿರುವುದು ಇದೇ ಮೊದಲು ಎಂದು ಸಿಟ್ಟಾದರು. ಮೊದಲು ಸೋಮವಾರಪೇಟೆಗೆ ಹೋಗಬೇಕೆಂದು ನಿಗದಿಯಾಗಿತ್ತು. ಯಾವ ಕಾರಣಕ್ಕಾಗಿ ಕುಶಾಲನಗರದ ಮಕ್ಕಂದೂರು ಪ್ರದೇಶಕ್ಕೆ ನಮ್ಮನ್ನು ಕರೆದುಕೊಂಡು ಹೋಗಿದ್ದಿರಿ. ನಿಮ್ಮ ರಾಜಕೀಯ ಲಾಭನಷ್ಟ ಇಂಥ ಸಂದರ್ಭದಲ್ಲಿ ತೋರಿಸಬೇಡಿ. ಸಂಕಷ್ಟದಲ್ಲಿರುವ ಜನತೆಗೆ ನೆರವು ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ" ಎಂದು ಪಕ್ಕದಲ್ಲಿದ್ದ ಸಾ.ರಾ.ಮಹೇಶ್ ವಿರುದ್ಧ ಕಿಡಿಕಾರಿದ್ದರು.