ಮಂಡ್ಯ: ಪಾಂಡವಪುರ ತಾಲೂಕಿನ ಸೀತಾಪುರದಲ್ಲಿ ನೂರಕ್ಕೂ ಹೆಚ್ಚು ರೈತರೊಂದಿಗೆ ಗದ್ದೆಗಿಳಿದು 'ಮಣ್ಣಿನ ಮಗ'ನಾದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರೈತರ ಆತ್ಮವಿಶ್ವಾಸ ಹೆಚ್ಚಿಸಲು ರೈತರೊಂದಿಗೆ ರೈತರಾಗಿ ಭತ್ತ ನಾಟಿ ಮಾಡಿದರು.
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಸೀತಾಪುರ –ಅರಳಕುಪ್ಪೆ ಗ್ರಾಮದ ವ್ಯಾಪ್ತಿಯಲ್ಲಿ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಇಂದು ಭತ್ತದ ನಾಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೀತಾಪುರದಲ್ಲಿ ಐದೂವರೆ ಎಕರೆ ಜಮೀನಿನಲ್ಲಿ 100 ಗಂಡಸರು ಹಾಗೂ 50 ಹೆಂಗಸರು ಭತ್ತ ನಾಟಿ ಮಾಡುವ ಮೂಲಕ ಮುಖ್ಯಮಂತ್ರಿಯವರಿಗೆ ಸಾಥ್ ನೀಡಿದರು.
ಸಿಎಂ ನಾಟಿ ಮಾಡುವ ಸಂದರ್ಭದಲ್ಲಿ ಸೋಬಾನೆ ಹಾಡುಗಾರರು ಸೋಬಾನೆ ಪದ, ನಾಟಿ ಪದ ಹಾಡುವ ಮೂಲಕ ಮೆರುಗು ನೀಡಿದರು. ಸಿಎಂ ಜತೆ ಭತ್ತ ನಾಟಿ ಮಾಡುವ ಎಲ್ಲ 150 ರೈತರಿಗೂ ಐಡಿ ಕಾರ್ಡ್ ನೀಡಲಾಗಿತ್ತು. ನಾಟಿ ಮಾಡುವ ವೇಳೆ ಸೋಬಾನೆ ಪದ ಹಾಡುವವರಿಗೂ ಐಡಿ ಕಾರ್ಡ್ ನೀಡಲಾಗಿತ್ತು.
ಭತ್ತ ನಾಟಿ ಮಾಡಿದ ಬಳಿಕ ಮಾತನಾಡಿದ ಕುಮಾರಣ್ಣ, ರೈತನ ಕಷ್ಟ ಏನು ಎನ್ನುವುದು ನನಗೆ ಇಂದು ಕೆಸರು ಗದ್ದೆಯಲ್ಲಿ ಅರಿವಾಯಿತು. 25 ವರ್ಷಗಳ ಬಳಿಕ ಗದ್ದೆಗಿಳಿದು ಕೆಲಸ ಮಾಡಿದೆ. ಇದು ನನ್ನ ಜೀವನದಲ್ಲಿ ಮರೆಯಲಾರದ ದಿನ ಎಂದರು.
ಗೌರಿ ಗಣೇಶ ಹಬ್ಬದೊಳಗೆ ನಾಡಿನ ಜನರಿಗೆ ಬಂಪರ್ ಗಿಫ್ಟ್
ನಾಟಿ ಕಾರ್ಯಕ್ರಮ ಬಳಿಕ ವೇದಿಕೆಗೆ ತೆರಳಿ ರೈತರನ್ನುದ್ದೇಶಿಸಿ ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಾಡಿನ ರೈತರು ಸಾಲದ ನೆಪ ಹೇಳಿ ಆತ್ಮಹತ್ಯೆಗೆ ಶರಣಾಗಬೇಡಿ. ಕ್ಯಾಬಿನೆಟ್ ಮೀಟಿಂಗ್ ನಂತರ ಗೌರಿ ಗಣೇಶ ಹಬ್ಬದೊಳಗೆ ಈ ನಾಡಿನ ಆರುವರೆ ಕೋಟಿ ಜನರಿಗೆ ಬಂಪರ್ ಗಿಫ್ಟ್ ನೀಡುತ್ತೇನೆ. ರಾಷ್ಟ್ರೀಕೃತ ಬ್ಯಾಂಕ್ ಗಳ ರೈತರ ಸಾಲಮನ್ನಾ ಮಾಡಲು ಚಿಂತನೆ ನಡೆಸಿದ್ದೇವೆ. ಯಾವ ಸಾಲಗಾರನೂ ರೈತರ ಮನೆಗಳಿಗೆ ಬರದಂತೆ ಮಾಡುತ್ತೇನೆ. ಕೇವಲ ರೈತರ ಸಾಲ ಮನ್ನಾ ಮಾತ್ರ ಅಲ್ಲಾ ರೈತರಿಗೆ ಹೊಸ ಕೃಷಿ ನೀತಿ ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದರು.
ಸಕ್ಕರೆ ಕಾರ್ಖಾನೆಗೆ ಮರು ಜೀವ
ಮಂಡ್ಯ ಜಿಲ್ಲೆ ರೈತರ ಋಣ ನನ್ನ ಮೇಲೆ ಅಪಾರವಾಗಿದೆ, ಜಿಲ್ಲೆಯ 7 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಿಸಿದ್ದೀರಿ, ಏಳೇಳು ಜನ್ಮಕ್ಕೂ ಮಂಡ್ಯದ ಜನರ ಋಣ ತೀರಿಸಲಾಗದು, ಮಂಡ್ಯದ ಅಭಿವೃದ್ಧಿಯಾಗಬೇಕು ಎಂಬುದು ನನ್ನ ಬಯಕೆ ಎಂದ ಸಿಎಂ, ಮಂಡ್ಯದ ಸಕ್ಕರೆ ಕಾರ್ಖಾನೆಯನ್ನು ಪುನರುಜ್ಜೀವನ ಗೊಳಿಸುವುದಾಗಿ ಸಿಎಂ ಆಶ್ವಾಸನೆ ನೀಡಿದರು.
ತಿಂಗಳಲ್ಲಿ ಒಂದು ದಿನ ಪ್ರತಿ ಜಿಲ್ಲೆಗೆ ಪ್ರವಾಸ
ನಾನು ಮಂಡ್ಯ ಜಿಲ್ಲೆಯಲ್ಲಿ ಭತ್ತದ ನಾಟಿ ಮಾಡಿದ ಮಾತ್ರಕ್ಕೆ ನಾನು ಮಂಡ್ಯಕ್ಕೆ ಸೀಮಿತವಲ್ಲ. ನನಗೆ ಉತ್ತರ ಕರ್ನಾಟಕ ಬೇರೆಯಲ್ಲ, ಹಳೇ ಕರ್ನಾಟಕ ಬೇರೆಯಲ್ಲ. ಅಖಂಡ ಕರ್ನಾಟಕದ 30 ಜಿಲ್ಲೆಗಳ ರೈತರ ಏಳ್ಗೆ ನನ್ನ ಜವಾಬ್ದಾರಿ. ನಾನು 30 ಜಿಲ್ಲೆಯ ಪ್ರತಿನಿಧಿ. ಪ್ರತಿ ತಿಂಗಳು ಒಂದು ಜಿಲ್ಲೆಯಲ್ಲಿ ರೈತರ ಹೊಲದಲ್ಲಿ ಕೃಷಿ ನೀತಿ ಕುರಿತು ಕೆಲಸ ಮಾಡುತ್ತೇನೆ. ಮೂವತ್ತು ಜಿಲ್ಲೆಗಳ ರೈತರು ನನ್ನವರು . ನನ್ನ ರೈತ ಮುಂದೆಂದೂ ಸಾಲಗಾರನಾಗಬಾರದು . ಯಾರೂ ಆತನ ಮನೆ ಬಾಗಿಲಿಗೆ ಸಾಲ ವಸೂಲಿಗೆಂದು ಬರಬಾರದು. ಅಂತಹ ಯೋಜನೆಗಳನ್ನು ಸರ್ಕಾರದಿಂದ ಜಾರಿ ಮಾಡುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.