ಬೆಂಗಳೂರು: ಏಪ್ರಿಲ್ 22 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು, ಮೇ 18ರವರೆಗೆ ನಡೆಯಲಿದೆ. ಮಕ್ಕಳ ಭವಿಷ್ಯದ ಮಹತ್ವದ ತಿರುವು ಎಂದೇ ಪರಿಗಣಿಸಲಾಗುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಅನೇಕ ಮಕ್ಕಳು ಗೈರಾಗಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರದಂದು ನಡೆದ ಅರ್ಥಶಾಸ್ತ್ರ ಪರೀಕ್ಷೆಗೆ ಸುಮಾರು 28 ಸಾವಿರ ವಿದ್ಯಾರ್ಥಿಗಳು ಹಾಜರಾಗಿಲ್ಲ ಎಂಬ ಮಾಹಿತಿ ಲಭಿಸಿದೆ.
ಇದನ್ನು ಓದಿ: ಕನ್ನಡತಿಯಾದ ಜರ್ಮನ್ ಬೆಡಗಿ: ಈಕೆಯ ಕನ್ನಡಾಭಿಮಾನಕ್ಕೆ ಫಿದಾ ಆದ ಕರುನಾಡು
ಈ ಬಾರಿ ಒಟ್ಟು 4,12,593 ವಿದ್ಯಾರ್ಥಿಗಳು ಅರ್ಥಶಾಸ್ತ್ರ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದರು. ಇಷ್ಟು ವಿದ್ಯಾರ್ಥಿಗಳಲ್ಲಿ 28 ಸಾವಿರ ಮಂದಿ ಪರೀಕ್ಷೆ ಬರೆದಿಲ್ಲ. ಗೈರು ಹಾಜರಾದವರಲ್ಲಿ 20,147 ಹೊಸಬರು, 5,956 ಖಾಸಗಿ ಅಭ್ಯರ್ಥಿಗಳು ಮತ್ತು 2019 ಪುನರಾವರ್ತಿತ ಅಭ್ಯರ್ಥಿಗಳಿದ್ದಾರೆ. ತುಮಕೂರು ಜಿಲ್ಲೆಯಲ್ಲಿ 1,642 ವಿದ್ಯಾರ್ಥಿಗಳು, ಮೈಸೂರಿನಲ್ಲಿ 1,115 ವಿದ್ಯಾರ್ಥಿಗಳು, ಚಿತ್ರದುರ್ಗದಲ್ಲಿ 1,076 ವಿದ್ಯಾರ್ಥಿಗಳು ಮತ್ತು ಬೆಂಗಳೂರು ದಕ್ಷಿಣದಲ್ಲಿ 1,001 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಈ ಹಿಂದೆ ಹಿಜಾಬ್ ಗೊಂದಲ ಹಾಗೂ ಕೊರೊನಾ ಸಾಂಕ್ರಾಮಿಕದ ನಡುವೆ ಪರೀಕ್ಷೆಗೆ ಯಾವುದೇ ಸಮಸ್ಯೆಗಳಾಗದಂತೆ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿತ್ತು. ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಸಕಲ ರೀತಿಯಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿತ್ತು. ಇನ್ನೊಂದೆಡೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ನಿಯಮ ಪಾಲನೆ ಕಡ್ಡಾಯ ನಿಮಯವನ್ನು ಜಾರಿಗೆ ತರಲಾಗಿತ್ತು.
ಇದನ್ನು ಓದಿ: ಭಾಷೆ ಕಿರಿಕ್: ವಿದ್ಯಾರ್ಥಿಗಳ ನಡುವೆ ಸಂಘರ್ಷ
ಈ ಶೈಕ್ಷಣಿಕ ವರ್ಷದಲ್ಲಿ ರಾಜ್ಯಾದ್ಯಂತ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು. ಇವರಲ್ಲಿ 6,00,519 ಮಂದಿ ರೆಗ್ಯುಲರ್ ವಿದ್ಯಾರ್ಥಿಗಳಾಗಿದ್ದರೆ, 61,808 ಮಕ್ಕಳು ಪುನರಾವರ್ತಿತ ಅಭ್ಯರ್ಥಿಗಳು. 21,928 ಮಂದಿ ಖಾಸಗಿ ಅಭ್ಯರ್ಥಿಗಳಾಗಿದ್ದಾರೆ. ಇವರಲ್ಲಿ ಕಲಾ ವಿಭಾಗ- 2,28,167 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಿಂದ 2,45,519 ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಿಂದ 2,10,569 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.