ನವದೆಹಲಿ:ಭಾರತೀಯರ ಹಿಂದೂ ಆರಾಧ್ಯ ದೈವ ಶ್ರೀರಾಮನ ಕುರಿತು ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಓಲಿ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಇದೀಗ ಎಲ್ಲೆಡೆಯಿಂದ ಪ್ರತಿಕ್ರಿಯೆಗಳು ಬರುತ್ತಿದ್ದು, ವಿವಾದ ಶಮನಗೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಶ್ರೀರಾಮಚಂದ್ರ ನೇಪಾಳದಲ್ಲಿ ಜನಿಸಿದ್ದಾನೆ ಎಂದು ಓಲಿ ಹೇಳಿದ್ದಾರೆ. ಓಲಿ ಪ್ರಕಾರ ಶ್ರೀರಾಮನ ಅಯೋಧ್ಯಾ ನಗರಿ ನೇಪಾಳದ ವಾಲ್ಮೀಕಿ ಆಶ್ರಮದ ಬಳಿ ಇದ್ದು, ಭಾರತದ ಉತ್ತರ ಪ್ರದೇಶದಲ್ಲಿ ಇಲ್ಲ. ಭಾರತ ಮತ್ತು ನೇಪಾಳದ ಮಧ್ಯೆ ಈಗಾಗಲೇ ಸಂಬಂಧಗಳು ಸರಿಯಾಗಿಲ್ಲದ ಸಮಯದಲ್ಲಿ ಓಲಿ ನೀಡಿರುವ ಹೇಳಿಕೆಗೆ ಎಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ನೇಪಾಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ನೇಪಾಳದ ಪ್ರಧಾನಿ ಓಲಿ, ಭಾರತ ನಕಲಿ ಅಯೋಧ್ಯಾ ಸೃಷ್ಟಿಸುವ ಮೂಲಕ ನೇಪಾಳದ ಸಾಂಸ್ಕೃತಿಕ ಸಂಗತಿಗಳ ಮೇಲೆ ಅತಿಕ್ರಮಣ ಮಾಡಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಜನರು ಇದುವರೆಗೂ ಕೂಡ ಸೀತೆ ವರಿಸಿರುವ ಶ್ರೀರಾಮ ಭಾರತ ಮೂಲದವನಾಗಿದ್ದಾನೆ ಎಂಬ ಭ್ರಮೆಯಲ್ಲಿದ್ದಾರೆ. ನಿಜ ಹೇಳುವುದಾದರೆ ಶ್ರೀರಾಮ ನೇಪಾಳಕ್ಕೆ ಸೇರಿದವನಾಗಿದ್ದಾನೆ ಎಂದು ಓಲಿ ಹೇಳಿದ್ದಾರೆ.
ಓಲಿ ನೀಡಿರುವ ಈ ಹೇಳಿಕೆಗೆ ಇದೀಗ ಎಲ್ಲೆಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಓಲಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಯೋಧ್ಯೆಯ ಸಂತರು, ಓಲಿ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ. ಓಲಿ ಹೇಳಿಕೆಗೆ ಪ್ರತ್ರಿಕ್ರಿಯೆ ನೀಡಿರುವ ರಾಮ ದಳ ಟ್ರಸ್ಟ್ ಅಧ್ಯಕ್ಷ ರಾಮದಾಸ್ ಮಹಾರಾಜ್ ವೇದ ಮತ್ತು ಪುರಾಣಗಳ ಆಧಾರವಾಗಿಟ್ಟುಕೊಂಡು, ಸರಯೂ ನದಿ ನೇಪಾಳದಲ್ಲಿ ಹರಿಯುವುದಿಲ್ಲ ಎಂದಿದ್ದಾರೆ.
ಈ ಕುರಿತು ಹೇಳಿರುವ ಧರ್ಮಗುರು ಪರಮಹಂಸರು, ಕೆ.ಪಿ ಶರ್ಮಾ ಓಲಿ ಖುದ್ದು ನೇಪಾಳಕ್ಕೆ ಸೇರಿದವರಾಗಿಲ್ಲ. ನೇಪಾಳಿ ಎಂದು ಹೇಳಿಕೊಂಡು ಜನರನ್ನು ಮೋಸ ಮಾಡುತ್ತಿದ್ದಾರೆ. ನೇಪಾಳದ ಎರಡು ಡಜನ್ ಗೂ ಅಧಿಕ ಗ್ರಾಮಗಳ ಮೇಲೆ ಚೀನಾ ಹತೋಟಿಯನ್ನು ಮರೆಮಾಚಲು ಪ್ರಧಾನಿ ಓಲಿ ಶ್ರೀರಾಮನ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇನ್ನೊಂದೆಡೆ ಓಲಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಯೋಧ್ಯಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಯೋಗೇಂದ್ರ ಪ್ರತಾಪ್ ಸಿಂಗ್, ವಾಲ್ಮೀಕಿ ಬರೆದಿರುವ ರಾಮಾಯಣದಲ್ಲಿ ಜನಕಪುರದಿಂದ ಹಿಡಿದು ಶ್ರೀಲಂಕಾದವರೆಗೆ ಎಲ್ಲ ಸ್ಥಳಗಳನ್ನು ಉಲ್ಲೇಖಿಸಿದ್ದಾರೆ. ಆದರೆ, ನಾವು ಸಂಶೋಧನೆ ಕೈಗೊಂಡಾಗ ಇದರಲ್ಲಿ ಹಲವು ಆಶ್ಚರ್ಯಕರ ಸಂಗತಿಗಳು ಗಮನಕ್ಕೆ ಬಂದಿವೆ ಎಂದಿದ್ದಾರೆ.
ವಾಲ್ಮೀಕಿ ಋಷಿಗಳು ಬರೆದಿರುವ ರಾಮಾಯಣ ಭೂಗೋಳಕ್ಕೆ ಸಂಬಂಧಿಸಿದ ಪುಸ್ತಕವಾಗಿಲ್ಲ ಹಾಗೂ ಇದು ಯಾವುದೇ ಸ್ಥಳದ ಕುರಿತು ಮಾತನಾಡುವುದಿಲ್ಲ. ಈ ರಾಮಾಯಣದಲ್ಲಿ ಮಿಥಿಲಾ ನಗರಿಯ ಕುರಿತು ಉಲ್ಲೇಖವಿದ್ದು, ಅದು ಜನಕಪುರಿಯಾಗಿದೆ. ಪ್ರಸ್ತುತ ಅದು ನೇಪಾಳದಲ್ಲಿದೆ ಮತ್ತು ಅದು ಮಾತೆ ಜಾನಕಿಯ ಜನ್ಮಸ್ಥಾನವೂ ಕೂಡ ಆಗಿದೆ. ನೇಪಾಳದಲ್ಲಿ ರಾಮ ಜನ್ಮದ ಕುರಿತು ಗೀತೆಗಳನ್ನು ಹಾಡಲಾಗುವುದಿಲ್ಲ ಹಾಗೂ ಅಲ್ಲಿನ ರಾಮಲೀಲಾಗಳಲ್ಲಿ ಶ್ರೀರಾಮನ ಜನ್ಮಕ್ಕೆ ಸಂಬಧಿಸಿದಂತೆ ಯಾವುದೇ ಪ್ರಸಂಗವನ್ನು ಉಲ್ಲೇಖಿಸಲಾಗುವುದಿಲ್ಲ. ಎಂದು ಯೋಗೇಂದ್ರ ಪ್ರತಾಪ್ ಹೇಳಿದ್ದಾರೆ.
ನೇಪಾಳದ ರಾಮಲೀಲಾದಲ್ಲಿ ಯಾವ ರೀತಿ ಕೇವಲ ಸೀತಾಮಾತೆಯ ಜನ್ಮದ ಕುರಿತು ವರ್ಣನೆ ಮಾಡಲಾಗುತ್ತದೆಯೋ ಅದೇ ರೀತಿ ಭಾರತದಲ್ಲಿನ ರಾಮಲೀಲಾಗಳಲ್ಲಿ ಸೀತೆಯ ಜನ್ಮದ ಕುರಿತು ಹೇಳಲಾಗುವುದಿಲ್ಲ. ಅಯೋಧ್ಯೆಯ ರಾಮಲೀಲಾಗಳಲ್ಲಿ ಕಂಡು ಬರುವ ಲೋಕಗೀತೆಗಳಲ್ಲಿ ಶ್ರೀರಾಮನ ಜನ್ಮದ ಕುರಿತು ಮಾತ್ರ ಹೇಳಲಾಗುತ್ತದೆ ಎಂದು ಯೋಗೇಂದ್ರ ಪ್ರತಾಪ್ ಹೇಳುತ್ತಾರೆ.
ನಾವು ಸಂಸ್ಕಾರ ಹಾಗೂ ಸಂಸ್ಕೃತಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ನೇಪಾಳದ ಸಂಸ್ಕೃತಿ ಹಾಗೂ ಸಂಸ್ಕಾರ ಮಾತೆ ಜಾನಕಿಗೆ ಸಂಬಂಧಿಸಿದ್ದಾಗಿವೆ. ಅದೇ ರೀತಿ ಅಯೋಧ್ಯೆಯ ಸಂಸ್ಕೃತಿ ಹಾಗೂ ಸಂಸ್ಕಾರಗಳು ಶ್ರೀರಾಮನಿಗೆ ಸಂಬಂಧಿಸಿದ್ದಾಗಿವೆ ಎಂದು ಯೋಗೇಂದ್ರ ಹೇಳುತ್ತಾರೆ.
ಸಂಶೋಧನೆಗಳನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ, ದಕ್ಷಿಣ ಭಾರತದಲ್ಲಿ ಶ್ರೀರಾಮ ಅರಣ್ಯಕ್ಕೆ ತೆರಳಿದ ಮಾರ್ಗವಿದೆ. ಇದನ್ನು ರಾಮ-ಜಾನಕಿ ಮಾರ್ಗ ಎಂದೂ ಕೂಡ ಉಲ್ಲೇಖಿಸಲಾಗುತ್ತದೆ. ಇನ್ನೊಂದೆಡೆ ಕೇವಲ ಶ್ರೀರಾಮಚಂದ್ರನಿಗೆ ಸಂಬಂಧಿಸಿದ ಒಟ್ಟು ಎರಡು ಮಾರ್ಗಗಳಿವೆ. ಒಂದು ಶ್ರೀರಾಮ ಗೋರಕ್ಪುರ್ ಮಾರ್ಗವಾಗಿ ಜನಕಪುರಿಗೆ ತೆರಳಿದ ಮಾರ್ಗ ಹಾಗೋ ಎರಡನೆಯದ್ದು ಧನುಷ್ಯ ಯಜ್ಞದ ಬಳಿಕ ಬಲಿಯಾ ಮಾರ್ಗವಾಗಿ ಮರಳಿರುವ ಮಾರ್ಗ. ಈ ಎರಡೂ ಮಾರ್ಗಗಳು ಉತ್ತರ ಪ್ರದೇಶ ಮತ್ತು ನೇಪಾಳಕ್ಕೆ ಹೊಂದಿಕೊಂಡಂತೆ ಇವೆ ಎಂದು ಯೋಗೇಂದ್ರ ಪ್ರತಾಪ್ ಸಿಂಗ್ ಹೇಳುತ್ತಾರೆ.
ಇನ್ನೊಂದೆಡೆ ಪದ್ಮವಿಭೂಷಣ ಪ್ರಶಸ್ತಿ ವಿಜೇತ ಅಮೆರಿಕಾದ ವೈದಿಕ ವಿದ್ವಾನ ಡೇವಿಡ್ ಫ್ರಾಲಿ ಅಯೋಧ್ಯೆಗೆ ಸಂಬಂಧಿಸಿದಂತೆ ನೇಪಾಳದ ಪ್ರಧಾನಿ ಓಲಿ ನೀಡಿರುವ ಹೇಳಿಕೆಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು. ಓಲಿ ಕಮ್ಯೂನಿಜಮ್ ಅನ್ನು ಬಿಟ್ಟು ರಾಮರಾಜ್ಯವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಈ ಕುರಿತು ಬರೆದುಕೊಂಡಿರುವ ಡೇವಿಡ್ ಫ್ರಾಲಿ, ಶ್ರೀರಾಮ ತನ್ನ ಮನೆ ಎಂದು ಭಾವಿಸಿ ಇಡೀ ಭಾರತ ದೇಶಾದ್ಯಂತ ಯಾತ್ರೆ ನಡೆಸಿದ್ದಾರೆ. ಹೀಗಾಗಿ ನೇಪಾಳ ಪುನಃ ಭಾರತದಲ್ಲಿ ಶಾಮೀಲಾಗಬೇಕು ಎಂದು ಸಲಹೆ ನೀಡಿದ್ದಾರೆ.