ಇನ್ನೆರಡು ದಿನಗಳ ಬಳಿಕ ತೆರೆಯಲಿವೆ ಧಾರ್ಮಿಕ ಸ್ಥಳಗಳು, ಭೇಟಿ ನೀಡುವ ಮೊದಲು ಇವುಗಳನ್ನು ಗಮನಿಸಿ

ಜೂನ್ 8 ರಿಂದ ಅನ್ಲಾಕ್ 1 ರ ಅಡಿಯಲ್ಲಿ ಧಾರ್ಮಿಕ ಸ್ಥಳಗಳು ತೆರೆಯಲಿವೆ.  

Last Updated : Jun 5, 2020, 10:15 AM IST
ಇನ್ನೆರಡು ದಿನಗಳ ಬಳಿಕ ತೆರೆಯಲಿವೆ ಧಾರ್ಮಿಕ ಸ್ಥಳಗಳು, ಭೇಟಿ ನೀಡುವ ಮೊದಲು ಇವುಗಳನ್ನು ಗಮನಿಸಿ  title=

ನವದೆಹಲಿ: ಜೂನ್ 8 ರಿಂದ ಅನ್ಲಾಕ್ 1 ರ ಅಡಿಯಲ್ಲಿ ಧಾರ್ಮಿಕ ಸ್ಥಳಗಳು ತೆರೆಯಲಿವೆ. ಕೊರೊನಾವೈರಸ್ (Coronavirus) ಹರಡುವುದನ್ನು ತಡೆಗಟ್ಟಲು ಕಂಟೇನ್ಮೆಂಟ್ ವಲಯದಲ್ಲಿನ ಧಾರ್ಮಿಕ ಸ್ಥಳಗಳು ಸಾರ್ವಜನಿಕರಿಗೆ ಮುಚ್ಚಲ್ಪಡುತ್ತವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ ಕಂಟೈನ್‌ಮೆಂಟ್ ವಲಯವನ್ನು ಹೊರತುಪಡಿಸಿ ಇತರ ವಲಯಗಳಲ್ಲಿ ಧಾರ್ಮಿಕ ಸ್ಥಳಗಳನ್ನು ತೆರೆಯಬಹುದು.

ಧಾರ್ಮಿಕ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇರುತ್ತಾರೆ, ಆದ್ದರಿಂದ ಅಂತಹ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳು ಮತ್ತು ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಮುಖ್ಯವಾಗಿದೆ ಎಂದು ಸಚಿವಾಲಯ ಹೇಳಿದೆ. ಎಸ್‌ಒಪಿ ಪ್ರಕಾರ  ದೇವಾಲಯಕ್ಕೆ ಪ್ರವೇಶಿಸಲು ಮತ್ತು ನಿರ್ಗಮಿಸಲು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಬೇಕು. ಧಾರ್ಮಿಕ ಸ್ಥಳಗಳಿಗೆ ಪ್ರವೇಶಿಸುವ ಜನರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಬರುವ ಭಕ್ತರಿಗೆ ಹ್ಯಾಂಡ್ ಸ್ಯಾನಿಟೈಜರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಅಗತ್ಯವಾಗಿರುತ್ತದೆ. ಕರೋನಾವೈರಸ್ ರೋಗಲಕ್ಷಣಗಳನ್ನು ಹೊಂದಿರದ ಜನರಿಗೆ ಮಾತ್ರ ಪ್ರವೇಶಿಸಲು ಅನುಮತಿಸಲಾಗುತ್ತದೆ. 65 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಇನ್ನೂ ದೇವಾಲಯ (Temple)ಕ್ಕೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಮಕ್ಕಳು, ಹಿರಿಯ ನಾಗರಿಕರು ಮನೆಯಲ್ಲಿಯೇ ಇರಬೇಕೆಂದು ಸರ್ಕಾರ ಮನವಿ ಮಾಡಿದೆ. ದೇವಾಲಯವು ಎಸಿಯನ್ನು ಹೊಂದಿದ್ದರೆ ಅದರ ತಾಪಮಾನವು 24-30 ಡಿಗ್ರಿ ಸೆಲ್ಸಿಯಸ್ ನಡುವೆ ಇರಬೇಕು ಎಂದು ನಿರ್ದೇಶನ ನೀಡಲಾಗಿದೆ.

ಪ್ರಸಾದ ವಿತರಣೆ ಮತ್ತು ಪವಿತ್ರ ನೀರನ್ನು ಚಿಮುಕಿಸಲು ಅವಕಾಶವಿಲ್ಲ:
ಸೋಂಕಿನ ಹರಡುವಿಕೆಯ ದೃಷ್ಟಿಯಿಂದ ಧಾರ್ಮಿಕ ಸ್ಥಳಗಳಲ್ಲಿ ಹಾಡುವ ಗುಂಪುಗಳನ್ನು ಅನುಮತಿಸಬಾರದು ಎಂದು ಎಸ್‌ಒಪಿ ಹೇಳುತ್ತದೆ, ಬದಲಿಗೆ ರೆಕಾರ್ಡ್ ಮಾಡಿದ ಸ್ತೋತ್ರಗಳನ್ನು ನುಡಿಸಬಹುದು. ಈ ಸಮಯದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ತಪ್ಪಿಸಬೇಕು. ಪ್ರಸಾದ ವಿತರಣೆ ಮತ್ತು ಪವಿತ್ರ ನೀರನ್ನು ಚಿಮುಕಿಸುವುದು ಮುಂತಾದ ವಿಷಯಗಳನ್ನು ಅನುಮತಿಸಬಾರದು. ಅಂದರೆ ಇದೀಗ ದೇವಾಲಯಗಳಲ್ಲಿ ಪ್ರಸಾದ ಲಭ್ಯವಿರುವುದಿಲ್ಲ.

ಮೂರ್ತಿ ಸ್ಪರ್ಶಕ್ಕೆ ತಡೆ:
ಧಾರ್ಮಿಕ ಸ್ಥಳಗಳಲ್ಲಿ ವಿಗ್ರಹಗಳು ಮತ್ತು ಪವಿತ್ರ ಪುಸ್ತಕಗಳನ್ನು ಸ್ಪರ್ಶಿಸುವುದನ್ನು ಸಹ ತಪ್ಪಿಸಬೇಕು ಮತ್ತು ಅಲ್ಲಿ ಪ್ರವೇಶಿಸಲು ಸಾಲಿನಲ್ಲಿ ಕನಿಷ್ಠ ಆರು ಅಡಿಗಳಷ್ಟು ದೂರವಿರಬೇಕು. ಯಾವುದೇ ಕಾರಣಕ್ಕೂ ಭಕ್ತಾದಿಗಳು ವಿಗ್ರಹಗಳನ್ನು ಸ್ಪರ್ಶಿಸಲು ಅನುಮತಿಸಬಾರದು ಎಂದು ಎಸ್‌ಒಪಿ ಸೂಚಿಸಿದೆ.

Trending News