ನವದೆಹಲಿ: ಮುಖೇಶ್ ಅಂಬಾನಿಯ ಮಾಲೀಕತ್ವದ ಆನ್ಲೈನ್ ಕಿರಾಣಿ ಉದ್ಯಮ ಜಿಯೋಮಾರ್ಟ್ ಇದೀಗ ದೇಶದ 200 ಕ್ಕೂ ಹೆಚ್ಚು ನಗರಗಳಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಿದೆ. ಇದುವರೆಗೆ ಈ ಸೇವೆ ಕೇವಲ ನವಿಮುಂಬೈ, ಥಾಣೆ ಮತ್ತು ಮಹಾರಾಷ್ಟ್ರದ ಕಲ್ಯಾಣ್ನವರೆಗೆ ಮಾತ್ರ ಸೀಮಿತವಾಗಿತ್ತು. ಜಿಯೋಮಾರ್ಟ್ ಇದೀಗ ದೇಶದ 200 ಕ್ಕೂ ಹೆಚ್ಚು ನಗರಗಳಿಗೆ ಸರಕುಗಳನ್ನು ತಲುಪಿಸುತ್ತಿದೆ ಎಂದು ರಿಲಯನ್ಸ್ ರಿಟೇಲ್ನ ದಿನಸಿ ಚಿಲ್ಲರೆ ವಿಭಾಗದ ಸಿಇಒ ದಾಮೋದರ್ ಮಾಲ್ ಟ್ವೀಟ್ ಮಾಡಿದ್ದಾರೆ. ಜಿಯೋಮಾರ್ಟ್ನಲ್ಲಿ ಸೇರಿಸಲಾಗಿರುವ ಪಿನ್ ಕೋಡ್ಗಳು ಚಂಡಿಗಡ್, ಡೆಹ್ರಾಡೂನ್, ಧನ್ಬಾದ್, ಗ್ವಾಲಿಯರ್, ಕೋಟಾ, ಲುಧಿಯಾನ, ಸೂರತ್ ಗಳಂತಹ ಶ್ರೇಣಿ 1 ಮತ್ತು ಶ್ರೇಣಿ 2 ನಗರಗಳಲ್ಲಿ ಜಿಯೋಮಾರ್ಟ್ ಕಾರ್ಯನಿರ್ವಹಿಸುತ್ತಿದೆ ಎಬುದನ್ನು ಸೂಚಿಸುತ್ತಿವೆ.
ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತಾ ಮತ್ತು ಇತರ ಮೆಟ್ರೋ ನಗರಗಳ ಗ್ರಾಹಕರು ಜಿಯೋಮಾರ್ಟ್ನಲ್ಲಿ ಇದೀಗ ಆರ್ಡರ್ ಮಾಡಬಹುದು . ಜಿಯೋಮಾರ್ಟ್ ಬಿಗ್ಬಾಸ್ಕೆಟ್, ಗ್ರೋಫೆರ್ಸ್, ಅಮೆಜಾನ್ ಪ್ಯಾಂಟ್ರಿ, ಫ್ಲಿಪ್ಕಾರ್ಟ್ ಸೂಪರ್ಮಾರ್ಟ್ ಇತ್ಯಾದಿಗಳ ಜೊತೆ ಸ್ಪರ್ಧೆ ನಡೆಸಲಿದೆ. ಇತರ ಆನ್ಲೈನ್ ಮಾರುಕಟ್ಟೆಗಳಂತೆ, ಜಿಯೋಮಾರ್ಟ್ನ ವೆಬ್ಸೈಟ್ನಲ್ಲಿಯೂ ಕೂಡ ಸರಕನ್ನು ತರಿಸಿಕೊಳ್ಳಲು ನೀವು ನಿಮ್ಮ ಹೆಸರನ್ನು ನೊಂದಾಯಿಸಿ ಆರ್ಡರ್ ಮಾಡಬಹುದು.
ಶೇ.50ರಷ್ಟು ರಿಯಾಯಿತಿ
ಕಿರಾಣಿ ಜೊತೆಗೆ, ವೈಯಕ್ತಿಕ ಆರೈಕೆ, ಮನೆಯ ಆರೈಕೆ ಮತ್ತು ಮಗುವಿನ ಆರೈಕೆ ಉತ್ಪನ್ನಗಳನ್ನು ಸಹ ಜಿಯೋಮಾರ್ಟ್ನಲ್ಲಿ ಬೇಡಿಕೆ ಸಲ್ಲಿಸಬಹುದಾಗಿದೆ. ಆಯ್ದ ಉತ್ಪನ್ನಗಳಿಗೆ ಕನಿಷ್ಠ ಶೇ.5 ರಷ್ಟು ಮತ್ತು ಗರಿಷ್ಠ ಶೇ. 50ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಕಂಪನಿ ಘೋಷಿಸಿದೆ. ಜಿಯೋಮಾರ್ಟ್ ಪ್ರಕಾರ, ನಿಮ್ಮ ಸರಕುಗಳ ವಿತರಣೆಯು ಎರಡು ದಿನಗಳಲ್ಲಿ ನಡೆಯಲಿದೆ ಎನ್ನಲಾಗಿದೆ. ಆದರೆ, ಆರ್ಡರ್ ಹೆಚ್ಚಾಗಿದ್ದ ಸಂದರ್ಭದಲ್ಲಿ ಇದು ಸ್ವಲ್ಪ ವಿಳಂಬವಾಗಬಹುದು ಎಂದೂ ಕೂಡ ಹೇಳಲಾಗಿದೆ. ಜಿಯೋಮಾರ್ಟ್ನಲ್ಲಿ ಆರ್ಡರ್ ಮಾಡುವಾಗ ಬಳಕೆದಾರರು ಜಿಯೋಮನಿ ವ್ಯಾಲೆಟ್ನೊಂದಿಗೆ ಪಾವತಿಸಬಹುದು. ಇದಲ್ಲದೆ, ಇತರೆ ಮೊಬೈಲ್ ವ್ಯಾಲೆಟ್ಗಳು, ಕಾರ್ಡ್ಗಳು, ನೆಟ್ ಬ್ಯಾಂಕಿಂಗ್ನಿಂದ ಪಾವತಿ ಮತ್ತು ಕ್ಯಾಶ್ ಆನ್ ಡಿಲೆವರಿ ಸೌಲಭ್ಯವೂ ಕೂಡ ಕಲ್ಪಿಸಲಾಗಿದೆ.
ವಾಟ್ಸ್ ಆಪ್ ಮೂಲಕವೂ ಕೂಡ ನೀವು ಆರ್ಡರ್ ಮಾಡಬಹುದು
ವಾಟ್ಸಾಪ್ ಮೂಲಕ ಜಿಯೋಮಾರ್ಟ್ ಸೇವೆಯನ್ನು ಪಡೆಯಲು ಬಯಸುವ ಗ್ರಾಹಕರು ತಮ್ಮ ಫೋನ್ ಸಂಪರ್ಕಗಳಲ್ಲಿ ಜಿಯೋಮಾರ್ಟ್ನ ವಾಟ್ಸಾಪ್ ಸಂಖ್ಯೆ 8850008000 ಅನ್ನು ಸೇವ್ ಮಾಡಿ 'ಹಾಯ್' ಸಂದೇಶ ರವಾನಿಸಬೇಕು. ಇದರ ನಂತರ, ಜಿಯೋಮಾರ್ಟ್ ನಲ್ಲಿ ಸರಕು ಆರ್ಡರ್ ಮಾಡಲು ಬಳಕೆದಾರರಿಗೆ ಲಿಂಕ್ ಕಳುಹಿಸಲಾಗುತ್ತದೆ. ಈ ಲಿಂಕ್ ಕೇವಲ 30 ನಿಮಿಷಗಳವರೆಗೆ ಮಾನ್ಯವಾಗಿರುತ್ತದೆ. ಈ ಲಿಂಕ್ ಬಳಕೆದಾರರನ್ನು ಜಿಯೋಮಾರ್ಟ್ ಪುಟಕ್ಕೆ ಕರೆದೊಯ್ಯುತ್ತದೆ. ಅಲ್ಲಿ ಆರ್ಡರ್ ನೀಡಲು, ಬಳಕೆದಾರರು ಮೊಬೈಲ್ ಸಂಖ್ಯೆ, ಏರಿಯಾ, ಲೋಕ್ಯಾಲಿಟಿ ತಿಳಿಸಿ ತಮ್ಮ ಸಂಪೂರ್ಣ ವಿಳಾಸ ಮತ್ತು ಹೆಸರನ್ನು ನಮೂದಿಸಬೇಕಾಗುತ್ತದೆ. ಇದರ ನಂತರ, ಉತ್ಪನ್ನ ಪಟ್ಟಿ ಬರುತ್ತದೆ. ಆದೇಶವನ್ನು ನೀಡಿದ ನಂತರ, ಕಂಪನಿಯು ಅದನ್ನು ಸ್ಥಳೀಯ ಕಿರಾಣಿ ಅಂಗಡಿ / ದಿನಸಿ ಅಂಗಡಿಯೊಂದಿಗೆ ವಾಟ್ಸಾಪ್ನಲ್ಲಿ ಹಂಚಿಕೊಳ್ಳುತ್ತದೆ.