ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ಸಂಭವಿಸಿದೆ. ಉತ್ತರ ಸಿಕ್ಕಿಂನಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಘರ್ಷಣೆ ನಾ ಕುಲಾ ಪ್ರಾಂತ್ಯದಲ್ಲಿ ನಡೆದಿದೆ ಎನ್ನಲಾಗಿದ್ದು, ವರದಿಗಳ ಪ್ರಕಾರ, ಎರಡೂ ಕಡೆಗಳಲ್ಲಿ ಸುಮಾರು ಅರ್ಧ ಡಜನ್ ಗೂ ಅಧಿಕ ಸೈನಿಕರು ಗಾಯಗೊಂಡಿದ್ದಾರೆ. ಈ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ. ಆದರೂ. ಕೂಡ ಸದ್ಯ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ ಎನ್ನಲಾಗಿದೆ
ಕಳೆದ ವರ್ಷವೂ ಕೂಡ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆ ನಡೆದ ಸುದ್ದಿಗಳು ಬಹಿರಂಗವಾಗಿದ್ದವು. ಲಡಾಖ್ನ ಪೆಂಗಾಂಗ್ ಸರೋವರದ ಬಳಿ ಗಸ್ತು ತಿರುಗುವ ಕುರಿತು ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಈ ಕಾರಣದಿಂದಾಗಿ ಉಭಯ ದೇಶಗಳ ನಡುವೆ 'ಫೇಸ್ಆಫ್' ಸನ್ನಿವೇಶ ಸೃಷ್ಟಿಯಾಯಿತು. ನಂತರ ಎರಡೂ ದೇಶಗಳ ಬ್ರಿಗೇಡಿಯರ್ ಮಟ್ಟದ ಸಂವಾದದ ಬಳಿಕ ವಿಷಯವನ್ನು ಬಗೆಹರಿಸಲಾಗಿತ್ತು.
2017 ರಲ್ಲಿ ಇದೇ ಸ್ಥಳದಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ತೀವ್ರ ಮಾರಾಮಾರಿ ನಡೆದಿತ್ತು. ಗಸ್ತು ತಿರುಗುತ್ತಿದ್ದಾಗ, ಭಾರತೀಯ ಸೈನಿಕರು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಸೈನಿಕರನ್ನು ಎದುರಿಸಿದ್ದರು.ಈ ವೇಳೆಯೂ ಕೂಡ ಉಭಯ ದೇಶಗಳ ಸೈನಿಕರ ನಡುವೆ ಮಾತಿನ ಚಕಮಕಿ ಮತ್ತು ಘರ್ಷಣೆ ಸಂಭವಿಸಿತ್ತು.