ನವದೆಹಲಿ: ಇಡೀ ಜಗತ್ತನ್ನೇ ಕಾಡುತ್ತಿರುವ ಸಾಂಕ್ರಾಮಿಕ ಪಿಡುಗು ಕೊರೋನಾವೈರಸ್ ನಿಂದಾಗಿ ಕಚ್ಚಾ ತೈಲ ದರದಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಆದಾಗ್ಯೂ ಭಾರತದ ಜನರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಪರಿಹಾರ ಸಿಕ್ಕಿಲ್ಲ. ಬದಲಾಗಿ ಸರ್ಕಾರ ಪೆಟ್ರೋಲ್ ಡೀಸೆಲ್ ದರವನ್ನು ಹೆಚ್ಚಿಸಿದೆ. ಭಾರತದಲ್ಲಿ ಪೆಟ್ರೋಲ್ ಅಬಕಾರಿ ಸುಂಕವನ್ನು 10 ರೂ. ಮತ್ತು ಡೀಸೆಲ್ ಅಬಕಾರಿ ಸುಂಕವನ್ನು 13 ರೂ. ಹೆಚ್ಚಿಸಲಾಗಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 71.26 ರೂ. ಮತ್ತು ಡೀಸೆಲ್ ಬೆಲೆ 69.39 ರೂ. ಆಗಿದೆ. ಆದರೆ ವಿಶ್ವದ ಹಲವು ದೇಶಗಳಲ್ಲಿ ಅತಿ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ಮಾರಾಟವಾಗುತ್ತಿದೆ ಎಂದು ನಿಮಗೆ ತಿಳಿದಿದೆಯೇ. ಈ ಲೇಖನದಲ್ಲಿ ನಾವು ಆ ದೇಶಗಳು ಯಾವ್ಯಾವು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಈ 10 ದೇಶಗಳಲ್ಲಿ ಅಗ್ಗದ ಪೆಟ್ರೋಲ್ ಲಭ್ಯ:
ಮ್ಯಾನ್ಮಾರ್ ಮತ್ತು ಕುವೈತ್: ಅಗ್ಗದ ಪೆಟ್ರೋಲ್ ಪಡೆಯುವ ದೇಶಗಳ ಪಟ್ಟಿಯಲ್ಲಿ ಮ್ಯಾನ್ಮಾರ್ ಹತ್ತನೇ ಸ್ಥಾನದಲ್ಲಿದೆ. ಇಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 27.40 ರೂ. ಇದು ಭಾರತಕ್ಕಿಂತ ಸುಮಾರು 43.86 ರೂಪಾಯಿ ಅಗ್ಗವಾಗಿದೆ. ಇದಲ್ಲದೆ ಕುವೈತ್ ಈ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಕುವೈತ್ನಲ್ಲಿ ಒಂದು ಲೀಟರ್ ಪೆಟ್ರೋಲ್ಗಾಗಿ ನೀವು 25.66 ರೂಪಾಯಿಗಳನ್ನು ಮಾತ್ರ ಖರ್ಚು ಮಾಡಬೇಕು. ಭಾರತಕ್ಕೆ ಹೋಲಿಸಿದರೆ ಇದು ಪ್ರತಿ ಲೀಟರ್ಗೆ 45.60 ರೂ. ಕಡಿಮೆ ಇದೆ
ಅಲ್ಜೀರಿಯಾ:
ಆಗ್ಗದ ತೈಲ ಲಭ್ಯವಿರುವ ದೇಶಗಳಲ್ಲಿ ಅಲ್ಜೀರಿಯಾ ಎಂಟನೇ ಸ್ಥಾನದಲ್ಲಿದೆ. ಅಲ್ಜೀರಿಯಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 24.63 ರೂ. ಅದು ಭಾರತಕ್ಕಿಂತ ಸುಮಾರು 46.63 ರೂಪಾಯಿ ಅಗ್ಗವಾಗಿದೆ.
ನೈಜೀರಿಯಾ:
ನೈಜೀರಿಯಾ ತೈಲ ಉತ್ಪಾದಿಸುವ ದೇಶಗಳಲ್ಲಿ ಒಂದಾಗಿದ್ದು ಕಡಿಮೆ ತೈಲ ದೊರೆಯುವ ದೇಶಗಳ ಪಟ್ಟಿಯಲ್ಲಿ ಇದು ಏಳನೇ ಸ್ಥಾನದಲ್ಲಿದೆ. ಇಲ್ಲಿಯೂ ತೈಲದ ಬೆಲೆ ತುಂಬಾ ಅಗ್ಗವಾಗಿದೆ. ಭಾರತಕ್ಕೆ ಹೋಲಿಸಿದರೆ ಇಲ್ಲಿ ಪೆಟ್ರೋಲ್ ತುಂಬಾ ಅಗ್ಗವಾಗಿದೆ. ನೈಜೀರಿಯಾದಲ್ಲಿ ಒಂದು ಲೀಟರ್ ಪೆಟ್ರೋಲ್ ಕೇವಲ 23.88 ರೂ., ಇದು ಭಾರತದಲ್ಲಿ ದೊರೆಯುವ ಪೆಟ್ರೋಲ್ ದರಕ್ಕಿಂತ ಪ್ರತಿ ಲೀಟರ್ಗೆ 47.38 ರೂ. ಕಡಿಮೆಯಿದೆ.
ಮಲೇಷ್ಯಾ ಮತ್ತು ಕತಾರ್:
ಮಲೇಷ್ಯಾದಲ್ಲಿ ಕೂಡ ಪೆಟ್ರೋಲ್ ಬೆಲೆ ಅಗ್ಗವಾಗಿದೆ. ಇಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 21.91 ರೂ. ಅದೇ ಸಮಯದಲ್ಲಿ ಭಾರತಕ್ಕೆ ಹೋಲಿಸಿದರೆ ಪ್ರತಿ ಲೀಟರ್ ಪೆಟ್ರೋಲ್ ಖರೀದಿಸಲು ನಾವು 49.35 ರೂಪಾಯಿಗಳನ್ನು ಹೆಚ್ಚಾಗಿ ಖರ್ಚು ಮಾಡಬೇಕಾಗುತ್ತದೆ. ಇದಲ್ಲದೆ ಕತಾರ್ನ ಜನರು ಒಂದು ಲೀಟರ್ ಪೆಟ್ರೋಲ್ ಖರೀದಿಸಲು ಕೇವಲ 21.79 ರೂ. ಭಾರತಕ್ಕಿಂತ ಪೆಟ್ರೋಲ್ ಇಲ್ಲಿ ಪ್ರತಿ ಲೀಟರ್ಗೆ 49.47 ರೂ. ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ.
ಅಂಗೋಲಾ ಮತ್ತು ಸುಡಾನ್:
ಅಂಗೋಲಾ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿ ನೀವು ಒಂದು ಲೀಟರ್ ಪೆಟ್ರೋಲ್ ಖರೀದಿಸಲು 21.79 ರೂಪಾಯಿ ಖರ್ಚು ಮಾಡಬೇಕು. ಇದಲ್ಲದೆ ಸುಡಾನ್ ಈ ಟಾಪ್ 10ರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸುಡಾನ್ನಲ್ಲಿ ಒಂದು ಲೀಟರ್ ತೈಲದ ಬೆಲೆ 10.51 ರೂಪಾಯಿ. ಇದು ಭಾರತಕ್ಕಿಂತ ಲೀಟರ್ಗೆ 60.75 ರೂ. ಅಗ್ಗವಾಗಿದೆ.
ಇರಾನ್:
ಇದಲ್ಲದೆ ಇರಾನ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇರಾನ್ನಲ್ಲಿ ಪೆಟ್ರೋಲ್ಗೆ ಪ್ರತಿ ಲೀಟರ್ಗೆ ಕೇವಲ 7.08 ರೂ. ಈ ದರ ಭಾರತಕ್ಕಿಂತ 64.18 ರೂಪಾಯಿ ಅಗ್ಗವಾಗಿದೆ.
ವೆನೆಜುವೆಲಾ:
ವೆನೆಜುವೆಲಾ ತೈಲ ಉತ್ಪಾದಿಸುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ವಿಶ್ವಾದ್ಯಂತ ಅಗ್ಗದ ತೈಲವನ್ನು ಮಾರಾಟ ಮಾಡುವ ದೇಶಗಳಲ್ಲಿ ದಕ್ಷಿಣ ಅಮೆರಿಕಾದ ವೆನೆಜುವೆಲಾ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಕೇವಲ 0.05 ಪೈಸೆ ಮಾತ್ರ, ಇದು ಭಾರತಕ್ಕಿಂತ 71.21 ರೂಪಾಯಿ ಅಗ್ಗವಾಗಿದೆ. ವಿಶ್ವದ ಅಗ್ಗದ ಪೆಟ್ರೋಲ್ ಇಲ್ಲಿ ಲಭ್ಯವಿದೆ.