ಬೆಳ್ತಂಗಡಿ : "ಯೋಗಿ ಆದಿತ್ಯನಾಥ್ ಅವರು ಮೊದಲು ಉತ್ತರ ಪ್ರದೇಶದ ಜಂಗಲ್ ರಾಜ್ ಸರಿಮಾಡಲಿ, ಆಸ್ಪತ್ರೆಯಲ್ಲಿ ಸಾಯುತ್ತಿರುವ ಮಕ್ಕಳನ್ನು ಉಳಿಸಲಿ. ಆ ಮೇಲೆ ನಮಗೆ ಬುದ್ಧಿ ಹೇಳಲಿ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಇಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 76 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, "ಬಿಜೆಪಿ ಬಂದರೆ ಮಾತ್ರ ರಾಜ್ಯದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ. ಕಾಂಗ್ರೆಸ್ ಕಾರ್ನಾಟಕದ ಅಭಿವೃದ್ಧಿಯನ್ನು ಕಡೆಗಣಿಸಿದೆ" ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಮುಂದುವರೆದು ಪ್ರಧಾನಿ ಮೋದಿ ಅವರ ನಡೆ, ನುಡಿ, ಆಶಯಗಳನ್ನು ಎಲ್ಲರೂ ಪಾಲಿಸಬೇಕು ಎಂಬ ಯೋಗಿ ಹೇಳಿಕೆಗೆ "ಮನ್ ಕಿ ಬಾತ್' ನಿಂದ ಹಸಿದ ಹೊಟ್ಟೆಗೆ ಅನ್ನ ಸಿಗುತ್ತಾ? ವಸತಿಹೀನರಿಗೆ ಮನೆ ಸಿಗುತ್ತಾ? ಬರಿಮೈಯವನಿಗೆ ಬಟ್ಟೆ ಸಿಗುತ್ತಾ? ಮಕ್ಕಳಿಗೆ ಶಿಕ್ಷಣ ಸಿಗುತ್ತಾ? ಎಂದು ಪ್ರಶ್ನಿಸಿದರಲ್ಲದೆ, ನಾವು ಜನತೆಗೆ ಅನ್ನ, ವಸತಿ, ಶಿಕ್ಷಣ ಕೊಡ್ತೇವೆ. ನಮ್ಮದು "ಮನ್ ಕಿ ಬಾತ್' ಅಲ್ಲ, 'ಕಾಮ್ ಕಿ ಬಾತ್'" ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಬಿಜೆಪಿಯನ್ನು ಟೀಕಿಸಿದರು.
ಇನ್ನೂ, ಮಂಗಳೂರು ಕೋಮುಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ, ಧಾರ್ಮಿಕನಾಗುವುದೆಂದರೆ ನಮ್ಮ ಧರ್ಮ ಪಾಲನೆ ಮಾಡುವುದು, ಕೋಮುವಾದಿಯಾಗುವುದೆಂದರೆ ಅನ್ಯ ಧರ್ಮವನ್ನು ದ್ವೇಷಿಸುವುದು. ನಾವು ಧಾರ್ಮಿಕರಾಗಬೇಕು, ಕೋಮುವಾದಿಗಳಾಗಬಾರದು ಎಂದು ಹೇಳಿದರು.
ಅಲ್ಲದೆ, ಸಾವಿನ ಮೇಲೆ ರಾಜಕೀಯ ಮಾಡುವವರನ್ನು ಸಮಾಜದಲ್ಲಿರುವ ಎಲ್ಲ ಪ್ರಜ್ಞಾವಂತ ನಾಗರಿಕರು ಒಕ್ಕೊರಲಿನಿಂದ ಖಂಡಿಸಬೇಕು. ಸೋಲಿನ ಭಯದಿಂದ ಬಿಜೆಪಿಯವರು ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ನಾಡಿನ ಜನ ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಜನತೆಯಲ್ಲಿ ಮನವಿ ಮಾಡಿದರು.