ನವದೆಹಲಿ: ರಾಜ್ಯದಲ್ಲಿ ವಾಯುಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಪ್ರತಿ ತಿಂಗಳು ಎರಡನೇ ಭಾನುವಾರ 'ಟ್ರಾಫಿಕ್ ಮುಕ್ತ ದಿನ'ವನ್ನು ಆಚರಿಸಲಾಗುವುದು ಎಂದು ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ತಿಳಿಸಿದರು.
ವಾಯುಮಾಲಿನ್ಯದಲ್ಲಿ ಕರ್ನಾಟಕ ಆರನೇ ಸ್ಥಾನದಲ್ಲಿದ್ದು, ಮಾಲಿನ್ಯ ತಡೆಗಟ್ಟಲು ಹೊಸ ಯೋಜನೆ ತರಲು ಸರ್ಕಾರ ಮುಂದಾಗಿದೆ. ಅದಕ್ಕಾಗಿ ಕಾನೂನು ಕ್ರಮ ಕೈಗೊಳ್ಳುವ ಬದಲಾಗಿ ಜನಾಂದೋಲನ ನಡೆಸಲು ಚಿಂತನೆ ನಡೆಸಲಾಗುತ್ತಿದೆ, ಈ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅದರ ಅಂಗವಾಗಿ "ಲೆಸ್ ಟ್ರಾಫಿಕ್ ಡೇ" ಅನ್ನು ಜಾರಿಗೆ ತರಲಾಗಿದೆ ಎಂದು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರೇವಣ್ಣ ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು ಒಂದು ಬಸ್ನಿಂದ ಪ್ರತಿ ಟ್ರಿಪ್ಗೆ ಎರಡು ಕೆ.ಜಿ ಧೂಳು ಸಂಗ್ರಹವಾಗುತ್ತಿದೆ. ಅಲ್ಲದೆ ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ, ಕಟ್ಟಡ ಕಾಮಗಾರಿ, ಕಾರ್ಖಾನೆಗಳು ಹೊರಬಿಡುವ ಧೂಳು ಸೇರಿದಂತೆ ಹಲವು ರೀತಿಯಲ್ಲಿ ವಾತಾವರಣ ಕಲುಷಿತವಾಗುತ್ತಿದೆ. ಅಲ್ಲದೆ ಸಿಲಿಕಾನ್ ಸಿಟಿಯಲ್ಲಿರುವ 17 ಲಕ್ಷ ಜನರ ಪೈಕಿ 15 ಲಕ್ಷ ಜನರು ಖಾಸಗಿ ವಾಹನಗಳಿಗೆ ಅವಲಂಬಿತರಾಗಿದ್ದಾರೆ. ಇದನ್ನು ತಡೆಯಲು "ವಿರಳ ಸಂಚಾರ ದಿನ" ಆಚರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.
ಟ್ರಾಫಿಕ್ ಮುಕ್ತ ದಿನದಂದು ಜನತೆಯ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ...
ಫೆಬ್ರವರಿ ಎರಡನೇ ಭಾನುವಾರದಿಂದ ಜಾರಿಗೆ ತರಲು ನಿರ್ಧರಿಸಿರುವ 'ಟ್ರಾಫಿಕ್ ಮುಕ್ತ ದಿನ'ದಿಂದಾಗಿ ಜನರಿಗೆ ಯಾವುದೇ ತೊಂದರೆ ಇಲ್ಲ. ಅಲ್ಲದೆ ಟ್ರಾಫಿಕ್ ಮುಕ್ತ ದಿನದಂದು ಬಿಎಂಟಿಸಿ ಪಾಸ್ ನಲ್ಲಿ ರಿಯಾಯತಿ ನೀಡಲಾಗುವುದು. ಹೆಚ್ಚುವರಿ ಮೆಟ್ರೋ ರೈಲುಗಳು ಸೇವೆ ಸಲ್ಲಿಸಲಿವೆ. ಹೀಗಾಗಿ ಜನತೆಯ ಸಂಚಾರಕ್ಕೆ ಯಾವುದೇ ತೊಡಕು ಉಂಟಾಗುವುದಿಲ್ಲ ಎಂದು ಸಚಿವರು ಸ್ಪಷ್ಟ ಪಡಿಸಿದರು.
ಅಷ್ಟೇ ಅಲ್ಲದೆ, ಬಸ್ಗಳಲ್ಲಿ ಮಹಿಳೆಯಾರಿಗೆ ಸೀಟು ಕಾಯ್ದಿರಿಸಲು ಪಿಂಕ್ ಸೀಟು ಮಾಡಲಾಗಿದೆ.ಮಹಿಳಾ ಗಾರ್ಮಿಂಟ್ ನೌಕರಿಗಾಗಿ ಹಾಗೂ ಮಹಿಳಾ ಕಟ್ಟಡ ಕಾರ್ಮಿಕರಿಗಾಗಿ ಇಂದಿರಾ ಪಾಸ್ ಗಳನ್ನು ಒದಗಿಸಲಾಗಿತ್ತದೆ ಎಂದು ರೇವಣ್ಣ ವಿವರಿಸಿದರು.