ಬೆಂಗಳೂರು : ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಈ ವರ್ಷದಿಂದ ದ್ವಿತೀಯ ಭಾಷೆ ಇಂಗ್ಲೀಷ್ ಪರೀಕ್ಷೆಗೆ ನಿಗದಿತ ಸಮಯಕ್ಕಿಂತ 30 ನಿಮಿಷ ಹೆಚ್ಚುವರಿ ಸಮಯಾವಕಾಶ ನೀಡಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್(S Suresh Kumar) ಸಂವೇದನಾ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ಎಸ್ಎಸ್ಎಲ್ಸಿ(SSLC) ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಂಗ್ಲಿಂಷ್ ಪರೀಕ್ಷೆಗೆ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಹೆಚ್ಚುವರಿ ಸಮಯ ನೀಡಲು ಶಿಕ್ಷಣ ಇಲಾಖೆ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
10ನೇ ತರಗತಿ ಇಂಗ್ಲೀಷ್ ಪರೀಕ್ಷೆ ಬರೆಯಲು ಕಾಲಾವಕಾಶ ಕಡಿಮೆ ಇದ್ದು ಹೆಚ್ಚುವರಿ ಸಮಯ ನೀಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹುಬ್ಬಳ್ಳಿಯ ಸುರೇಶ್ ಎಂಬ ವಿದ್ಯಾರ್ಥಿ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಇಂಗ್ಲೀಷ್ ಪರೀಕ್ಷೆಗೆ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಹೆಚ್ಚುವರಿ ಸಮಯ ನೀಡಲು ಶಿಕ್ಷಣ ಇಲಾಖೆ ಈಗಾಗಲೇ ಕ್ರಮ ಕೈಗೊಂಡಿರುವುದಾಗಿ ಮಾಹಿತಿ ನೀಡಿದರು.
ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಗೆ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದ್ದು, 2020ರ ಮಾರ್ಚ್ 27 ರಿಂದ ಎಪ್ರಿಲ್ 9ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.