ಹರಿಯಾಣ: 'ಬಿಜೆಪಿ ನನ್ನ ತಾಯಿ' ಎಂದಿರುವ ಹರಿಯಾಣದ ಸ್ವತಂತ್ರ ಶಾಸಕ ರಣಧೀರ್ ಗೋಲನ್ ಬಿಜೆಪಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪುಂಡ್ರಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದ ರಣಧೀರ್ ಗೋಲನ್, ನಾನು ಕಳೆದ 30 ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿದ್ದು, ಬಿಜೆಪಿ ಬಿಟ್ಟು ಯಾವುದೇ ಬೇರೆ ಪಕ್ಷಕ್ಕೆ ಹೋಗಿಲ್ಲ. ಅದು ನನ್ನ ತಾಯಿ ಪಕ್ಷ ಎಂದಿದ್ದಾರೆ.
ಇದಕ್ಕೂ ಮುನ್ನ ಶುಕ್ರವಾರ ಬಿಜೆಪಿಯ ಹರಿಯಾಣ ಉಸ್ತುವಾರಿ ಅನಿಲ್ ಜೈನ್ 8 ಸ್ವತಂತ್ರ ಶಾಸಕರ ಬೆಂಬಲ ಬಿಜೆಪಿಗೆ ಇದೆ ಎಂದು ಹೇಳಿದ್ದಾರೆ. ದೀಪಾವಳಿಯ ನಂತರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಜೈನ್ ಹೇಳಿದರು.
ಅದೇ ಸಮಯದಲ್ಲಿ ಸಿರ್ಸಾದಿಂದ ಸ್ವತಂತ್ರ ಶಾಸಕರಾಗಿ ಗೆದ್ದ ಗೋಪಾಲ ಕಂದಾ ಕೂಡ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ತಾನು ಬಿಜೆಪಿಯನ್ನು ಬೇಷರತ್ತಾಗಿ ಬೆಂಬಲಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಪೃಥ್ಲಾ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಶಾಸಕ ನಯನ್ಪಾಲ್ ರಾವತ್ ಕೂಡ ಬಿಜೆಪಿಗೆ ಬೆಂಬಲ ಘೋಷಿಸಿದರು. ನಾನು ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದು, ನಾನು ಬಿಜೆಪಿಗೆ ನನ್ನ ಬೆಂಬಲವನ್ನು ನೀಡುತ್ತೇನೆ ಎಂದವರು ಘೋಷಿಸಿದ್ದಾರೆ.
ವಿಶೇಷವೆಂದರೆ, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 40 ಸ್ಥಾನಗಳು ದೊರೆತಿವೆ ಮತ್ತು ಸರ್ಕಾರ ರಚಿಸಲು ಇನ್ನೂ 6 ಶಾಸಕರ ಬೆಂಬಲದ ಅಗತ್ಯವಿದೆ.