ನವದೆಹಲಿ: ಹರಿಯಾಣದಲ್ಲಿ (ಹರಿಯಾಣ ವಿಧಾನಸಭಾ ಚುನಾವಣೆ 2019) ಹಂಗ್ ವಿಧಾನಸಭೆಯ ಪರಿಸ್ಥಿತಿಯ ನಂತರ, ದುಶ್ಯಂತ್ ಚೌತಲಾ ಅವರ ಹೊಸದಾಗಿ ರಚನೆಯಾದ ಜನನಾಯಕ್ ಜನತಾ ಪಕ್ಷ (ಜೆಜೆಪಿ) ಕಿಂಗ್‌ಮೇಕರ್ ಆಗಿ ಹೊರಹೊಮ್ಮಿದೆ. ಆದರೆ, ಬಿಜೆಪಿ 40 ಸ್ಥಾನಗಳನ್ನು ಪಡೆಯುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ಗೆ 31 ಸ್ಥಾನಗಳು ಮತ್ತು ಜೆಜೆಪಿಗೆ 10 ಸ್ಥಾನಗಳು ಸಿಕ್ಕಿವೆ. ಇತರರಿಗೆ 9 ಸ್ಥಾನಗಳು ದೊರೆತಿವೆ. ಚುನಾವಣಾ ಫಲಿತಾಂಶಗಳು ಹೊರಬರುತ್ತಿದ್ದಂತೆ ಬಿಜೆಪಿಯನ್ನು ತಡೆಯಲು ಎಲ್ಲಾ ವಿರೋಧ ಪಕ್ಷಗಳು ಕಾಂಗ್ರೆಸ್ ಜೊತೆ ಸರ್ಕಾರ ರಚಿಸಬೇಕು ಎಂದು ಕಾಂಗ್ರೆಸ್ ಪರವಾಗಿ ಭೂಪಿಂದರ್ ಸಿಂಗ್ ಹೂಡಾ ಮೊದಲು ಮನವಿ ಮಾಡಿದರು.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಜೆಜೆಪಿ ಮುಖಂಡ ದುಶ್ಯಂತ್ ಚೌತಲಾ ಅವರು ನಿನ್ನೆ ತಡರಾತ್ರಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿಯಾದರು. ಇದರ ಬೆನ್ನಲ್ಲೇ ಬಿಜೆಪಿ ಸರ್ಕಾರದಲ್ಲಿ ಚೌತಲಾ ಅವರಿಗೆ ಪ್ರಮುಖ ಸ್ಥಾನ ಸಿಗಬಹುದೆಂಬ ಊಹಾಪೋಹಗಳಿವೆ. ಸಿರ್ಸಾದ ಸ್ವತಂತ್ರ ಶಾಸಕ ಗೋಪಾಲ್ ಕಂಡ ಸೇರಿದಂತೆ 5 ಸ್ವತಂತ್ರ ಶಾಸಕರು ಸಹ ಬಿಜೆಪಿಯನ್ನು ಬೆಂಬಲಿಸಬಹುದು ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ನಮ್ಮ 10 ಶಾಸಕರು ಶುಕ್ರವಾರ ದೆಹಲಿಯಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ದುಶ್ಯಂತ್ ಚೌತಲಾ ಹೇಳಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿಯ ಹೆಚ್ಚು ಮಂತ್ರಿಗಳು ಸೋಲುಂಡರು:
ಹರಿಯಾಣದಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಗುರುವಾರ 40 ಸ್ಥಾನಗಳನ್ನು ಗೆದ್ದಿದೆ. ಆದರೆ 90 ಸದಸ್ಯರ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ ಮುಟ್ಟಲು ಪಕ್ಷ ವಿಫಲವಾಗಿದೆ. ಪಕ್ಷವು 'ಅಬ್ಕಿ ಬಾರ್ 75 ಪಾರ್' ಅನ್ನು ಗುರಿಯಾಗಿಸಿತ್ತು.
'ಓಲ್ಡ್ ಈಸ್ ಗೋಲ್ಡ್' ಎಂದು ಸಾಬೀತುಪಡಿಸಿದ ಹೂಡಾ:
72 ವರ್ಷದ ಭೂಪೇಂದ್ರ ಸಿಂಗ್ ಹೂಡಾ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ 'ಓಲ್ಡ್ ಈಸ್ ಗೋಲ್ಡ್' ಎಂದು ಸಾಬೀತುಪಡಿಸಿದರು. ಆದಾಗ್ಯೂ ಸರ್ಕಾರ ರಚನೆಗೆ ಅಗತ್ಯವಿರುವ ಮ್ಯಾಜಿಕ್ ನಂಬರ್ ತಲುಪಲು ಸಾಧ್ಯವಾಗಿಲ್ಲ.
ಬಿಜೆಪಿ ಸಂಸದೀಯ ಮಂಡಳಿ ಸಭೆ:
ಏತನ್ಮಧ್ಯೆ, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವುದಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಗೆ ಬಿಜೆಪಿ ಸಂಸದೀಯ ಮಂಡಳಿ ಅಧಿಕಾರ ನೀಡಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚಿಸಲು ಅಮಿತ್ ಶಾ ಅವರು ಪಕ್ಷದ ಪರವಾಗಿ ಅಬ್ಸರ್ವರ್ ನೇಮಕ ಮಾಡಲಿದ್ದಾರೆ. ಮೂಲಗಳ ಪ್ರಕಾರ, ಹರಿಯಾಣದಲ್ಲಿ ಮನೋಹರ್ ಲಾಲ್ ಖಟ್ಟರ್ ಮತ್ತು ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ಅವರ ನೇತೃತ್ವದಲ್ಲಿ ಮತ್ತೆ ಸರ್ಕಾರ ರಚಿಸಲು ನಿರ್ಧರಿಸಲಾಗಿದೆ.