ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಯೋತ್ಪಾದಕರಿಗೆ ಆದರ್ಶ ಎಂದು ಬಿಜೆಪಿ ನಾಯಕ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ. ಇನ್ನು ಮುಂದುವರೆದು ಕ್ರೀಡಾ ಸಮೂಹ ಅವರನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ.
ಕಳೆದ ವಾರ ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರದ ಕುರಿತು ಮಾಡಿದ ಭಾಷಣಕ್ಕಾಗಿ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ ಗೌತಮ್ ಗಂಭೀರ್ ', ಉತ್ತಮ ನಡವಳಿಕೆ, ತಂಡದ ಮನೋಭಾವ, ನೀತಿಶಾಸ್ತ್ರ, ಪಾತ್ರದ ಶಕ್ತಿ ವಿಚಾರದಲ್ಲಿ ಕ್ರೀಡಾಪಟುಗಳು ಆದರ್ಶಪ್ರಾಯರಾಗಿರುತ್ತಾರೆ.ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಮಾಜಿ ಕ್ರೀಡಾಪಟು ಭಯೋತ್ಪಾದಕರಿಗೆ ಆದರ್ಶಪ್ರಾಯರಾಗಿ ಮಾತನಾಡುವುದನ್ನು ನಾವು ನೋಡಿದ್ದೇವೆ, ಇಮ್ರಾನ್ ಖಾನ್ ಅವರನ್ನು ಕ್ರೀಡಾ ಸಮುದಾಯ ಬಹಿಷ್ಕರಿಸಬೇಕು ಎಂದು ಗಂಭೀರ್ ಆಗ್ರಹಿಸಿದ್ದಾರೆ.
ಇಮ್ರಾನ್ ಖಾನ್ ಮೂಲತಃ ಕ್ರಿಕೆಟಿಗರಾಗಿದ್ದು, ಪ್ರಧಾನಿಯಾಗುವ ಮೊದಲು ಅವರು ಪಾಕಿಸ್ತಾನ ಮತ್ತು ಯುಕೆ ಪರವಾಗಿ ಆಡಿದ್ದರು. ಕಳೆದ ವಾರ ವಿಶ್ವಸಂಸ್ಥೆ 74 ನೇ ಅಧಿವೇಶನದಲ್ಲಿ ಭಾರತ ಕಾಶ್ಮೀರಕ್ಕಿದ್ದ 370ನೇ ವಿಧಿಯನ್ನು ರದ್ದುಪಡಿಸಿದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಭಾಷಣ ಮಾಡಿದ್ದರು. ಜನರ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಕಾಶ್ಮೀರದಲ್ಲಿ ರಕ್ತದೋಕುಳಿಯಾಗಲಿದೆ ಎಂದು ಖಾನ್ ಎಚ್ಚರಿಸಿದ್ದರು.
ಎರಡು ಪರಮಾಣು-ಸಶಸ್ತ್ರ ರಾಷ್ಟ್ರಗಳ ನಡುವಿನ ಯಾವುದೇ ಘರ್ಷಣೆ ತಮ್ಮ ಗಡಿಯನ್ನು ಮೀರಿ ಪ್ರತಿಧ್ವನಿಸುತ್ತದೆ ಎಂದು ಹೇಳುವ ಮೂಲಕ ಇಮ್ರಾನ್ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದರು. ಇದಕ್ಕೆ ಭಾರತ ವಿಶ್ವಸಂಸ್ಥೆಯಲ್ಲಿ ತಕ್ಕ ಉತ್ತರ ನೀಡಿತ್ತು.