ಬೆಂಗಳೂರು: ಜುಲೈ 6ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದು, ರಾಜೀನಾಮೆ ವಾಪಸ್ ಪಡೆದು ವಿಶ್ವಾಸ ಮತದ ಪರವಾಗಿ ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ.
ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಒತ್ತಡಕ್ಕೆ ಮಣಿಸಿ ಕಾಂಗ್ರೆಸ್ನಲ್ಲಿಯೇ ಮುಂದುವರೆಯಲು ನಿರ್ಧರಿಸಿರುವುದಾಗಿ ತಿಳಿಸಿರುವ ಕಾಂಗ್ರೆಸ್ನ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ, ರಾಜೀನಾಮೆ ಹಿಂಪಡೆಯುವ ತಮ್ಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ಮತ್ತು ಕಾರ್ಯಕರ್ತರಿಗೆ ಮನವಿ ರೂಪದಲ್ಲಿ ತಿಳಿಸಿದ್ದಾರೆ.
ನಾನೆಂದೂ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟವನಲ್ಲ:
ರಾಜ್ಯದಲ್ಲಿ ನಡೆಯುತ್ತಿರುವ ಬಹುತೇಕ ರಾಜಕೀಯ ವಿದ್ಯಮಾನಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ಕಾರ್ಯಕರ್ತರಿಗೆ ಅರಿವಿದೆ. ಕಾಂಗ್ರೆಸ್ನಲ್ಲಿನ ಕೆಲವು ವಿದ್ಯಾಮಾನಗಳಿಂದ ಬೇಸರಗೊಂಡು ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುತ್ತೇನೆ. ನಾನೆಂದು ಸಚಿವ ಸ್ಥಾನಕ್ಕಾಗಿ ಆಸೆಪಟ್ಟವನಲ್ಲ. ಕಳೆದ 45 ವರ್ಷದ ಸುಧೀರ್ಘ ರಾಜಕೀಯ ಜೀವನದಲ್ಲಿ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿ, 7 ಬಾರಿ ಶಾಸಕನಾಗಿ ಪಕ್ಷದ ಶ್ರೇಯೋಭಿವೃದ್ಧಿಗಾಗಿ, ನನ್ನ ಮತಕ್ಷೇತ್ರದ ಅಭಿವೃದ್ಧಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ಕಾಂಗ್ರೆಸ್ನ ಹಲವಾರು ವಿದ್ಯಮಾನಗಳಿಂದ ಬೇಸರಗೊಂಡು ಶಾಸಕ ಸ್ಥಾನಕ್ಕೆ ಮಾತ್ರ ನನ್ನ ರಾಜೀನಾಮೆ ಹೊರತು ಪಕ್ಷಕ್ಕಲ್ಲ ಎಂದು ಹಿಂದೆಯೂ ಸ್ಪಷ್ಟಪಡಿಸಿದ್ದೇನೆ ಎಂದು ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.