ಎಸ್‌ಸಿಓ ಶೃಂಗಸಭೆಗೆ ಪಾಕ್ ವಾಯುಮಾರ್ಗ ಬಳಸದಿರಲು ಪ್ರಧಾನಿ ಮೋದಿ ನಿರ್ಧಾರ!

ಪ್ರಧಾನಿ ಮೋದಿ ಅವರು ಪಾಕ್ ಮಾರ್ಗಕ್ಕೆ ಬದಲಾಗಿ ಒಮಾನ್, ಇರಾನ್ ಮತ್ತು ಇತರ ಮಧ್ಯ ಏಷ್ಯಾ ರಾಷ್ಟ್ರಗಳ ಮೂಲಕ ಬಿಶ್ಕೆಕ್ ತಲುಪಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Last Updated : Jun 12, 2019, 06:00 PM IST
ಎಸ್‌ಸಿಓ ಶೃಂಗಸಭೆಗೆ ಪಾಕ್ ವಾಯುಮಾರ್ಗ ಬಳಸದಿರಲು ಪ್ರಧಾನಿ ಮೋದಿ ನಿರ್ಧಾರ! title=

ನವದೆಹಲಿ: ಜೂನ್ 13 ಮತ್ತು 14ರಂದು ಕಿರ್ಗಿಸ್ತಾನದ ರಾಜಧಾನಿ ಬಿಶ್ಕೆಕ್ ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಪಾಕ್ ವಾಯುಮಾರ್ಗಕ್ಕೆ ಬದಲಾಗಿ ಒಮನ್ ಮೂಲಕ ತೆರಳಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಪ್ರಧಾನಿ ಮೋದಿ ಅವರು ಪಾಕ್ ಮಾರ್ಗಕ್ಕೆ ಬದಲಾಗಿ ಒಮಾನ್, ಇರಾನ್ ಮತ್ತು ಇತರ ಮಧ್ಯ ಏಷ್ಯಾ ರಾಷ್ಟ್ರಗಳ ಮೂಲಕ ಬಿಶ್ಕೆಕ್ ತಲುಪಲಿದ್ದಾರೆ ಎಂದು ತಿಳಿಸಿದ್ದಾರೆ.

"ವಿವಿಐಪಿ ವಿಮಾನ ಬಿಶ್ಕೆಕ್ ಗೆ ಹೋಗಲು ಭಾರತ ಸರ್ಕಾರವು ಎರಡು ವಾಯು ಮಾರ್ಗಗಳನ್ನು ಕಂಡುಕೊಂಡಿತ್ತು. ಅದರಂತೆ ಇದೀಗ ಪಾಕ್ ಮಾರ್ಗಕ್ಕೆ ಬದಲಾಗಿ ಪ್ರಧಾನಿ ಮೋದಿ ಅವರ ವಿಮಾನವು ಒಮಾನ್, ಇರಾನ್ ಮತ್ತು ಮಧ್ಯ ಏಷ್ಯಾದ ದೇಶಗಳ ಮೂಲಕ ಬಿಶ್ಕೆಕ್ ಗೆ ಹೋಗಲು ನಿರ್ಧರಿಸಲಾಗಿದೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಫೆಬ್ರವರಿ 26ರಂದು ಭಾರತೀಯ ವಾಯುಪಡೆಯು ಬಾಲಾಕೋಟ್ ನ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳ ಮೇಲೆ ನಡೆಸಿದ ವಾಯು ದಾಳಿ ಬಳಿಕ ಪಾಕಿಸ್ತಾನವು ತನ್ನ ವಾಯು ಪ್ರದೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ.

ಹೀಗಾಗಿ ಕಿರ್ಗಿಸ್ತಾನದ ಬಿಷ್‌ಕೆಕ್‌ ಗೆ ತರಳಲು ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನ ಹಾರಾಟಕ್ಕೆ ಅನುಮತಿ ನೀಡಬೇಕೆಂದು ಭಾರತ ಸರ್ಕಾರ ಪಾಕಿಸ್ತಾನಕ್ಕೆ ವಿನಂತಿಸಿತ್ತು. ಈ ಬೆನ್ನಲ್ಲೇ ಭಾರತ ಸರ್ಕಾರದ ಕೋರಿಕೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಮ್ಮತಿ ಸಹ ನೀಡಿದ್ದರು. ಆದರೀಗ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ಪಾಕ್ ಮಾರ್ಗಕ್ಕೆ ಬದಲಾಗಿ ಒಮಾನ್, ಇರಾನ್ ಮೂಲಕ ತೆರಳಲು ನಿರ್ಧರಿಸಿದೆ. 

Trending News