ನವದೆಹಲಿ: ನೂತನವಾಗಿ ರಚನೆಯಾದ ಕೇಂದ್ರ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ಬುಧವಾರ ನಡೆಯಲಿದೆ. ಈ ಸಭೆಯಲ್ಲಿ ಕೇಂದ್ರ ಸರ್ಕಾರದ ಯಶಸ್ವಿ ಆಡಳಿತ ನಿರ್ವಹಣೆಗೆ ಪ್ರಧಾನಿ ಮೋದಿ ನಕ್ಷೆ ರೂಪಿಸಲಿದ್ದಾರೆ ಎನ್ನಲಾಗಿದೆ.
ರಾಜ್ಯ ಸಚಿವರ ಜವಾಬ್ದಾರಿಗಳನ್ನು ನಿಭಾಯಿಸುವ ಬಗ್ಗೆ ಹಾಗೂ ಕ್ಯಾಬಿನೆಟ್ ಸಚಿವರಿಗೆ ಕಾರ್ಯ ಮತ್ತು ಜವಾಬ್ದಾರಿಗಳನ್ನು ವಹಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಲ್ಲದೆ, ಸರ್ಕಾರದ ಮುಂದಿನ ಐದು ವರ್ಷಗಳ ಕ್ರಿಯಾ ಯೋಜನೆಯ ಬಗ್ಗೆ ಪ್ರಧಾನಿ ಮೋದಿ ಸಂಕ್ಷಿಪ್ತವಾಗಿ ವಿವರಿಸುವ ಸಾಧ್ಯತೆಯಿದೆ.
ಮೋದಿ ಸರಕಾರದ ಹಿಂದಿನ ಅಧಿಕಾರಾವಧಿಯಲ್ಲಿ ಸಚಿವ ಸಂಪುಟ ಸಭೆ ಸಾಮಾನ್ಯವಾಗಿತ್ತು. ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ಮತ್ತು ಅದನ್ನು ಜನರಿಗೆ ಹೇಗೆ ತಲುಪಿಸುವುದು ಎಂಬುದರ ಬಗ್ಗೆ ಪ್ರಧಾನಿ ಮೋದಿ ತಿಳಿಸುತ್ತಿದ್ದರು. ಅಷ್ಟೇ ಅಲ್ಲದೆ, ಸಚಿವರ ಕಾರ್ಯವೈಖರಿ ಹಾಗೂ ಜವಾಬ್ದಾರಿ ನಿಭಾಯಿಸುವಿಕೆ ಬಗ್ಗೆ ಪ್ರಧಾನಿ ಮೋದಿ ಪರಿಶೀಲಿಸುತ್ತಿದ್ದರು.