ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಪ್ರಚಂಡ ಬಹುಮತ ಗಳಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಶುಕ್ರವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ.
16ನೇ ಲೋಕಸಭೆಯ ಅವಧಿ ಜೂನ್ 3ಕ್ಕೆ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಲೋಕಸಭೆ ವಿಸರ್ಜನೆ ಸಂಬಂಧ ಇಂದು ಪ್ರಧಾನ ಮಂತ್ರಿ ಅವರ ಸೌತ್ ಬ್ಲಾಕ್ ಕಚೇರಿಯಲ್ಲಿ ಸಭೆ ನಡೆಸಿ ಬಳಿಕ ರಾಷ್ಟ್ರಪತಿಗೆ ಸಚಿವರು ಶಿಫಾರಸು ಸಲ್ಲಿಸಲಿದ್ದಾರೆ.
ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಶಿಫಾರಸುಗಳನ್ನು ಅಂಗೀಕರಿಸಿ ಹಾಲಿ ಲೋಕಸಭೆಯನ್ನು ವಿಸರ್ಜಿಸಿ, ಹೊಸ ಸರ್ಕಾರ ರಚನೆಗೆ ಆಹ್ವಾನ ನೀಡಲಿದ್ದಾರೆ. ಜೂನ್ 3ಕ್ಕೂ ಮೊದಲು 17ನೇ ಲೋಕಸಭೆ ರಚನೆಯಾಗಬೇಕಿದ್ದು, ಇದಕ್ಕಾಗಿ ಚುನಾವಣಾ ಆಯೋಗದ ಮೂವರು ಆಯುಕ್ತರು ಲೋಕಸಭೆಗೆ ಹೊಸದಾಗಿ ಆಯ್ಕೆಯಾಗಿರುವವರ ಪಟ್ಟಿಯನ್ನು ರಾಷ್ಟ್ರಪತಿಗೆ ಸಲ್ಲಿಸಿದ ಬಳಿಕ 17ನೇ ಲೋಕಸಭೆ ರಚನಾ ಪ್ರಕ್ರಿಯೆ ಆರಂಭವಾಗಲಿದೆ.