ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ದೇಶದ ಮುಂದಿನ ಪ್ರಧಾನಿ ಆಗಬೇಕೆನ್ನುವುದು ಜನತೆ ಬಯಸುತ್ತಾರೆ ಎಂದು ಸಂಸದ ಹಾಗೂ ಮಾಜಿ ಸಚಿವ ದಿನೇಶ್ ತ್ರಿವೇದಿ ಹೇಳಿದ್ದಾರೆ.
"ನೀವು ನನ್ನೊಂದಿಗೆ ಜನರನ್ನು ನೋಡಿರಬಹುದು. ನಾವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಹಾಗಾಗಿ ಜನರಿಗೆ ಬಂದುಕುಗಳೊಂದಿಗೆ ಇರಬೇಕೋ ಅಥವಾ ಅಭಿವೃದ್ಧಿಯನ್ನು ಬೆಂಬಲಿಸಬೇಕೋ ಎಂಬುದು ತಿಳಿದಿದೆ. ಪ್ರಧಾನಿ ಇಲ್ಲಿಗೆ ಬಂದಷ್ಟೂ ನಮಗೆ(ಮಮತಾ ಬ್ಯಾನರ್ಜಿಗೆ) ಹೆಚ್ಚಿನ ಮತ ದೊರೆಯುತ್ತದೆ" ಎಂದು ದಿನೇಶ್ ತ್ರಿವೇದಿ ಝೀ ಮೀಡಿಯಾಗೆ ತಿಳಿಸಿದ್ದಾರೆ.
ಮುಂದುವರೆದು ಮಾತನಾಡುತ್ತಾ, ಜನತೆಗೆ ಕೇವಲ ಭರವಸೆಗಳನ್ನು ನಿಡುವ ರಾಜಕಾರಣಿಗಳನ್ನು ನೋಡಿ ಬೇಸರವಾಗಿದೆ. ಹಾಗಾಗಿ ರಾಜ್ಯದಲ್ಲಿ ಅಭಿವೃದ್ಧಿಯನ್ನು ತಂದಿರುವ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಜನತೆ ಬೆಂಬಲಿಸಲಿದ್ದಾರೆ. ರಾಜ್ಯದ ಎಲ್ಲಾ 42 ಲೋಕಸಭಾ ಸ್ಥಾನಗಳಲ್ಲೂ ತೃಣಮೂಲ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದಿದ್ದಾರೆ.
"ಪಶ್ಚಿಮ ಬಂಗಾಳದ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಆ ಬದಲಾವಣೆಯನ್ನು ದೀದಿ(ಮಮತಾ) ನೀಡಿದ್ದಾರೆ. ಈಗ ಭಾರತ ಬದಲಾವಣೆ ಬಯಸುತ್ತಿದೆ. ಅದನ್ನೂ ಸಹ ದೀದಿ(ಮಮತಾ) ತರಲಿದ್ದಾರೆ" ಎಂದು ದಿನೇಶ್ ತ್ರಿವೇದಿ ತಿಳಿಸಿದ್ದಾರೆ.