ಇಸ್ಲಾಮಾಬಾದ್: ಬಸ್ ನಲ್ಲಿದ್ದ 14 ಪ್ರಯಾಣಿಕರನ್ನು ಕೆಳಗಿಸಿ ಗುಂಡಿಟ್ಟು ಹತ್ಯೆಗೈದ ಘಟನೆ ಪಾಕಿಸ್ತಾನದ ವಾಯುವ್ಯ ಪ್ರದೇಶದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಗುರುವಾರ ನಡೆದಿದೆ.
ಅರೆಸೇನಾಪಡೆಯ ಸಮವಸ್ತ್ರ ಧರಿಸಿದ್ದ 15 ರಿಂದ 20 ಬಂದೂಕುಧಾರಿಗಳು ಕರಾಚಿ ಮತ್ತು ಗ್ವಾದರ್ ಮಾರ್ಗದಲ್ಲಿ ಚಲಿಸುತ್ತಿದ್ದ ಐದರಿಂದ ಆರು ಬಸ್ಸುಗಳನ್ನು ಮಕ್ರಾನ್ ಹೈವೇನಲ್ಲಿ ತಡೆದು ನಿಲ್ಲಿಸಿ ಪ್ರಯಾಣಿಕರ ಬಳಿಯಿದ್ದ ಐಡೆಂಟಿಟಿ ಕಾರ್ಡುಗಳನ್ನು ಪರಿಶೀಲಿಸಿ ಬಳಿಕ ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಬಲೂಚಿಸ್ತಾನ್ ಇನ್ ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಮೊಶಿನ್ ಹಾಸನ್ ಬಟ್ ತಿಳಿಸಿದ್ದಾರೆ.
"ಒಟ್ಟು 16 ಮಂದಿಯನ್ನು ಕೊಲ್ಲಲು ಉದ್ದೇಶಿಸಲಾಗಿತ್ತಾದರೂ 14 ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇಬ್ಬರು ಹೇಗೋ ತಪ್ಪಿಸಿಕೊಂಡಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಲೂಚಿಸ್ತಾನ ಗೃಹ ಸಚಿವ ಜಿಯಾ ಲಾಂಗೊವ್, ದಾಳಿಕೋರರು ವೇಷಮರೆಸಿಕೊಂಡು ಪ್ರತಿನಿತ್ಯ ಈ ಮಾರ್ಗದಲ್ಲಿ ಚಲಿಸುವ ಬಸ್ಸುಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣದ ತನಿಖೆಗೆ ಆದೇಶಿಸಲಾಗಿದ್ದು ದಾಳಿಕೋರರನ್ನು ಕೂಡಲೇ ಬಂಧಿಸುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.