ಬೆಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಪ್ರತಿ ವಾಹನದ ಮೇಲೂ ಹದ್ದಿನ ಕಣ್ಣಿಟ್ಟಿದೆ. ಸಾಮಾನ್ಯ ವ್ಯಕ್ತಿಯ ವಾಹನದಿಂದ ಹಿಡಿದು ಎಂತಹ ದೊಡ್ಡ ವ್ಯಕ್ತಿಯಾದರೂ ಪ್ರತಿ ವಾಹನವನ್ನು ತಪಾಸಣೆಗೆ ಒಳಪಡಿಸುತ್ತಿದೆ. ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರನ್ನು ಬಿಡದ ಚುನಾವಣಾ ಆಯೋಗ ಚನ್ನರಾಯಪಟ್ಟಣದ ಹಿರೀಸಾವೆ ಚೆಕ್ ಪೋಸ್ಟ್ ಬಳಿ ಅವರ ಎಸ್ಯುವಿ ಕಾರನ್ನು ತಡೆಹಿಡಿದು ತಪಾಸಣೆ ನಡೆಸಿದರು.
ಶಿವಮೊಗ್ಗದಲ್ಲಿಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ಅವರಿಗೆ ಸಾಥ್ ನೀಡಲು ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಕುಮಾರಸ್ವಾಮಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚುನಾವಣಾ ಆಯೋಗದ ಕಣ್ಗಾವಲು ತಂಡ ಹೆದ್ದಾರಿಯಲ್ಲಿ ಮುಖ್ಯಮಂತ್ರಿಯವರ ಎಸ್ಯುವಿಯನ್ನು ತಡೆಹಿಡಿದು ತಪಾಸಣೆಗೆ ಒಳಪಡಿಸಿತು.
ಪರಿಶೀಲನೆ ಪೂರ್ಣಗೊಳ್ಳುವವರೆಗೂ ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಸಾಮಾಧಾನವಾಗಿ ಕುಳಿತಿದ್ದ ಕುಮಾರಸ್ವಾಮಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ.