ಘಾಟಿ ಸುಬ್ರಮಣ್ಯ ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ.ಇಲ್ಲಿ ಸುಬ್ರಹ್ಮಣ್ಯ ದೇವರನ್ನು ನಾಗ ರೂಪದಲ್ಲಿ ಆರಾಧಿಸಲಾಗುತ್ತದೆ.ಈ ಕ್ಷೇತ್ರವು ದೊಡ್ಡಬಳ್ಳಾಪುರದಿಂದ 15 ಕಿ.ಮೀ ದೂರದಲ್ಲಿದೆ.
ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಸಂಬಂಧಿಸಿದ ದಂತಕಥೆ :
ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ದೇವರು ಗೋಚರವಾಗಿ ಸುಮಾರು 600 ವರ್ಷಗಳು ಕಳೆದಿವೆ. ಈ ಕ್ಷೇತ್ರದ ಪೂರ್ವೇತಿಹಾಸದ ರೀತಿ ವಿಳ್ಳೇದೆಲೆ ವ್ಯಾಪಾರಿಯೊಬ್ಬ ವ್ಯಾಪಾರಾರ್ಥ ಹೋಗಿ ಬರುವಾಗ ಇಲ್ಲಿ ತಂಗುತ್ತಿದ್ದನಂತೆ. ಆ ವ್ಯಾಪಾರಿಯು ಪಕ್ಕದಲ್ಲೇ ಇರುವ ಕುಮಾರತೀರ್ಥದ ಬಳಿ ಊಟ ಮಾಡಿ, ನೀರು ಕುಡಿದು (ಆಗ ಕುಮಾರ ತೀರ್ಥ ಕೇವಲ ಒಂದು ಸಣ್ಣ ದೋಣಿಯೋಪಾದಿಯಲ್ಲಿತ್ತಂತೆ) ಬಂದು, ಈಗ ಮೂಲಸ್ವಾಮಿ ಇರುವ ಬಲಭಾಗದಲ್ಲಿ ಏಳು ಹೆಡೆಗಳು ಉದ್ಭವಿಸಿರುವ ಶಿಲೆಯ ಮೇಲೆಯೇ ಮಲಗುತ್ತಿದ್ದನಂತೆ.ಒಮ್ಮೆ ಆತ ಮಲಗಿದ್ದಾಗ 'ನೆರಳಾಗಿರುವ ಮರದಡಿಯ ಈ ಶಿಲೆಯ ಮೇಲೆ ಭಾರವಾಗಿ ಏಕೆ ಮಲಗಿರುವೆ ಏಳು ಏಳು' ಎಂಬ ಮಾತುಗಳು ಕೇಳಿತಂತೆ. ಇದು ಹಲವು ಬಾರಿ ಪುನರಾವರ್ತನೆಯಾಯಿತು. ಆಗ ಆತ ಇದು ಯಾವುದೋ ದುಷ್ಟಶಕ್ತಿಯ ಕೀಟಲೆ ಇರಬೇಕು ಎಂದುಕೊಂಡು ಸುಮ್ಮನಾದನಂತೆ.ಒಂದು ಹಬ್ಬದ ದಿನ ಎಲೆ ಮಾರಿ ಆಯಾಸಗೊಂಡು ಆತ ಅದೇ ಶಿಲೆಯ ಮೇಲೆ ಮಲಗಿದ್ದಾಗ, ಸ್ವಾಮಿಯು ಕನಸಿನಲ್ಲಿ ವ್ಯಾಪಾರಿಗೆ ತನ್ನ ನಿಜ ಸ್ವರೂಪದಲ್ಲಿ ದರ್ಶನ ನೀಡಿ, ತಾನು ಈ ಶಿಲೆಗೆ 20 ಗಜಾಂತರದಲ್ಲಿ ಇರುವುದಾಗಿಯೂ ಈ ವಿಷಯವನ್ನು ತನ್ನ ಭಕ್ತರಾದ ಬಳ್ಳಾರಿ ಜಿಲ್ಲೆಯ ಸಂಡೂರಿನ ಮಹಾರಾಜರಿಗೆ ಈ ವಿಷಯ ತಿಳಿಸು, ಅವರು ಇಲ್ಲಿ ಗುಡಿಗೋಪುರ ಕಟ್ಟಿಸುತ್ತಾರೆ' ಎಂಬುದಾಗಿ ತಿಳಿಸಿತು.ನಿನಗೆ ನಾನು ಜೀವನಾಂತ್ಯದಲ್ಲಿ ಮುಕ್ತ ನೀಡುವೆನು ಎಂದು ಆಣತಿ ನೀಡಿ, ಅದೃಶ್ಯನಾದನಂತೆ.ಈ ಸ್ವಪ್ನ ದಿಂದ ಎಚ್ಚೆತ್ತ ವ್ಯಾಪಾರಿ ಎದುರು ಒಬ್ಬ ಬ್ರಾಹ್ಮಣನನ್ನು ಕಂಡು, ಎಲ್ಲ ವೃತ್ತಾಂತವನ್ನೂ ಆ ಬ್ರಾಹ್ಮಣನಿಗೆ ತಿಳಿಸಿದನಂತೆ. ಬ್ರಾಹ್ಮಣ ಆ ಶಿಲೆಯ ಬಳಿ ಬಂದಾಗ, ಸ್ವಾಮಿಯು ಕ್ಷಣ ಮಾತ್ರ ಸರ್ಪ ರೂಪದಲ್ಲಿ ಬ್ರಾಹ್ಮಣನಿಗೂ ದರ್ಶನ ನೀಡಿ ಅಂತರ್ಧಾನನಾದನು.ಆಗ ಬ್ರಾಹ್ಮಣ ಮತ್ತು ವ್ಯಾಪಾರಿ ಇಬ್ಬರೂ ಕೂಡಿ ಸಂಡೂರಿಗೆ ಹೋಗಿ ರಾಜರ ದರ್ಶನ ಮಾಡಿ ತಮ್ಮ ಸ್ವಪ್ನದ ವೃತ್ತಾಂತ ತಿಳಿಸಿದರಂತೆ. ಆದರೆ, ರಾಜನು ತನಗೆ ಹಲವು ರಾಜಕಾರ್ಯಗಳಿದ್ದು, ತತ್ಕ್ಷಣವೇ ಅಲ್ಲಿಗೆ ಬರಲಾಗುವುದಿಲ್ಲವೆಂದೂ, ಅಗತ್ಯವಿದ್ದರೆ ಧನಕನಕ ಸಹಾಯ ಮಾಡುವುದಾಗಿಯೂ, ನೀವೇ ದೇಗುಲ ಕಟ್ಟಿ ಎಂದು ಹೇಳಿದನಂತೆ.ಇದರಿಂದ ನೊಂದ ವರ್ತಕ ಮತ್ತು ಬ್ರಾಹ್ಮಣನು, ಮಹಾಸ್ವಾಮಿ ಆ ಭಗವಂತನ ಆಣತಿಯನ್ನು ನಿಮಗೆ ತಿಳಿಸಿದ್ದೇವೆ. ನಮಗೆ ಹೊರಡಲು ಅಪ್ಪಣೆ ಕೊಡಿ ಎಂದು ಹೇಳಿ ಹೊರಟರಂತೆ. ಅಷ್ಟು ದೂರ ಪ್ರಯಾಣ ಮಾಡಿದ್ದ ಆ ಇಬ್ಬರೂ ಅದೇ ಊರಿನ ಬ್ರಾಹ್ಮಣನ ಮನೆಯಲ್ಲಿ ರಾತ್ರಿ ಉಳಿದುಕೊಳ್ಳಲೂ ನಿರ್ಧರಿಸಿದರಂತೆ. ಅದೇ ದಿನ ರಾತ್ರಿ, ರಾಜನ ಸ್ವಪ್ನದಲ್ಲಿ ಉಗ್ರವಾಗಿ ಕಾಣಿಸಿಕೊಂಡ ಸ್ವಾಮಿ, ತನ್ನ ಆಜ್ಞೆಯನ್ನು ತಿರಸ್ಕರಿಸಿದ ರಾಜನ ಮೇಲೆ ವ್ಯಗ್ರನಾದನಂತೆ.ನೀನು ನನ್ನ ಆಣತಿ ತಿರಸ್ಕರಿಸಿರುವ ಫಲವಾಗಿ, ನಿನ್ನ ಖಜಾನೆ ಬರಿದಾಗಿ, ನಿನ್ನ ಪುತ್ರ, ಪೌತ್ರ ಕಳತ್ರಾದಿಗಳಿಗೆ ಕಷ್ಟ ಬರಲಿದೆ ಎಂದು ಎಚ್ಚರಿಸಿದನಂತೆ. ಕೂಡಲೇ ನಿದ್ದೆಯಿಂದೆದ್ದ ರಾಜನು ತನ್ನ ತಪ್ಪಿಗೆ ದೇವರ ಕ್ಷಮೆ ಕೋರಿ, ಆ ವರ್ತಕ ಮತ್ತು ಬ್ರಾಹ್ಮಣನನ್ನು ಹುಡುಕಿ ಕರೆಸಿ ಅವರೊಂದಿಗೇ ಘಾಟಿಯತ್ತ ಪ್ರಯಾಣ ಬೆಳೆಸಿದನಂತೆ.ಆ ಕ್ಷೇತ್ರಕ್ಕೆ ಬಂದು ಮೂಲ ಸ್ವಾಮಿಯ ದರ್ಶನ ಪಡೆದು, ಸ್ವಾಮಿಯ ಆಣತಿಯಂತೆ ಗುಡಿ ಗೋಪುರ ಕಟ್ಟಿಸಿ, ಆ ಬ್ರಾಹ್ಮಣನನ್ನೇ ಪೂಜೆಗೆ ನೇಮಿಸಿದರಂತೆ. ಪೂಜಾದಿಗಳಿಗೆ ಭೂಮಿಯನ್ನು ದಾನವಾಗಿ ನೀಡಿದರಂತೆ. ಇಂದೂ ಅದೇ ಅರ್ಚಕರ ವಂಶಸ್ಥರು ಇಲ್ಲಿ ಪೂಜೆ ಮುಂದುವರಿಸಿ ಕೊಂಡು ಬಂದಿದ್ದಾರೆ.ಈ ಸ್ಥಳದಲ್ಲಿ ಮಹಾರಾಜರಿಗೆ ಹುತ್ತದಲ್ಲಿ ದೊರೆತ ಲಕ್ಷ್ಮೀನರಸಿಂಹ ಸಮೇತ ಸ್ವಾಮಿಯು ನೆಲೆಸಿದ್ದಾನೆ.ಪೂರ್ವಾಭಿಮುಖನಾದ ಏಳು ಹೆಡೆಗಳ ಸುಬ್ರಹ್ಮಣ್ಯ ಸ್ವಾಮಿಯ ಎದುರು, ಪಶ್ಚಿಮಾಭಿಮುಖವಾಗಿರುವ ಲಕ್ಷ್ಮೀನರಸಿಂಹ ಸ್ವಾಮಿ ಮೂರ್ತಿಯಿದೆ. ಈ ಮೂರ್ತಿಯನ್ನು ದೊಡ್ಡ ಕನ್ನಡಿಯ ನೆರವಿನಿಂದ ದರ್ಶಿಸಬಹುದಾಗಿದೆ. ಇಲ್ಲಿ ಪ್ರತಿವರ್ಷ ಪುಷ್ಯ ಶುದ್ಧ ಷಷ್ಠಿಯಂದು ಬ್ರಹ್ಮ ರಥೋತ್ಸವ ಜರುಗುತ್ತದೆ. ಅನ್ನದಾನವೂ ನಡೆಯುತ್ತದೆ. ಪ್ರತಿನಿತ್ಯ ಮೂರು ಕಾಲ ದೀಪಾರಾಧನೆ ಮೊದಲಾದ ಕೈಂಕರ್ಯಗಳು ನಡೆಯುತ್ತವೆ. ಜಾತ್ರೆಯ ಸಮಯದಲ್ಲಿ ಇಲ್ಲಿಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಘಾಟಿಯ ದನಗಳ ಜಾತ್ರೆಯೂ ಬಹು ವಿಖ್ಯಾತವಾದುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ
ಸುಬ್ರಹ್ಮಣ್ಯ ದೇವಾಲಯ:
ಶ್ರೀ ಸುಬ್ರಹ್ಮಣ್ಯ ಸ್ವಾಮಿಯವರಿಗೆ ಸಂಡೂರಿನ ಘೋರ್ಪಡೆ ವಂಶದ ಅರಸರು 1600ರಲ್ಲಿ ಶ್ರೀ ಸ್ವಾಮಿಯವರಿಗೆ ದೇವಾಲಯವನ್ನು ನಿರ್ಮಿಸಿದರು. ಇದು ಪುರಾತನವಾದ ದೇವಾಲಯವಾಗಿದೆ. ಶ್ರೀ ಸ್ವಾಮಿಯವರಿಗೆ ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು 1900ರಲ್ಲಿ ದೇವಾಲಯದ ಮುಂಭಾಗ ಮುಖದ್ವಾರ(ರಾಜದ್ವಾರ) ವನ್ನು ನಿರ್ಮಿಸಿಕೊಟ್ಟಿದ್ದಾರೆ.
ಮಾಕಳಿದುರ್ಗ:
600 ವರ್ಷಗಳ ಇತಿಹಾಸವಿರುವ ಮಾಕಳಿದುರ್ಗವು ಘಾಟಿಸುಬ್ರಹ್ಮಣ್ಯಕ್ಕೆ ಸಮೀಪದಲ್ಲಿದೆ. ಮಾಕಳಿದುರ್ಗದಲ್ಲಿ ಸುಮಾರು ಕೆಂಪೇಗೌಡರಿಂದ ನಿರ್ಮಿತವಾಗಿ ನಂತರ ಸಂಡೂರು ಅರಸರ ಆಡಳಿತಕ್ಕೆ ಒಳಪಟ್ಟಿತ್ತು. ಇಂದಿಗೂ ಮಾಕಳಿದುರ್ಗ ಬೆಟ್ಟದ ಮೇಲೆ ಪುರಾತನ ಕೋಟೆ ಇದೆ ಕೋಟೆಯ ಒಳಗೆ ಮಲ್ಲೇಶ್ವರ ಸ್ವಾಮಿಯ ದೇವಾಲಯ ಇದೆ.
ಕುಮಾರಧಾರ ಪುಷ್ಕರಣಿ:
ಕುಮಾರಧಾರ ಪುಷ್ಕರಣಿಯು ಘೋರ್ಪಡೆ ಅರಸರು ನಿರ್ಮಿಸಿದ್ದಾರೆ. ಶ್ರೀ ಕ್ಷೇತ್ರದ ಮಹಿಮೆಯ ಸ್ಥಳವಾಗಿಯು ಪುಣ್ಯಜಲವಾಗಿಯು ಕುಮಾರ ಧಾರ ಪುಷ್ಕರಣಿಯನ್ನು ಭಕ್ತಾಧಿಗಳು ಕಾಣುತ್ತಾ. ಇದರಲ್ಲಿ ಶ್ರೀ ಸ್ವಾಮಿಯವರು ಸ್ನಾನವನ್ನು ಆಚರಿಸುತ್ತಾರೆ ಎಂದು ನಂಬಿಕೆ ಇದೆ. ಆದ್ದರಿಂದ ಇಲ್ಲಿನ ಜಲದಿಂದ ಸ್ನಾನ ಮಾಡಿದರೆ ಚರ್ಮರೋಗವು ನಿವಾರಣೆಯಾಗುತ್ತದೆ ಎಂದು ಸಾವಿರಾರು ಭಕ್ತಾಧಿಗಳು ಹೇಳುತ್ತಾರೆ.
ಬನ್ನಿಮಂಟಪ:
ಘಾಟಿ ಸುಬ್ರಹ್ಮಣ್ಯದಲ್ಲಿರುವ ಈ ಬನ್ನಿ ಮಂಟಪಕ್ಕೆ ಸುಮಾರು ೪೦೦ ವರ್ಷಗಳ ಇತಿಹಾಸವಿದೆ. ಈ ಮಂಟಪದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯವರಿಗೆ ವಿಜಯದಶಮಿಯಂದು ಉಯ್ಯಾಲೆ ಸೇವೆ ಹಾಗೂ ಭಜಂತ್ರಿ ಸೇವೆಗಳು ನಡೆದುಕೊಂದು ಬಂದಿದೆ. ಇದನ್ನು ಘೋರ್ಪಡೆ ವಂಶಸ್ಥರು ಕಟ್ಟಿಸಿರುತ್ತಾರೆ. ಇದನ್ನು ಸಾಧು ಮಂಟಪ ಎಂದು ಕರೆಯುವುದುಂಟು. ಈ ಮಂಟಪವು ದೇವಾಲಯದ ಮುಂಭಾಗ ಪೂರ್ವಕ್ಕೆ ಇದ್ದು ದೇವಾಲಯದ ಮುಂಭಾಗಕ್ಕೆ ಗೊಚರಿಸುತ್ತದೆ.
ಆರ್ಯವೈಶ್ಯ ಛತ್ರ:
ವರ್ತಕರುಗಳಾದ ಅಯೋಧ್ಯಾನಗರದ ಶಿವಾಚಾರ ವೈಶ್ಯನಗರ್ತ ಜನಾಂಗದವರು ಶ್ರೀ ಕ್ಷೇತ್ರದಲ್ಲಿ ಬರುವ ಭಕ್ತಾದಿಗಳಿಗೆ ಅನುಕೂಲವಾಗಲೆಂದು 1850ರಲ್ಲಿ ಅರವಂಟಿಕೆ ಕೇಂದ್ರವನ್ನು ತೆರೆದರು ನಂತರ 1914ರಲ್ಲಿ ಧರ್ಮಛತ್ರವಾಗಿ ಮಾರ್ಪಡಿಸಿ ಆರ್ಯವೈಶ್ಯ ಧರ್ಮಛತ್ರ ಸ್ಥಾಪಿಸಿದರು.
ಅಂಗಡಿ ಪಾಪಯ್ಯನವರ ಧರ್ಮಛತ್ರ:
ಬೆಂಗಳೂರಿನ ಮಲ್ಲೇಶ್ವರಂನ ವ್ಯಾಪಾರಿಗಳಾದ ಅಂಗಡಿ ಪಾಪಯ್ಯನವರು ಘಾಟಿ ಸುಬ್ರಹ್ಮಣ್ಯಕ್ಕೆ ಬರುವ ಭಕ್ತಾದಿಗಳು ತಂಗಲು ಹಾಗೂ ಅನ್ನದಾನ ಸೇವೆ ಮಾಡಲು 1932ರಲ್ಲಿ ಧರ್ಮಛತ್ರವನ್ನು ಕಟ್ಟಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.