"ಪದಾಧಿಕಾರಿಗಳ ಬದಲಾವಣೆ ಸರಿಯಲ್ಲ;ಒಕ್ಕಲಿಗರ ಸಂಘದಲ್ಲಿ ಗುಂಪುಗಾರಿಕೆ"- ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬೇಸರ

ಕೆಂಪೇಗೌಡ ವೈದ್ಯಕೀಯ ಮಹಾ ವಿದ್ಯಾಲಯಕ್ಕೆ ಕೇಂದ್ರ ವೈದ್ಯಕೀಯ ಮಂಡಳಿಯಿಂದ ಹೆಚ್ಚುವರಿಯಾಗಿ 100 ಯುಜಿ ಹಾಗೂ 68 ಪಿಜಿ ಸೀಟುಗಳ ಮಂಜೂರು ಮಾಡಿಸಿಕೊಡುವಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಕೇಂದ್ರದ ಆರೋಗ್ಯ ಸಚಿವ ಜೆಪಿ ನಡ್ಡಾ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Written by - Prashobh Devanahalli | Last Updated : Nov 22, 2024, 06:38 PM IST
    • ರಾಜ್ಯ ಒಕ್ಕಲಿಗರ ಸಂಘ ಇವತ್ತು ಗುಂಪುಗಾರಿಕೆಯಿಂದ ಸೊರಗುತ್ತಿದೆ
    • ಹೊರಗಡೆ ಸಂಘದ ಬಗ್ಗೆ ಜನ ಲಘುವಾಗಿ ಮಾತನಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ.
    • ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ಬೇಸರ
"ಪದಾಧಿಕಾರಿಗಳ ಬದಲಾವಣೆ ಸರಿಯಲ್ಲ;ಒಕ್ಕಲಿಗರ ಸಂಘದಲ್ಲಿ ಗುಂಪುಗಾರಿಕೆ"- ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬೇಸರ title=
File Photo

ಬೆಂಗಳೂರು: ಸಮಾಜದ ಶ್ರೇಯೋಭಿವೃದ್ಧಿಗಾಗಿ ಉದಾತ್ತ ಚಿಂತನೆಗಳಿಂದ ಜನ್ಮ ತಾಳಿರುವ ರಾಜ್ಯ ಒಕ್ಕಲಿಗರ ಸಂಘ ಇವತ್ತು ಗುಂಪುಗಾರಿಕೆಯಿಂದ ಸೊರಗುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಎಳೆ ನೀರಿನಲ್ಲಿ ಈ ಬೀಜ ಬೆರೆಸಿ ಕುಡಿದರೆ 7 ದಿನದಲ್ಲಿ ಸೊಂಟದ ಹಠಮಾರಿ ಬೊಜ್ಜು ಸುಲಭವಾಗಿ ಕರಗುತ್ತೆ !

ಕೆಂಪೇಗೌಡ ವೈದ್ಯಕೀಯ ಮಹಾ ವಿದ್ಯಾಲಯಕ್ಕೆ ಕೇಂದ್ರ ವೈದ್ಯಕೀಯ ಮಂಡಳಿಯಿಂದ ಹೆಚ್ಚುವರಿಯಾಗಿ 100 ಯುಜಿ ಹಾಗೂ 68 ಪಿಜಿ ಸೀಟುಗಳ ಮಂಜೂರು ಮಾಡಿಸಿಕೊಡುವಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಕೇಂದ್ರದ ಆರೋಗ್ಯ ಸಚಿವ ಜೆಪಿ ನಡ್ಡಾ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಒಕ್ಕಲಿಗರ ಸಂಘ ಪ್ರತಿದಿನ ಗುಂಪುಗಾರಿಕೆ ಮೂಲಕ ಹೊರಗಡೆ ಸಂಘದ ಬಗ್ಗೆ ಜನ ಲಘುವಾಗಿ ಮಾತನಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಮೂರು ತಿಂಗಳು, ಆರು ತಿಂಗಳಿಗೆ ಒಮ್ಮೆ ಪದಾಧಿಕಾರಿಗಳನ್ನು ಬದಲಾವಣೆ ಮಾಡಿಕೊಂಡು ಗುಂಪುಗಾರಿಕೆ ನಡೆಸಿದರೆ ಸಂಘದ ಗತಿ ಏನು? ಒಕ್ಕಲಿಗ ಸಮಾಜದ ಮಕ್ಕಳ ಭವಿಷ್ಯದ ಪ್ರಶ್ನೆ ಏನು? ಎಂದು ಖಾರವಾಗಿ ಪ್ರಶ್ನಿಸಿದರು.

ಹಿಂದೆ ನಮ್ಮ ಒಕ್ಕಲು ಸಮಾಜದ ಪೂರ್ವಿಕರು ಸಂಘ ಕಟ್ಟಲು ಪಟ್ಟ ಶ್ರಮ ಏನು ಎಂಬುದನ್ನು ಈಗಿನ ಆಡಳಿತ ಮಂಡಳಿಯಲ್ಲಿರುವ 35 ಜನ ನಿರ್ದೇಶಕರು ಅರ್ಥ ಮಾಡಿಕೊಳ್ಳಬೇಕು. ಬೆಂದ ಮನೆಯಲ್ಲಿ ಗಳ ಇರಿಯುವಂತಹ ಜನರು ಕೂಡ ಸಂಘದಲ್ಲಿ ಸೇರಿಕೊಂಡಿದ್ದಾರೆ. ಸಂಘಕ್ಕೆ, ಒಕ್ಕಲಿಗ ಸಮಾಜಕ್ಕೆ ಕಿಂಚಿತ್ತು ಒಳ್ಳೆಯದು ಮಾಡಬೇಕು ಎಂಬ ಹಂಬಲ ಹೊಂದಿರುವ ಕೆಲವರು ಕೂಡ ಈ ಸಂಘದಲ್ಲಿ ಇದ್ದಾರೆ. ಆದರೆ, ಸಂಘಕ್ಕೆ ಬಂದರೆ ಸಮಾಜಕ್ಕೆ ಒಳ್ಳೆಯದು ಮಾಡುವ ಬದಲು ಒಂದಷ್ಟು ಸಂಪಾದನೆ ಮಾಡಿಕೊಂಡು ಹೋಗೋಣ ಎಂದು ಸ್ವಾರ್ಥಿಗಳಾಗಿ ಆಲೋಚನೆ ಮಾಡುವ ವ್ಯಕ್ತಿಗಳಿಂದ ಸಮಾಜಕ್ಕೆ ಏನು ಉಪಯೋಗ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.

ಹೃದಯ ವೈಶಾಲ್ಯತೆ ಇರುವ ಸಮಾಜ ನಮ್ಮದು, ಎಲ್ಲರೂ ನಮ್ಮಂತೆಯೇ ಬದುಕಬೇಕು ಎಂದು ಬಯಸುವ ಸಮಾಜ ನಮ್ಮದು. ಆದರೆ, ನಾವೇ ಮಾಡಿಕೊಳ್ಳುತ್ತಿರುವ ತಪ್ಪುಗಳಿಂದ ನಾವು ಎಲ್ಲೋ ಅಲ್ಪಸಂಖ್ಯಾತರಾಗುತ್ತಿದ್ದೇವೇ ಎನ್ನುವ ಆತಂಕ ನನಗೆ ಉಂಟಾಗಿದೆ ಎಂದು ಕೇಂದ್ರ ಸಚಿವರು ಕಳವಳ ವ್ಯಕ್ತಪಡಿಸಿದರು.

ಅಪ್ರಾಮಾಣಿಕತೆ, ಅದಕ್ಷತೆ, ಸ್ವಾರ್ಥದಿಂದ ನಮ್ಮ ಸಮಾಜದ ಪ್ರತಿಷ್ಠೆಗೆ ಧಕ್ಕೆ ಆಗುತ್ತಿದೆ. ನಮ್ಮ ಸಮಾಜದಿಂದಲೇ ಬೆಳೆದು ದೊಡ್ಡವರಾದವರು ನಮ್ಮ ಸಮಾಜಕ್ಕೆ ಕಂಟಕರಾಗಿದ್ದಾರೆ. ಅಂತಹ ಪರಿಸ್ಥಿತಿಗೆ ನಾವೇ ಕಾರಣರಾಗುತ್ತಿದೇವೆ ಎಂದ ಕೇಂದ್ರ ಸಚಿವರು; ಬೆಂಗಳೂರು ನಗರದ ಹೃದಯ ಭಾಗದಲ್ಲಿ ಇಂತಹ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆ ಇದೆ, ರಾಜ್ಯದಲ್ಲಿಯೇ ಅತ್ಯಂತ ಉತ್ತಮ ಆಸ್ಪತ್ರೆ ಆಗಬೇಕಿತ್ತು. ಅಭಿವೃದ್ಧಿ ಆಗಿದೆ, ಆದರೆ ಅದು ಏನೇನಕ್ಕೂ ಸಾಲದು, ಗುಣಮಟ್ಟವೂ ಸಾಲದು. ಇಡೀ ರಾಜ್ಯದಲ್ಲಿಯೇ ನಂಬರ್ ವನ್ ಆಸ್ಪತ್ರೆ ಆಗಬೇಕಿತ್ತು. ಆಗಲಿಲ್ಲ ಯಾಕೆ ಎಂಬುದನ್ನು ನಿರ್ದೇಶಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಕೆ.ಹೆಚ್.ರಾಮಯ್ಯ ಅವರಂಥ ಮಹಾನುಭಾವರು ಸಂಘಕ್ಕೆ ಬುನಾದಿ ಹಾಕಿದರು. ಅನೇಕ ಮಹಾಪುರುಷರು ಸಂಘ ಬೆಳೆಸುತ್ತಾ ಹೋದರು. ಮರೀಗೌಡರು, ಗುತ್ತಲಗೌಡರು ಸಂಘಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಿಸಿಕೊಳ್ಳಲು ಕಂಕುಳಲ್ಲಿ ಫೈಲ್ ಗಳನ್ನು ಹಿಡಿದುಕೊಂಡು ಅಲೆಯುತ್ತಿದ್ದ ದಿನಗಳನ್ನು ನಾನು ನೋಡಿದ್ದೇನೆ. ಅವರಿಬ್ಬರೂ ನಮ್ಮ ತಂದೆಯವರ ಬಳಿಗೆ ಬಂದು ಸಂಘದ ಬಗ್ಗೆ ಚರ್ಚೆ ಮಾಡುತ್ತಿದ್ದನ್ನು ನಾನು ಕಂಡಿದ್ದೇನೆ. ಅಂತಹ ಮಹನೀಯರ ತ್ಯಾಗ, ಬದ್ಧತೆಯ ಬಗ್ಗೆ ಈಗಿನ ಎಲ್ಲಾ ನಿರ್ದೇಶಕರು ಆತ್ಮಾವಲೋಕನ ಮಾಡಿಕೊಳ್ಳಬೇಕು, ನಿಮ್ಮನ್ನು ನೀವು ಪ್ರಶ್ನೆ ಮಾಡಿಕೊಳ್ಳಿ. ಸಂಘದ ಬಗ್ಗೆ ಜನ ಏನು ಮಾತನಾಡಿಕೊಳ್ಳುತ್ತಿದ್ದಾರೆ ಎಂಬುದು ನಿಮಗೆ ಅರ್ಥ ಆಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮೂರು ತಿಂಗಳು, ಆರು ತಿಂಗಳಿಗೊಮ್ಮೆ ಸಂಘದ ಪದಾಧಿಕಾರಿಗಳ ಬದಲಾವಣೆ ಸರಿ ಅಲ್ಲ, ದೇಶ ವಿದೇಶಕ್ಕೆ ಕರೆದುಕೊಂಡು ಹೋಗಿ ಗುಂಪುಗಾರಿಕೆ ಮಾಡಬೇಡಿ. ಇದೆಲ್ಲಾ ಯಾವ ಪುರುಷಾರ್ಥಕ್ಕೆ? ನೀವು ಸಮಾಜಕ್ಕೆ ಏನು ಕೊಡುಗೆ ಕೊಡುತ್ತೀರಿ? ನಿಮ್ಮನ್ನು ನಂಬಿ ಮತ ಹಾಕಿ ಕಳಿಸಿದ ಜನರ ಬಗ್ಗೆ ಆಲೋಚನೆ ಮಾಡಿದ್ದೀರಾ? ಎಂದು ಗುಡುಗಿದ ಕೇಂದ್ರ ಸಚಿವರು; ಕಿಮ್ಸ್ ನಂತಹ ಸಂಸ್ಥೆ ಕಟ್ಟುವುದು ಕಷ್ಟ, ಕೆಡವೋದು ಸುಲಭ. ಇದಕ್ಕೆ ಪೂರಕವಾಗಿ ಮತ್ತೆ ಒಕ್ಕಲಿಗರ ಸಂಘದಲ್ಲಿ ಪದಾಧಿಕಾರಿಗಳ ಬದಲಾವಣೆ ನಾಟಕ ನಡೆಯುತ್ತಿದೆ, ಅದಕ್ಕೆ ತರಾತುರಿಯಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದೀರಿ ಎಂದು ನಿರ್ದೇಶಕರ ನಡವಳಿಕೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.

ಹೆಚ್ಚುವರಿ ಸೀಟು ಕೊಡಿಸಿದ್ದೇವೆ ಎಂದು ನನಗೆ ಅಭಿನಂದನೆ ಬೇಕಿಲ್ಲ, ನನ್ನ ಕರ್ತವ್ಯ ನಾನು ಮಾಡಿದ್ದೇನೆ, ಜೆಪಿ ನಡ್ದಾ ಅವರ ಸಹಕಾರದಿಂದ ಇದು ಸಾಧ್ಯವಾಗಿದೆ. ಅನೇಕರ ಒತ್ತಾಸೆ ಇದರಲ್ಲಿ ಅಡಗಿದೆ. ಹೀಗಿದ್ದರೂ ಈ ಸಂಘದ ಕಾರ್ಯಕ್ರಮಕ್ಕೆ ಬರಲು ನನಗೆ ಮನಸ್ಸಿರಲಿಲ್ಲ, ಸಮಾಜಕ್ಕಾಗಿ ಬಂದಿದ್ದೇನೆ, ಸಮಾಜದ ಮಕ್ಕಳಿಗಾಗಿ ಬಂದಿದ್ದೇನೆ ಎಂದು ಹೇಳಿದರು ಕುಮಾರಸ್ವಾಮಿ ಅವರು.

ಬೇರೆ ಸಮಾಜಗಳ ಸಂಘಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನು ನೋಡಿ, 35 ನಿರ್ದೇಶಕರು ಇದ್ದೀರಿ, ನಿಸ್ವಾರ್ಥವಾಗಿ ಕೆಲಸ ಮಾಡಿ. ನೀವು ಸರಿಯಾಗಿ ಕೆಲಸ ಮಾಡಿದ್ದಿದ್ದರೆ ಸಂಘ ನಂಬರ್ ವನ್ ಆಗುತ್ತಿತ್ತು. ಆದರೆ, ಇಲ್ಲಿ ಏನೇನು ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. ಮೊದಲು ಗುಂಪುಗಾರಿಕೆ ಬಿಡಿ, ಒಂದು ಕುಟುಂಬದ ರೀತಿಯಲ್ಲಿ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.

ಸಂಶೋಧನೆಗೆ ಹೆಚ್ಚು ಒತ್ತು ಕೊಡಿ

ಕಿಮ್ಸ್ ಆಸ್ಪತ್ರೆಯಲ್ಲಿ ಒಳ್ಳೆಯ ತಜ್ಞ ವೈದ್ಯರು ಇದ್ದೀರಿ. ವೈದ್ಯ ಸೇವೆಯ ಜತೆಗೆ ಸಂಶೋಧನೆ ಮತ್ತು ಅಭಿವೃದ್ದಿ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಕಳೆದ ಬಾರಿ ನಾನು ಸಿಎಂ ಆಗಿದ್ದಾಗ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಗೆ ಹೆಚ್ಚು ಒತ್ತು ನೀಡಿದ್ದೆ. ಕಿದ್ವಾಯಿ ಆಸ್ಪತ್ರೆಗೆ ಅನುದಾನ ಕೊಟ್ಟು ಬಡವರಿಗೆ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದೆ. ಆದರೆ ಅಲ್ಲಿ ನಿತ್ಯವೂ ಸಣ್ಣಪುಟ್ಟ ಔಷಧಿಗಳನ್ನು ಹೊರಗೆ ಬರೆದುಕೊಡುತ್ತಿದ್ದಾರೆ ಎನ್ನುವ ಮಾಹಿತಿ ನನಗೆ ಬಂದಿದೆ. ಇದು ನನಗೆ ಬಹಳ ನೋವುಂಟು ಮಾಡಿದೆ. ಈ ಬಗ್ಗೆ ವೈದ್ಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಗಮನಕ್ಕೂ ತಂದಿದ್ದೇನೆ ಎಂದು ಹೇಳಿದರು.

ಬೆಂಗಳೂರು ವೈದ್ಯ ಕಾಲೇಜು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ 20% ಹೆಚ್ಚು ಶುಲ್ಕ ವಿಧಿಸಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳ ಚಿಕಿತ್ಸೆ ದುಬಾರಿ ಆಗುತ್ತಿದೆ. ಇದು ನಿಜಕ್ಕೂ ನೋವಿನ ಸಂಗತಿ, ಬಡ ಜನರಿಗೆ ಚಿಕಿತ್ಸೆ ಪಡೆಯಲು ಎಲ್ಲಿ ಸಾಧ್ಯ ಆಗುತ್ತದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಮಹಾಸ್ವಾಮೀಜಿ ಅವರು, ಆದಿಚುಂಚನಗಿರಿ ಮಹಾಸಂಸ್ಥಾನದ ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

ಇದನ್ನೂ ಓದಿ: ಮನೆಯ ದಕ್ಷಿಣ ದಿಕ್ಕಿನಲ್ಲಿ ಈ ವಸ್ತುಗಳನ್ನು ತಪ್ಪಿಯೂ ಇಡಬೇಡಿ, ಬಡತನ ವಕ್ಕರಿಸುವುದು; ಕಷ್ಟ ತಪ್ಪಿದ್ದೇ ಅಲ್ಲ !

ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿದರು. ಒಕ್ಕಲಿಗರ ಸಂಘದ ಅಧ್ಯಕ್ಷ ಸಿ ಎನ್ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News