ನವದೆಹಲಿ: ಬಿಜೆಪಿ ಸಂಸದನಾಗಿದ್ದುಕೊಂಡೇ ಪ್ರಧಾನಿ ಮೋದಿ ವಿರುದ್ಧ ಸಮರ ಸಾರಿದ್ದ ಹಿರಿಯ ನಾಯಕ ಶತ್ರುಘ್ನ ಸಿನ್ಹಾಗೆ ಈ ಬಾರಿ ಪಾಟ್ನಾ ಸಾಹಿಬ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುತ್ತಿಲ್ಲ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಶತ್ರುಘ್ನ ಸಿನ್ಹಾ ತಮ್ಮ ಹರಿತ ಟ್ವೀಟ್ ಗಳಿಂದ ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದ್ದರು.ಅಷ್ಟೇ ಅಲ್ಲದೆ ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜೀ ಆಯೋಜಿಸಿದ್ದ ಪ್ರತಿಪಕ್ಷಗಳ ರ್ರ್ಯಾಲಿಯಲ್ಲಿ ಭಾಗವಹಿಸಿ ಬಿಜೆಪಿ ವಿರುದ್ಧ ಆಕ್ರೋಶ್ ವ್ಯಕ್ತಪಡಿಸಿದ್ದರು.ಸಿನ್ಹಾರ ಈ ನಡೆ ಬಿಜೆಪಿ ಕೇಂದ್ರ ನಾಯಕರ ಕಣ್ಣು ಕೆಂಪಾಗಿಸಿತ್ತು.
ಸದ್ಯ ಮೂಲಗಳು ಹೇಳುವಂತೆ ಬಿಜೆಪಿ ರವಿ ಶಂಕರ್ ಪ್ರಸಾದ್ ಅವರಿಗೆ ಪಾಟ್ನಾ ಸಾಹಿಬ್ ಕ್ಷೇತ್ರದ ಟಿಕೆಟ್ ನೀಡಬಹುದು ಎನ್ನಲಾಗಿದೆ.ಇನ್ನೊಂದೆಡೆಗೆ ಸಿನ್ಹಾ ಸ್ವತಂತ್ರ ಅಭ್ಯರ್ಥಿ ಅಥವಾ ಕಾಂಗ್ರೆಸ್-ಆರ್ಜೆಡಿ ಮಹಾಮೈತ್ರಿಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಬಹುದು ಎಂದು ಹೇಳಲಾಗಿದೆ.
ಇತ್ತೀಚಿಗೆ ಸಿನ್ಹಾ "ಚುನಾವಣೆ ವಿಷಯದ ಬಗ್ಗೆ ಹೇಳುವುದಾದರೆ ಪಾಟ್ನಾ ನನ್ನ ಮೊದಲ ,ಎರಡನೇ ಹಾಗೂ ಕೊನೆಯ ಆಯ್ಕೆ ಎಂದು ಇತ್ತೀಚಿಗೆ ಹೇಳಿದ್ದರು.ಆ ಮೂಲಕ ಮತ್ತೊಮ್ಮೆ ಚುನಾವಣೆಗೆ ನಿಲ್ಲವು ಸೂಚನೆಯನ್ನು ನೀಡಿದ್ದರು.