ನವದೆಹಲಿ: ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್(JeM) ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನನ್ನು 'ಜಾಗತಿಕ ಭಯೋತ್ಪಾದಕ' ಪಟ್ಟಿಗೆ ಸೇರಿಸಲು ಸತತ ನಾಲ್ಕನೇ ಬಾರಿಗೆ ಚೀನಾ ಅಡ್ಡಿಪಡಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವ ಪ್ರಸ್ತಾವನೆಯನ್ನು ಚೀನಾ ತಾಂತ್ರಿಕವಾಗಿ ನಿಷೇಧಿಸಿತು. 67 ಅಲ್ ಖೈದಾ ನಿರ್ಬಂಧಗಳ ಸಮಿತಿ' ಅಡಿಯಲ್ಲಿ, ಮಸೂದ್ ಅಜರ್ನನ್ನು ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾಪವನ್ನು ಫೆಬ್ರವರಿ 27 ರಂದು ಫ್ರಾನ್ಸ್, ಬ್ರಿಟನ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ತಂದಿದ್ದವು.
ಈ ಹಿಂದೆ 2009, 2016 ಹಾಗೂ 2017ರಲ್ಲಿ ಇದೇ ಪ್ರಸ್ತಾಪವನ್ನು ಭಾರತ ಸೇರಿ ಅನೇಕ ರಾಷ್ಟ್ರಗಳು ಮುಂದಿಟ್ಟಾಗ ಅಡ್ಡಗಾಲು ಹಾಕಿದ್ದ ಚೀನಾ ಈ ಬಾರಿಯೂ ತನ್ನ ಚಾಳಿ ಮುಂದುವರೆಸಿದ್ದು, ಉಗ್ರ ಸಂಘಟನೆ ವಿರುದ್ಧ ಪ್ರಸ್ತಾವನೆ ಒಪ್ಪಿಕೊಳ್ಳಲು ಮತ್ತೊಮ್ಮೆ ಹಿಂದೇಟು ಹಾಕಿದೆ.
ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ವಿರೋಧ ವ್ಯಕ್ತಪಡಿಸಿರುವ ಚೀನಾ, ಅಜರ್ನನ್ನು ಗ್ಲೋಬಲ್ ಟೆರರಿಸ್ಟ್ ಪಟ್ಟಿಗೆ ಸೇರಿಸಲು ಮತ್ತಷ್ಟು ಸಾಕ್ಷಿ ಮತ್ತು ಸಮಯಾವಕಾಶದ ಅವಶ್ಯಕತೆ ಇದೇ ಎಂದು ತಿಳಿಸಿದೆ.