ನವದೆಹಲಿ: ಪಾಕಿಸ್ತಾನದ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಇಂದು ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯ ಸಮಯದಲ್ಲಿ ವಾಘಾ ಗಡಿ ಮೂಲಕ ಭಾರತಕ್ಕೆ ಮರಳಲಿದ್ದಾರೆ. ಪಾಕ್ ವಶದಿಂದ ಬಿಡುಗಡೆಗೊಂಡು ಭಾರತಕ್ಕೆ ಆಗಮಿಸುತ್ತಿರುವ ಅಭಿನಂದನ್ ಅವರನ್ನು ಭಾರತೀಯ ವಾಯು ಪಡೆಯ ನಿಯೋಗ ಸ್ವೀಕರಿಸಲಿದೆ. ಈ ವೇಳೆ ಮಗನನ್ನು ಎದುರುಗೊಳ್ಳಲು ಅಭಿನಂದನ್ ತಂದೆ ತಾಯಿ ಕೂಡ ಚೆನ್ನೈನಿಂದ ದೆಹಲಿಗೆ ತಲುಪಿದ್ದು, ನವದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುತ್ತಲೇ ಪೈಲಟ್ ಅಭಿನಂದನ್ ಪಾಲಕರು ಕೂಡ ವಿಮಾನದಲ್ಲಿರುವ ಕುರಿತು ಪ್ರಕಟಿಸಿದರು. ತಕ್ಷಣವೇ ಎದ್ದುನಿಂತ ಇತರೆ ಪ್ರಯಾಣಿಕರು, ಚಪ್ಪಾಳೆ ತಟ್ಟುತ್ತಾ ವಿಮಾನದಿಂದ ಮೊದಲಿಗೆ ಕೆಳಗಿಳಿಯಲು ಅವರಿಗೆ ಅವಕಾಶ ಮಾಡಿಕೊಟ್ಟು ಗೌರವಿಸಿದರು.
Wing Commander #AbhinandanVartaman 's parents reached Delhi last night from Chennai. This was the scene inside the flight when the passengers realized his parents were onboard. They clapped for them, thanked them & made way for them to disembark first. #Respect #AbhinandanMyHero pic.twitter.com/P8USGzbgcp
— Paul Oommen (@Paul_Oommen) March 1, 2019
ಸಹ ಪ್ರಯಾಣಿಕರ ಗೌರವವಂದನೆ ಸ್ವೀಕರಿಸಿದ ವೀರ ಪುತ್ರನ ಪೋಷಕರು ದೆಹಲಿಯಿಂದ ವಾಘಾ ಬಾರ್ಡರ್ ಗೆ ಪ್ರಯಾಣ ಬೆಳೆಸಿದ್ದಾರೆ.
ಭಾರತದ ಹೆಮ್ಮೆಯ ಪುತ್ರ ಅಭಿನಂದನ್ ವರ್ಧಮಾನ್ ಇಂದು ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿ ಬರುತ್ತಿದ್ದು, ಅವರನ್ನು ಸ್ವಾಗತಿಸಲು ಸಕಲ ಸಿದ್ಧತೆ ನಡೆದಿದೆ.
ಮಾಹಿತಿಯ ಪ್ರಕಾರ, ಪಾಕ್ ಅಧಿಕಾರಿಗಳು ಅಭಿನಂದನ್ ಅವರನ್ನು ರಾವಲ್ಪಿಂಡಿಯಿಂದ ಲಾಹೋರಿಗೆ ಕರೆತಂದು ಜಿನಿವಾ ಒಪ್ಪಂದದ ನಿಯಮಾವಳಿ ಪ್ರಕಾರ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಗೆ ಒಪ್ಪಿಸಲಿದ್ದಾರೆ ಎನ್ನಲಾಗಿದೆ.